ಗುರುಪುರ: ಇಲ್ಲಿನ ಕಾರಮೊಗರು ಶ್ರೀ ಅಗ್ನಿದುರ್ಗಾ ಗೋಪಾಲಕೃಷ್ಣ ದೇವಸ್ಥಾನದಲ್ಲಿ ಮಂಗಳವಾರ ವಾರ್ಷಿಕ ಜಾತ್ರಾ ಮಹೋತ್ಸವ ವಿಜೃಂಬಣೆಯಿಂದ ಜರಗಿತು.
ಇಂದು ಬೆಳಗ್ಗಿನಿಂದ ದೇವರಿಗೆ ವಿಶೇಷ ಪೂಜೆಗಳು ನಡೆದವು. ಬಳಿಕ ಗುರುಪುರದ ಹಿಂದೂ ಭಜನಾ ಮಂಡಳಿ ಸದಸ್ಯರಿಂದ ಭಕ್ತಿ ಸಂಭ್ರಮ ನಡೆಯಿತು.
ಮಧ್ಯಾಹ್ನ 2ಕ್ಕೆ ತೆಂಕು ಮತ್ತು ಬಡಗುತಿಟ್ಟು ಯಕ್ಷ ಕಲಾವಿದರಿಂದ `ಯಕ್ಷಗಾನ ವೈಭವ’ ನೆರವೇರಿತು. ಯಕ್ಷ ವೈಭವದಲ್ಲಿ ಭಾಗವತರಾಗಿ ಜಾನ್ಸಲೆ ರಾಘವೇಂದ್ರ ಆಚಾರ್ಯ, ಪ್ರಸಾದ ಕುಮಾರ್ ಮೊಗಬೆಟ್ಟು, ಗಿರೀಶ ರೈ ಕಕ್ಕೆಪದವು ಹಾಗೂ ರವಿಚಂದ್ರ ಕನ್ನಡಿಕಟ್ಟೆ ಹಾಗೂ ಹಿರಿಯ ಯಕ್ಷ ಕಲಾವಿದರು ಪಾಲ್ಗೊಂಡಿದ್ದರು.
ಶಾಸಕ ಭೇಟಿ: ಜಾತ್ರೋತ್ಸವದಲ್ಲಿ ಪಾಲ್ಗೊಂಡು ದೇವರ ಆಶೀರ್ವಾದ ಪಡೆದ ಸ್ಥಳೀಯ ಶಾಸಕ ಹಾಗೂ ಮಂಗಳೂರು ಉತ್ತರ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಮೊಯಿದ್ದೀನ್ ಬಾವ ಭಕ್ತಾದಿಗಳೊಂದಿಗೆ ಆತ್ಮೀಯ ಮಾತುಕತೆ ನಡೆಸಿದರು.
ಈ ವೇಳೆ ಶಾಸಕ ಬಾವಾ ಅವರು ದ್ವಿತೀಯ ಪಿಯು ಪರೀಕ್ಷೆಯಲ್ಲಿ ಶೇ. 97ರಷ್ಟು ಅಂಕ ಗಳಿಸಿದ ಗುರುಪುರ ತಾರಿಕರಿಯದ ಜಗದೀಶ ಶೆಟ್ಟಿ ಮತ್ತು ಸುಜಾತಾ ಶೆಟ್ಟಿಯವರ ಪುತ್ರಿ ಕೃತಿಕಾ ಅವರಿಗೆ ಶಾಲು ಹೊದಿಸಿ ಸನ್ಮಾನಿಸಿದರು.
ಕಾರ್ಯಕ್ರಮದಲ್ಲಿ ಉದ್ಯಮಿ ಯತಿರಾಜ್ ಶೆಟ್ಟಿ, ದೇವಸ್ಥಾನದ ಮೊಕ್ತೇಸರ ಡಾ. ರವಿರಾಜ ಶೆಟ್ಟಿ, ಕಾಂಗ್ರೆಸ್ ಮುಖಂಡ ಗಿರೀಶ ಆಳ್ವ, ಜಿಪಂ ಸದಸ್ಯ ಯು.ಪಿ.ಇಬ್ರಾಹಿಂ, ತಾಪಂ ಸದಸ್ಯ ಸಚಿನ್ ಅಡಪ, ಗುರುಪುರ ಗ್ರಾಪಂ ಉಪಾಧ್ಯಕ್ಷ ಉದಯ ಭಟ್, ಸದಸ್ಯರಾದ ಸದಾಶಿವ ಶೆಟ್ಟಿ, ಶೋಭಾ, ಮೋಹಿನಿ, ವಲಯ ಕಾಂಗ್ರೆಸ್ ಅಧ್ಯಕ್ಷ ಪುರುಷೋತ್ತಮ ಮಲ್ಲಿ ಜಗದೀಶ ಶೆಟ್ಟಿ, ಮಮತಾ ಜೆ ಶೆಟ್ಟಿ ಉಪಸ್ಥಿತರಿದ್ದರು.




