ಮಂಗಳೂರು: ಈ ಬಾರಿಯ ಚುನಾವಣೆ ಕೋಮುಗಳ ನಡುವೆ ಸಂಘರ್ಷ ಅಲ್ಲ ಶ್ರೀಮಂತ ಹಾಗೂ ಬಡವರ ನಡುವಿನ ಸಂಘರ್ಷ. 10% ಇರುವ ಶ್ರೀಮಂತರ ಪರ ಅವರಿದ್ದರೆ, 90% ಇರುವ ಬಡವರ ಪರ ನಾವಿದ್ದೇವೆ. ಆದ್ದರಿಂದ ಜನಸಾಮಾನ್ಯರು ನಿಮ್ಮ ಜೊತೆ ಇರುವ ನಮಗೆ ಮತ ನೀಡಬೇಕು ಎಂದು ಮುನೀರ್ ಕಾಟಿಪಳ್ಳ ಮನವಿ ಮಾಡಿದ್ದಾರೆ.
ನಗರದ ಬೈಕಂಪಾಡಿಯ ಅಂಗರಗುಂಡಿಯಲ್ಲಿ ಚುನಾವಣಾ ಪ್ರಚಾರ ಸಭೆಯನ್ನು ಉದ್ದೇಶಿಸಿ ಮಾತನಾಡಿದ ಅವರು, ಪ್ರಧಾನಿ ನರೇಂದ್ರ ಮೋದಿ ಆಡಳಿತದಿಂದ ಶ್ರೀಮಂತರು ಮತ್ತಷ್ಟು ಶ್ರೀಮಂತರಾದರು, ಬಡವರು ಮತ್ತಷ್ಟು ಬಡವರಾದರು. ನಾವು ನರೇಂದ್ರ ಮೋದಿಯವರ ಶ್ರೀಮಂತರ ಪರವಾದ ಆರ್ಥಿಕ ನೀತಿಗಳನ್ನು ನೋಡುತ್ತಿದ್ದೇವೆ. ಅದಕ್ಕೂ ಮುಂಚೆ ಮನಮೋಹನ್ ಸಿಂಗರ ಕಾಂಗ್ರೆಸ್ ಸರ್ಕಾರ ಅದಕ್ಕೆ ಮುನ್ನುಡಿ ಬರೆದಿತ್ತು. ಅವರು ಪರಿಚಯಿಸಿದ ಆರ್ಥಿಕ ನೀತಿಗಳಿಂದ ಶ್ರೀಮಂತರು ಮತ್ತಷ್ಟು ಶ್ರೀಮಂತರಾದರು, ಬಡವರು ಮತ್ತಷ್ಟು ಬಡವರಾದರು. ಮೋದಿ ತಮ್ಮ ಸಂಕಟಗಳಿಗೆ ಪರಿಹಾರ ದೊರಕಿಸುತ್ತಾರೆಂದು ನಂಬಿದ ಜನ ಅವರಿಗೆ ಸಂಪೂರ್ಣ ಬಹುಮತ ನೀಡಿ ಗೆಲ್ಲಿಸಿದರು. ಆದರೆ ಆಗಿದ್ದೇ ಬೇರೆ ಎಂದು ಅಸಮಾಧಾನ ವ್ಯಕ್ತಪಡಿಸಿದರು.
2 ಕೋಟಿ ಉದ್ಯೋಗ ಸೃಷ್ಟಿ ಮಾಡುತ್ತೇವೆ ಎಂದು ಮೋದಿ ಹೇಳಿದ್ದರು. ಆದರೆ ನೋಟ್ ಬ್ಯಾನ್ ಪರಿಣಾಮವಾಗಿ 1 ಕೋಟಿಯಷ್ಟು ಜನ ಇರುವ ಉದ್ಯೋಗವನ್ನೇ ಕಳೆದುಕೊಂಡರು. ಕಪ್ಪು ಹಣ ತಂದು ಪ್ರತಿಯೊಬ್ಬರ ಖಾತೆಯಲ್ಲೂ 15 ಲಕ್ಷ ಹಾಕುವ ಭರವಸೆ ನೀಡಿದ್ದರು. ಈಗ ಕಪ್ಪು ಹಣ ತರುವುದಿರಲಿ, ವಿಜಯ್ ಮಲ್ಯ, ನೀರವ್ ಮೋದಿಯಂಥ ಶ್ರೀಮಂತ ಉದ್ಯಮಿಗಳು ನಮ್ಮ ದೇಶದ ಬ್ಯಾಂಕುಗಳಲ್ಲಿರುವ ಹಣವನ್ನೇ ಗಂಟು ಕಟ್ಟಿಕೊಂಡು ದೇಶ ತೊರೆದು ಓಡಿ ಹೋಗುತ್ತಿದ್ದಾರೆ. ಇದು ಮೋದಿ ವೈಫಲ್ಯವನ್ನು ಎತ್ತಿ ತೋರಿಸುತ್ತದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಯುವಜನರಿಗಾಗಿ ಉದ್ಯೋಗ ಸೃಷ್ಟಿಸುವ ಬದಲು ಅವರನ್ನು ತಮ್ಮ ರಾಜಕೀಯಕ್ಕೆ ಬಳಸಿಕೊಳ್ಳಲಾಗುತ್ತಿದೆ. ಕ್ರಿಮಿನಲ್ ಚಟುವಟಿಕೆಗಳಲ್ಲಿ ಅವರನ್ನು ತೊಡಗಿಸಲಾಗುತ್ತಿದೆ. ಯುವಜನರು ಮಾದಕ ದ್ರವ್ಯಗಳ ಜಾಲದಲ್ಲಿ ಸಿಲುಕುತ್ತಿದ್ದಾರೆ. ಈ ಸಮಸ್ಯೆಗಳ ಬಗ್ಗೆ ಕಾಂಗ್ರೆಸ್ ಮತ್ತು ಬಿಜೆಪಿ ಗಮನವನ್ನೇ ಹರಿಸುತ್ತಿಲ್ಲ. ಯುವಜನರು ಅವರು ನೀಡುವ ಆಮಿಶಗಳಿಗೆ ಬಲಿಯಾಗಬಾರದು. ಹಣಕ್ಕಾಗಿ ತಮ್ಮ ಸ್ವಾಭಿಮಾನವನ್ನು ಮಾರಿಕೊಳ್ಳಬಾರದು ಎಂದು ಕರೆ ನೀಡಿದರು.

