ಮಂಗಳೂರು: ಜೈಲು ಸೇರಿದ ಯಡಿಯೂರಪ್ಪರವರನ್ನು ಮತ್ತೆ ಮುಖ್ಯಮಂತ್ರಿ ಅಭ್ಯರ್ಥಿಯನ್ನಾಗಿ ಘೋಷಣೆ ಮಾಡಿರುವುದು ಬಿಜೆಪಿಯ ಅಭಿವೃದ್ಧಿ ಚಿಂತನೆಗೆ ಹಿಡಿದ ಕೈಗನ್ನಡಿಯಾಗಿದೆ ಎಂದು ಉತ್ತರ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಮೊಯ್ದಿನ್ ಬಾವಾ ಟೀಕಿಸಿದ್ದಾರೆ.
ಕಾಂಗ್ರೆಸ್ ಕಾರ್ಯಕರ್ತರ ಸಭೆಯಲ್ಲಿ ಮಾತನಾಡಿದ ಅವರು, ಜನತೆ ಆಶೀರ್ವಾದ ನೀಡಿ ಅಧಿಕಾರ ನೀಡಿದ ನಂತರ ಅದಕ್ಕೆ ಪ್ರತ್ಯುತ್ತರವಾಗಿ ಅಭಿವೃದ್ಧಿ ಕೆಲಸವನ್ನು ಮಾಡಬೇಕು. ಅದು ಬಿಟ್ಟು ಪರಸ್ಪರ ಕಚ್ಚಾಟ ನಡೆಸಿಕೊಂಡು, ಪರಸ್ಪರ ಕಾಲು ಎಳೆದುಕೊಂಡು ಭ್ರಷ್ಟಾಚಾರ ಮಾಡುವುದಲ್ಲ. ಕಳಂಕಿತ ವ್ಯಕ್ತಿಯನ್ನು ಮತ್ತೆ ಮುಖ್ಯಮಂತ್ರಿ ಅಭ್ಯರ್ಥಿ ಎಂದು ಘೋಷಣೆ ಮಾಡುವ ಮೂಲಕ ಬಿಜೆಪಿಯ ಇನ್ನೊಂದು ಮುಖ ಬಯಲಾಗಿದೆ. ಇದನ್ನು ಜನತೆ ಅರಿತುಕೊಳ್ಳಬೇಕು ಎಂದು ಕಿಡಿಕಾರಿದರು.
ರಾಜ್ಯದಲ್ಲಿ ಬಿಜೆಪಿಗೆ ಒಳಜಗಳದಿಂದಾಗಿ ಅಧಿಕಾರ ನಡೆಸಲು ಸಾಧ್ಯವಾಗಲಿಲ್ಲ. ಇನ್ನು ಅವರಿಂದ ಅನುದಾನ ಬಿಡುಗಡೆ, ರಾಜ್ಯದ ಅಭಿವೃದ್ಧಿ ಸಾಧ್ಯವೇ ಎಂದು ಪ್ರಶ್ನಿಸಿದರು.
ಸಭೆಯಲ್ಲಿ ಹಂಗಾಮಿ ಸುರತ್ಕಲ್ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ದೀಪಕ್ ಪೂಜಾರಿ, ಕೆ. ಸದಾಶಿವ ಶೆಟ್ಟಿ, ಬಶೀರ್ ಬೈಕಂಪಾಡಿ, ಗೋವರ್ದನ್ ಶೆಟ್ಟಿಗಾರ್, ವಿಜಯ್ ಆಚಾರ್ಯ, ಮೆಹಸೂಫ್ ಮತ್ತಿತರರು ಉಪಸ್ಥಿತರಿದ್ದರು.

