ಬಂಟ್ವಾಳ:ಪಾಶ್ಚಾತ್ಯ ಸಂಸ್ಕೃತಿ ಮತ್ತು ಟಿವಿ ಧಾರಾವಾಹಿಗೆ ಆಕರ್ಷಿತಗೊಂಡಿರುವ ಇಂದಿನ ಮಕ್ಕಳು ಮತ್ತು ಯುವಜನತೆಗೆ ಗಂಡು-ಹೆಣ್ಣು ಎಂಬ ತಾರತಮ್ಯವಿಲ್ಲದೆ ಸೂಕ್ತ ಮಾರ್ಗದರ್ಶನ ಮತ್ತು ಇಲ್ಲಿನ ಆಧ್ಯಾತ್ಮಿಕ ಸಂಸ್ಕೃತಿ ಬಗ್ಗೆ ಅರಿವು ಮೂಡಿಸುವ ಮಹತ್ತರ ಜವಾಬ್ದಾರಿ ಪ್ರತೀ ತಾಯಂದಿರ ಮೇಲಿದೆ ಎಂದು ಬಂಟ್ವಾಳ ವಿಶ್ವ ಹಿಂದೂ ಪರಿಷತ್ ಅಧ್ಯಕ್ಷ ಅರುಣ್ ಕುಮಾರ್ ಶೆಟ್ಟಿ ನುಳಿಯಾಲುಗುತ್ತು ಹೇಳಿದ್ದಾರೆ.
ತಾಲ್ಲೂಕಿನ ಸುವರ್ಣನಾಡು ಶ್ರೀ ದುರ್ಗಾಂಬಿಕಾ ಸಿದ್ಧೇಶ್ವರಿ ದೇವಸ್ಥಾನದಲ್ಲಿ ಬ್ರಹ್ಮಕಲಶೋತ್ಸವ ಪ್ರಯುಕ್ತ ಶುಕ್ರವಾರ ನಡೆದ ಧಾರ್ಮಿಕ ಸಭೆ ಕಾರ್ಯಕ್ರಮದಲ್ಲಿ ಅವರು ಧಾರ್ಮಿಕ ಉಪನ್ಯಾಸ ನೀಡಿದರು.ಅರಳ ಶ್ರೀ ಗರುಡ ಮಹಾಕಾಳಿ ದೇವಸ್ಥಾನ ಆಡಳಿತ ಮೊಕ್ತೇಸರ ಎ.ರಾಜೇಂದ್ರ ಶೆಟ್ಟಿ, ಅಮ್ಟಾಡಿ ಕ್ಷೇತ್ರದ ಆಡಳಿತ ಮೊಕ್ತೇಸರ ರವಿಶಂಕರ ಶೆಟ್ಟಿ ಬಡಾಜೆ ಗುತ್ತು ಶುಭ ಹಾರೈಸಿದರು.

ಸುವರ್ಣನಾಡು ವಿಶ್ವನಾಥ ಸ್ವಾಮಿ, ರಾಯಿ- ಕೊಲ- ಅರಳ ಹಿಂದೂ ಧರ್ಮೋತ್ಥಾನ ವೇದಿಕೆ ಟ್ರಸ್ಟಿನ ಅಧ್ಯಕ್ಷ ಎಂ.ದುರ್ಗಾದಾಸ್ ಶೆಟ್ಟಿ ಮಾವಂತೂರು, ವಾಮದಪದವು ವ್ಯವಸಾಯ ಸೇವಾ ಸಹಕಾರಿ ಬ್ಯಾಂಕಿನ ಅಧ್ಯಕ್ಷ ಯಶೋಧರ ಶೆಟ್ಟಿ ದಂಡೆ, ನೋಟರಿ ವಕೀಲ ಸುರೇಶ ಶೆಟ್ಟಿ ಪೂವಳ, ಬ್ರಹ್ಮಕಲಶೋತ್ಸವ ಸಮಿತಿ ಅಧ್ಯಕ್ಷ ಅರುಣ್ ಕುಮಾರ್ ತುಂಬೆ, ಮತ್ತಿತರರು ಇದ್ದರು.ಆರಂಭದಲ್ಲಿ ಎಡನೀರು ಮಠದ ಶ್ರೀ ಕೇಶವಾನಂದ ಭಾರತಿ ಸ್ವಾಮೀಜಿ ಆಶೀರ್ವಚನ ನೀಡಿ, ಇಲ್ಲಿನ ವಿಶ್ವನಾಥ ಸ್ವಾಮಿ ಮತ್ತು ಭಕ್ತರ ಒಗ್ಗೂಡುವಿಕೆಯಿಂದ ಸುಂದರ ದೇಗುಲ ನಿರ್ಮಾಣಗೊಂಡಿದೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.

ನಿವೃತ್ತ ಶಿಕ್ಷಕ ವೇದಾನಂದ ಕಾರಂತ ಸ್ವಾಗತಿಸಿ, ಪ್ರಾಸ್ತಾವಿಕ ಮಾತನಾಡಿದರು. ಕಳೆದ 45 ವರ್ಷಗಳ ಹಿಂದೆ ಇಲ್ಲಿನ ದೇವಿಭಕ್ತ ವಿಶ್ವನಾಥ ಸ್ವಾಮಿ ಸ್ಥಾಪಿಸಿದ ಸುವರ್ಣನಾಡು ಶ್ರೀ ದುರ್ಗಾಂಬಿಕಾ ಸಿದ್ಧೇಶ್ವರಿ ದೇವಸ್ಥಾನವು ಇದೀಗ ಸಂಪೂರ್ಣ ಪುನರ್ ನವೀಕರಣಗೊಂಡಿದೆ ಎಂದರು. ಗ್ರಾಮ ಪಂಚಾಯಿತಿ ಸದಸ್ಯ ಡೊಂಬಯ ಬಿ.ಅರಳ ವಂದಿಸಿದರು. ದಿನೇಶ ಸುವರ್ಣ ಕಾರ್ಯಕ್ರಮ ನಿರೂಪಿಸಿದರು.
ಇದೇ ವೇಳೆ ಮಂಗಳೂರಿನ ಶ್ರೀ ರಾಧಾಕೃಷ್ಣ ದೇವಸ್ಥಾನದ ವೇದಮೂರ್ತಿ ನಾರಾಯಣ ಭಟ್(ಬಾಲಂಭಟ್ ಮನೆತನ) ಇವರ ಮಾರ್ಗದರ್ಶನದಲ್ಲಿ ದೇವರಿಗೆ ಬ್ರಹ್ಮಕಲಶಾಭಿಷೇಕ, ಚಂಡಿಕಾಯಾಗ ನಡೆಯಿತು.
ಸಭಾ ಕಾರ್ಯಕ್ರಮ ಬಳಿಕ ನಡೆದ ವಿವಿಧ ಸಾಂಸ್ಕೃತಿಕ ಕಾರ್ಯಕ್ರಮ ಮತ್ತು ಸಾರ್ವಜನಿಕ ಅನ್ನಸಂತರ್ಪಣೆ ಕಾರ್ಯಕ್ರಮದಲ್ಲಿ ಅಪಾರ ಮಂದಿ ಭಕ್ತರು ಪಾಲ್ಗೊಂಡರು.
