0010ಸರ್ಕಾರಗಳು ಒಂಡೆದೆ ರೈತರ ಉದ್ಧಾರದ ಮಾತನ್ನಾಡುವ ಅಥವಾ ಯೋಜನೆ ಪ್ರಕಟಿಸುವ ಸರ್ಕಾರಗಳು ಕೈಗಾರಿಕೋದ್ಯಮದ ಮೇಲೆ ದೃಷ್ಟಿ ನಿಟ್ಟಿದ್ದು, ಕೈಗಾರಿಕೋದ್ಯಮಗಳಿಗೆ ಉದಾರವಾಗಿ ಕೃಷಿ ಭೂಮಿ ಒದಗಿಸುವ ದುಸ್ಸಾಹಸಕ್ಕೆ ಇಳಿದಿವೆ. ಪರಿಣಾಮ, ಈಗ ಹಳ್ಳಿಗಳ ಕೃಷಿಭೂಮಿಯಲ್ಲೂ ಸಾಕಷ್ಟು ಕೈಗಾರಿಕೋದ್ಯಮ ಕಾಣುವಂತಾಗಿದೆ. `ಗೈಲ್’ ಕಂಪೆನಿಯ ಗ್ಯಾಸ್ ಪೈಪ್‍ಲೈನ್ ಇಂತಹದೊಂದು ಕೈಗಾರಿಕೋದ್ಯಮದ ಭಾಗವಾಗಿದೆ.02

ಹಳ್ಳಿಗಾಡಿನಲ್ಲಿ ಕೃಷಿಭೂಮಿ ಸ್ವಾಧೀನಪಡಿಸಿಕೊಂಡು ಕಾರ್ಯಗತಗೊಳ್ಳುತ್ತಿರುವ ಯೋಜನೆ ಇದಾಗಿದೆ. ಕೆಲವೆಡೆ ರೈತರ ವಿರೋಧವಿದ್ದರೂ ಲೆಕ್ಕಿಸದೆ ಕೃಷಿಭೂಮಿಯಲ್ಲಿ ಯೋಜನೆ ಸಾಗಿದೆ. ಭತ್ತ ಬೆಳೆಯುವ ಗದ್ದೆ, ಕಂಗು-ತೆಂಗಿನ ತೋಟಗಳು, ಫಲವತ್ತಾದ ಗೇರು ತೋಪು ಹಾಗೂ ಫಲವಸ್ತುಗಳ ಮರಮಟ್ಟಿನ ಭಾಗದಲ್ಲಿ ಸಾಗುತ್ತಿರುವ ಈ ಯೋಜನೆಯಡಿ ಸಾವಿರಾರು ಮರಗಳು ಧರಾಶಾಯಿಯಾಗಿವೆ.02010101

ಮರವೂರು, ಗುರುಪುರ, ಅಮ್ಮುಂಜೆ, ಕಲಾಯಿ, ಅಬ್ಬೆಟ್ಟು, ಮೇರೆಮಜಲು, ಫರಂಗಿಪೇಟೆ, ಪಾವೂರಾಗಿ ಸಾಗುವ ಕೊಚ್ಚಿನ್ ಮೂಲದ ಕಂಪೆನಿಯ ಈ ಪೈಪ್‍ಲೈನಿಗಾಗಿ ಪ್ರಸ್ತುತ ಒಂದರ ಬದಲು ಮೂರು ಕೊಳವೆ ಅಳವಡಿಸಬಹುದಾದಷ್ಟು ಜಾಗ ಸ್ವಾಧೀನಪಡಿಸಿಕೊಂಡು ಸಮತಟ್ಟುಗೊಳಿಸಲಾಗುತ್ತಿದೆ. ಕಲಾಯಿ, ಅಮ್ಮುಂಜೆಯಲ್ಲಿ ಕೊಳವೆ ಅಳವಡಿಸುವ ಕಾಮಗಾರಿ ತ್ವರಿತಗತಿಯಲ್ಲಿ ಮುಂದುವರಿದಿದೆ. ಇಲ್ಲೆಲ್ಲ ನೂರಾರು ತೆಂಗಿನ ಮರ, ಅಡಿಕೆಮರಗಳನ್ನು ಕಡಿದು ಹಾಕಲಾಗಿದ್ದು, ಕೃಷಿಕರಿಗೆ ಜುಜುಬಿ ಪರಿಹಾರ ಸಿಕ್ಕಿದೆ.7-1

