ಕೈಕಂಬ: ಸಿಎಂ ಸಿದ್ದರಾಮಯ್ಯ ಈ ಬಾರಿ ಎರಡು ಕ್ಷೇತ್ರದಲ್ಲಿ ಚುನಾವಣೆಗೆ ನಿಂತಿದ್ದು, ಎರಡರಲ್ಲೂ ಸೋಲು ಕಾಣಲಿದ್ದಾರೆ ಎಂದು ಬಿಜೆಪಿ ಮುಖಂಡ ಹರಿಕೃಷ್ಣ ಬಂಟ್ವಾಳ ಭವಿಷ್ಯ ನುಡಿದಿದ್ದಾರೆ.
ಬಿಜೆಪಿ ಗುರುಪುರ ಮಹಾಶಕ್ತಿ ಕೇಂದ್ರ ವತಿಯಿಂದ ಇಲ್ಲಿನ ಗಣೇಶ್ ಕಟ್ಟೆಯ ಬಳಿ ಇತ್ತೀಚೆಗೆ ನಡೆದ ಸಾರ್ವಜನಿಕ ಸಭೆಯಲ್ಲಿ ಭಾಗವಹಿಸಿ ಅವರು ಮಾತನಾಡಿದರು.
ಮೊಹಿನುದ್ದೀನ್ ಬಾವಾ ಅವರು ನಿಜವಾಗಿ ತನ್ನ ಕ್ಷೇತ್ರವನ್ನು ಅಭಿವೃದ್ಧಿ ಮಾಡಿದ್ದರೆ ಯಾಕಾಗಿ ಇಂದು ಅವರು ಮನೆಮನೆಗೆ ತೆರಳಿ ಸೀರೆ ವಿತರಣೆ ಮಾಡಿದ್ದಾರೆ ಎಂದು ಪ್ರಶ್ನಿಸಿದರು.
ಕಾಂಗ್ರೆಸಿಗರು ಬಿಜೆಪಿಯನ್ನು ಮುಸ್ಲಿಂ-ಕ್ರೈಸ್ತ ವಿರೋಧಿ ಎಂದು ಬಿಂಬಿಸುತ್ತಿದ್ದಾರೆ. ಆದರೆ ದೇಶದಲ್ಲಿರುವ ಮುಸ್ಲಿಮರು ಹಾಗೂ ಕ್ರೈಸ್ತರು ಬಿಜೆಪಿಯನ್ನು ಯಾಕೆ ಗೆಲ್ಲಿಸಿದ್ದಾರೆ ಎಂದು ಕಾಂಗ್ರೆಸಿಗರು ಅರ್ಥ ಮಾಡಿಕೊಳ್ಳಬೇಕು ಎಂದವರು, ಬಿಜೆಪಿ ಮೊಹಮ್ಮದ್ ಪೈಗಂಬರ್ ಸಂಸ್ಕೃತಿಗೆ ಗೌರವ ಕೊಡುತ್ತದೆ. ಆದರೆ ಬಿನ್ ಲಾಡನ್ ಸಂಸ್ಕೃತಿಗೆ ಗೌರವ ನೀಡುವುದಿಲ್ಲ ಎಂದು ಹೇಳಿದರು.
ನರೇಂದ್ರ ಮೋದಿ ಅವರು ಕುಡಿಯುವ ಚಹಾಕ್ಕೂ ಸ್ವಂತ ಖರ್ಚು ಮಾಡುತ್ತಾರೆ. ಆದರೆ ಸಿದ್ದರಾಮಯ್ಯ ಬಿಸ್ಕಿಟ್ ಹಾಗೂ ಚಾಹಕ್ಕೆ ಒಂದು ಕೋಟಿ ರೂ. ಖರ್ಚು ಮಾಡಿದ್ದಾರೆ ಎಂದು ಆರೋಪಿಸಿದರು.
ಸಭೆಯಲ್ಲಿ ಬಿಜೆಪಿ ಮುಖಂಡರಾದ ವಿಶ್ವನಾಥ ಶೆಟ್ಟಿ ಕೊಳಂಬೆ, ಶಿವಪ್ಪ ಬಂಗೇರಾ, ರಾಜೀವ ಶೆಟ್ಟಿ ಉಳಾಯಿಬೆಟ್ಟು, ದೋಗು ಪೂಜಾರಿ, ರುಕ್ಮಯ್ಯ ಪೂಜಾರಿ, ಅಮೃತ್‍ಪಾಲ್, ಜನಾರ್ದನ ಗೌಡ ರೂಪೇಶ್ ಉಪಸ್ಥಿತರಿದ್ದರು.


