040518_manojsinha

ಬೈಂದೂರು: ಬಿಜೆಪಿ ಈಗಾಗಲೇ ದೇಶದ 20 ರಾಜ್ಯಗಳಲ್ಲಿ ಅಧಿಕಾರ ಹಿಡಿದಿದೆ. ಕರ್ನಾಟಕದಲ್ಲಿ ಆ ಪ್ರವೃತ್ತಿ ಮುಂದುವರಿಯುವುದು ಖಚಿತ ಎಂದು ಕೇಂದ್ರ ರೈಲ್ವೆ ಮತ್ತು ಸಂಪರ್ಕ ರಾಜ್ಯ ಸಚಿವ ಮನೋಜ್ ಸಿನ್ಹಾ ವಿಶ್ವಾಸ ವ್ಯಕ್ತಪಡಿಸಿದ್ದಾರೆ.

ಶುಕ್ರವಾರ ಬೈಂದೂರು ಬಿಜೆಪಿ ವಲಯ ಕಚೇರಿಯಲ್ಲಿ ಸುದ್ದಿಗೋಷ್ಠಿ ನಡೆಸಿ ಅವರು ಮಾತನಾಡಿದರು.

ಕೇಂದ್ರದ ನರೇಂದ್ರ ಮೋದಿ ಸರ್ಕಾರ ಕಳೆದ ನಾಲ್ಕು ವರ್ಷ ದೇಶಕ್ಕೆ ಉತ್ತಮ ಆಡಳಿತ ನೀಡಿದೆ. ಗರಿಷ್ಠ ಸಾಧ್ಯ ಅಭಿವೃದ್ಧಿ ನಡೆಸಿದೆ. ಆದುದರಿಂದ ಇಲ್ಲಿನ ಜನರು ಈ ಬಾರಿಯ ಚುನಾವಣೆಯಲ್ಲಿ ಬಿಜೆಪಿಗೆ ಮತನೀಡಿ ಅದರ 150 ಸ್ಥಾನಗಳ ಗೆಲುವಿನ ಗುರಿ ತಲುಪಿಸಬೇಕು ಎಂದು ಹೇಳಿದರು.

ಕರ್ನಾಟಕದ ಕಾಂಗ್ರೆಸ್ ಸರ್ಕಾರ ಎಲ್ಲಾ ರಂಗಗಳಲ್ಲಿ ವಿಫಲವಾಗಿದೆ. ಇಲ್ಲಿನ ಕಾನೂನು ಸ್ಥಿತಿ ಹದಗೆಟ್ಟಿದೆ. ಉತ್ತಮ ಅಧಿಕಾರಿಗಳು ಹೊರರಾಜ್ಯಗಳಿಗೆ ವರ್ಗಾವಣೆಯಾಗಿ ಹೋಗುತ್ತಿದ್ದಾರೆ ಅಥವಾ ರಾಜೀನಾಮೆ ನೀಡುತ್ತಿದ್ದಾರೆ. ಮಹಿಳೆಯರು, ಮಕ್ಕಳ ಮೇಲೆ ಅತ್ಯಾಚಾರ ನಡೆಯುತ್ತಿದೆ. ಅಭಿವೃದ್ಧಿಗಾಗಿ ಕೇಂದ್ರ ನೀಡಿದ ಅನುದಾನ ದುರ್ಬಳಕೆಯಾಗುತ್ತಿದೆ ಎಂದು ಆರೋಪಿಸಿದರು.

ಕರ್ನಾಟಕದಲ್ಲಿ ನಾಲ್ಕು ವರ್ಷಗಳಲ್ಲಿ 300 ಕಿಮೀ ಹೊಸ ಮಾರ್ಗ ನಿರ್ಮಾಣದ ಜತೆಗೆ 252 ಕಿಮೀ ದ್ವಿಪಥಗೊಳಿಸಲಾಗಿದೆ, 665 ಕಿಮೀ ವಿದ್ಯುತ್ ಮಾರ್ಗವಾಗಿ ಪರಿವರ್ತಿಸಲಾಗಿದೆ. 41 ಮೇಲ್ಸೇತುವೆ ನಿರ್ಮಿಸಲಾಗಿದೆ. ರೈಲ್ವೆಯಲ್ಲಿ ಪ್ರಯಾಣಿಕರಿಗೆ ಹೆಚ್ಚು ಸೌಲಭ್ಯ ಕಲ್ಪಿಸಲಾಗಿದೆ ಎಂದರು.

ಈ ಸಂದರ್ಭದಲ್ಲಿ ಬಿ. ಎಂ. ಸುಕುಮಾರ ಶೆಟ್ಟಿ, ಉಸ್ತುವಾರಿ ಭಾರತಿ ಶೆಟ್ಟಿ, ನವೀನಚಂದ್ರ ಉಪ್ಪುಂದ ಮತ್ತಿತರರಿದ್ದರು.

 

By suddi9

Leave a Reply

Your email address will not be published. Required fields are marked *