ಇನ್ನೂ ವಿಶೇಷವೆಂದರೆ, ಮರಮಟ್ಟು ಜಾಗ ಬಿಟ್ಟು ಪಕ್ಕದ ಖಾಲಿ ಜಾಗದಲ್ಲಿ ಅಥವಾ ತೋಡುಗಳ ಮೂಲಕ ಕೊಳವೆ ಅಳವಡಿಸಲು ಅವಕಾಶವಿದ್ದರೂ ಕಂಪೆನಿಯು ನೇರವಾಗಿ ತೋಟಗಳ ಭಾಗದಲ್ಲೇ ಕಾಮಗಾರಿಗೆ ಆಸಕ್ತವಾಗಿದೆ. ಅನ್ಯ ರಾಜ್ಯಗಳಲ್ಲಿ ಇಂತಹ ಯೋಜನೆಗಳು ಕೃಷಿ ಪ್ರದೇಶದಲ್ಲಿ ನಡೆದಿಲ್ಲ. ಕರಾವಳಿ ಭಾಗದಲ್ಲಿ ಈಗಾಗಲೇ ಕೃಷಿಭೂಮಿಯಲ್ಲಿ ಮೂರು ಕೊಳವೆಗಳು ಹಾದು ಹೋಗಿವೆ !7-2

“ಒಂದು ತೋಟ ಮಾಡಬೇಕಿದ್ದರೆ ಎಷ್ಟು ಕಷ್ಟವಿದೆ ಎಂಬುದು ರೈತನಿಗೆ ಮಾತ್ರ ಗೊತ್ತು. ಕೃಷಿಭೂಮಿಯಲ್ಲಿ ಸಾಗುವ ಗ್ಯಾಸ್ ಪೈಪ್‍ಲೈನ್ ಯೋಜನೆಯಿಂದ ರೈತರಿಗೆ ಯಾವುದೇ ಪ್ರಯೋಜನವಿಲ್ಲ. ಯೋಜನೆಯ ಪ್ರತಿಕೂಲ ಪರಿಸ್ಥಿತಿ ಮಳೆಗಾಲದಲ್ಲಿ ಕಂಡು ಬರಲಿದೆ. ತೋಡುಗಳು ಮತ್ತು ಕೆರೆಗಳು ನಾಶವಾದರೆ ಏನಾಗಬಹುದು ಎಂಬುದನ್ನು ಊಹಿಸಲು ಸಾಧ್ಯವಿಲ್ಲ. ಭವಿಷ್ಯದಲ್ಲಿ ರೈತರು ಸಾಕಷ್ಟು ಕಷ್ಟ ಎದುರಿಸಬೇಕಾಗುತ್ತದೆ. ಒಂದು ವಿಷ ಸರ್ಪ ಮನೆಯೊಳಗೆ ಪ್ರವೇಶಿಸಿದರೆ ಏನಾಗುತ್ತದೋ ಅದರಂತೆಯೇ ಗೈಲ್ ಗ್ಯಾಸ್ ಪೈಪ್‍ಲೈನ್ ದುಷ್ಪರಿಣಾಮ ಬೀರಲಿದೆ” ಎಂದು ಕೃಷಿಕ ಜೀವರಾಜ ಶೆಟ್ಟಿ ಹೇಳುತ್ತಾರೆ.

“ಅಭಿವೃದ್ಧಿಗೆ ನಾವು ವಿರೋಧಿಗಳಲ್ಲ. ಆದರೆ ಬಹುತೇಕ ಎಲ್ಲ ಯೋಜನೆಗಳಿಗೆ ಕೃಷೀಭೂಮಿಯನ್ನೇ ಆಯ್ಕೆ ಮಾಡಿದರೆ ರೈತನ ಭವಿಷ್ಯ ಏನಾಗಬಹುದು ? ಗುಡ್ಡಗಾಡಿನ ಮೂಲಕವೂ ಇಂತಹ ಯೋಜನೆ ಕೈಗೊಳ್ಳಬಹುದಲ್ಲವೇ ?” ಎಂದವರು ಪ್ರಶ್ನಿಸಿದ್ದಾರೆ.01

