ಮಂಗಳೂರು: ಮಂಗಳೂರು ನಗರ ದಕ್ಷಿಣ ವಿಧಾನಸಭಾ ಕ್ಷೇತ್ರದಲ್ಲಿ ಬಹುಸಂಖ್ಯಾತರನ್ನು ಓಲೈಸಲು ಬಿಜೆಪಿ ಹಾಗೂ ಅಲ್ಪಸಂಖ್ಯಾತರ ಓಲೈಕೆಗೆ ಕಾಂಗ್ರೆಸ್ ಪ್ರಯತ್ನಿಸುತ್ತಿದ್ದೆ. ಇವರಿಬ್ಬರ ಸ್ವಾರ್ಥ ರಾಜಕಾರಣಕ್ಕೆ ಮಂಗಳೂರಿನ ಅಮಾಯಕ, ಬಡ ಹಿಂದುಳಿದ ಹಾಗೂ ಅಲ್ಪಸಂಖ್ಯಾತ ಯುವಕರು ಬಲಿಪಶುಗಳಾಗುತ್ತಿದ್ದಾರೆ ಎಂದು ಸಿಪಿಐ(ಎಂ) ಅಭ್ಯರ್ಥಿ ಸುನೀಲ್‍ಕುಮಾರ್ ಬಜಾಲ್ ಕಳವಳ ವ್ಯಕ್ತಪಡಿಸಿದ್ದಾರೆ.
ನಗರದ ಕಸಬ ಬೆಂಗರೆಯಲ್ಲಿ ನಡೆದ ಸಿಪಿಐ(ಎಂ) ಮಂಗಳೂರು ನಗರ ದಕ್ಷಿಣ ವಿಧಾನಸಭಾ ಕ್ಷೇತ್ರದ ಚುನಾವಣಾ ಪ್ರಚಾರ ಸಭೆಯಲ್ಲಿ ಭಾಗವಹಿಸಿ ಅವರು ಮಾತನಾಡಿದರು.
ಈ ನಗರ ಅಭಿವೃದ್ಧಿಗೊಳ್ಳಬೇಕಾದರೆ ಮೊದಲು ಸೌಹಾರ್ದತೆ ನೆಲೆಗೊಳ್ಳಬೇಕು. ಸೌಹಾರ್ದತೆಯಿಂದ ಮಾತ್ರವೇ ಅಭಿವೃದ್ಧಿ ಸಾಧ್ಯ ಎಂದು ಅವರು, ಜಿಲ್ಲೆಯಲ್ಲೊಂದು ಸರಕಾರಿ ಮೆಡಿಕಲ್ ಕಾಲೇಜಾಗಲೀ, ಇಂಜಿನಿಯರಿಂಗ್ ಕಾಲೇಜಾಗಲೀ ಇಲ್ಲ. ಮಂಗಳೂರಿನ ಮೂಲಭೂತ ವ್ಯವಸ್ಥೆಗಳ ಅಭಿವೃದ್ಧಿಗೆ ತಂದ ಎಡಿಬಿ ಸಾಲದಲ್ಲಿ ಭ್ರಷ್ಟಾಚಾರ ನಡೆದಿದೆ ಎಂದು ಆರೋಪಿಸಿದರು.
ಜಿಲ್ಲೆಯ ಬಡವರ, ಜನಸಾಮಾನ್ಯರ, ಹಿಂದುಳಿದ ವರ್ಗಗಳ, ಕಾರ್ಮಿಕರ ಬದುಕಿನ ವಿಚಾರಗಳು ವಿಧಾನಸಭೆಯಲ್ಲಿ ಮೊಲಗಬೇಕಾಗಿದೆ. ಜಿಲ್ಲೆಗೊಂದು ಸರಕಾರಿ ಮೆಡಿಕಲ್ ಕಾಲೇಜು, ಹಕ್ಕುಪತ್ರ, ಮನೆನಿವೇಶನ, ಯುವಜನರಿಗೆ ಉದ್ಯೋಗ, ಹೀಗೆ ಹಲವು ಕಣ್ಣೋಟದೊಂದಿಗೆ ಸಿಪಿಐ(ಎಂ) ಚುನಾವಣಾ ಉದ್ಧೇಶವನ್ನಿಟ್ಟುಕೊಂಡಿದೆ. ಈ ಹಿನ್ನಲೆಯಲ್ಲಿ ಬೆಂಗರೆಯ ನಾಗರಿಕರು ಸಿಪಿಐ(ಎಂ) ಪಕ್ಷಕ್ಕೆ ಬೆಂಬಲವನ್ನು ವ್ಯಕ್ತಿಪಡಿಸಬೇಕೆಂದು ವಿನಂತಿಸಿದರು.
ಕಾರ್ಯಕ್ರಮದಲ್ಲಿ ಡಿವೈಎಫ್‍ಐ ಜಿಲ್ಲಾಧ್ಯಕ್ಷ ಬಿ.ಕೆ. ಇಮ್ತಿಯಾಜ್, ಚುನಾವಣಾ ಪ್ರಚಾರ ಸಮಿತಿ ಕಾರ್ಯದರ್ಶಿ ಸಂತೋಷ್ ಬಜಾಲ್, ಸಿಪಿಐ(ಎಂ) ಜಿಲ್ಲಾ ಮುಖಂಡರಾದ ಯೋಗೀಶ್ ಜಪ್ಪಿನಮೊಗರು, ಸಂತೋಷ್ ಶಕ್ತಿನಗರ, ಸ್ಥಳೀಯ ಮುಖಂಡರಾದ ಹಸನ್ ಮೋನು, ನೌಶಾದ್ ಬೆಂಗರೆ, ಹನೀಫ್ ಬೆಂಗ್ರೆ, ಅಸ್ಲಂ ಬೆಂಗ್ರೆ ಮುಂತಾದವರು ಉಪಸ್ಥಿತರಿದ್ದರು.