“ವಸತಿ ಪ್ರದೇಶದಲ್ಲೂ ಕೊಳವೆ ಸಾಗಿದೆ. ಇದರಿಂದ ಏನೂ ಆಗದು ಎಂದು ಕಂಪೆನಿ ಹೇಳುತ್ತದೆ. ಆದರೆ ಇತರೆಡೆ ನಡೆದಿರುವ ಗ್ಯಾಸ್ ಕೊಳವೆ ದುರಂತಗಳು ನಮ್ಮ ಕಣ್ಣು ಮುಂದೆ ಬರುತ್ತವೆ. ಆದ್ದರಿಂದ ಇಲ್ಲಿನವರೂ ಭವಿಷ್ಯದಲ್ಲಿ ಸದಾ ಜೀವಭಯದಿಂದ ಜೀವನ ಸಾಗಿಸಬೇಕಿದೆ” ಎಂದು ಕಲಾಯಿಯ  ಮಹಮ್ಮದ್ ಖಾದ್ರಿ  ಭೀತಿ ವ್ಯಕ್ತಪಡಿಸಿದ್ದಾರೆ.  ಗುಂಡಿಲ ಅಜಿತ್ ಶೆಟ್ಟಿ, ಉಳಿಪಾಡಿಗುತ್ತು ದಿ. ಜಗನ್ನಾಥ ಶೆಟ್ಟಿಯವರ ತೋಟವೂ ನಾಶವಾಗಿದೆ.

ಮಂಗಳೂರು ಕೆಮಿಕಲ್ಸ್ ಆ್ಯಂಡ್ ಫರ್ಟಿಲೈಸರ್ಸ್‍ಗೆ(ಎಂಸಿಎಫ್) ನಫ್ತಾ ಬಳಕೆಯ ವಿದ್ಯುತ್ ಬದಲಿಗೆ ಗ್ಯಾಸ್ ಬಳಕೆಯ ವಿದ್ಯುತ್ತಿಗಾಗಿ ಈ ಯೋಜನೆ ಕಾರ್ಯಗತವಾಗುತ್ತಿದೆ. ಮಂಗಳೂರು ತಾಲೂಕಿನ ಮರವೂರು, ಅದ್ಯಪಾಡಿ, ಕಂದಾವರ, ಮೂಳೂರು, ಅಡ್ಡೂರು, ಮಲ್ಲೂರು, ಕಂದಾವರ,  ಅರ್ಕುಳ, ಪಾವೂರು, ಕೆಂಜಾರು, ತೋಕೂರು ಮತ್ತು ಬಂಟ್ವಾಳ ತಾಲೂಕಿನ ಅಬ್ಬೆಟ್ಟು, ಮೇರೆಮಜಲು, ಅಮ್ಮುಂಜೆ, ಪಜೀರು, ಕೈರಂಗಳ, ಬಾಳೆಪುಣಿ, ಕುರ್ನಾಡು ಗ್ರಾಮಗಳಲ್ಲಿ ಗೈಲ್ ಪೈಪ್‍ಲೈನ್ ಸಾಗಲಿದೆ. ಕಂಪೆನಿಯು ಈಗ 20 ಮೀಟರ್ ಅಗಲಕ್ಕೆ ಜಾಗ ಸಮತಟ್ಟುಗೊಳಿಸುತ್ತಿದೆ. ಕೆಲವೆಡೆ ತೋಟದ ಮಧ್ಯೆ ಕೊಳವೆ ಹಾದು ಹೋಗುವುದರಿಂದ ಇಬ್ಭಾಗವಾದ ತೋಟಗಳಿಗೆ ನೀರಿನ ಸಮಸ್ಯೆ ಉಂಟಾಗಿದೆ.

ಏನೇ ಇದ್ದಾಗಲೂ ಭವಿಷ್ಯದಲ್ಲಿ ಈ ಯೋಜನೆ ವಸತಿ ಪ್ರದೇಶ, ಕೃಷಿಭೂಮಿ ದೊಡ್ಡ ಸಂಚಕಾರವಾಗಲಿದೆ. ಭವಿಷ್ಯದ ಬಗ್ಗೆ ಹೆಚ್ಚೇನು ತಿಳಿಯದ ರೈತಾಪಿ ವರ್ಗ ಒಂದಷ್ಟು ಜಾಗ ಹೋದರೇನಂತೆ ಎಂದು ಸಮಜಾಯಿಸಿ ನೀಡಿದ್ದೂ ಉಂಟು. ಭವಿಷ್ಯದ ದಿನಗಳು ಉತ್ತಮವಾಗಿರಬೇಕಿದ್ದರೆ ಕೃಷಿಭೂಮಿ ಉಳಿಯಬೇಕೆಂಬುದು ನಮ್ಮ ಕಳಕಳಿಯಾಗಿದೆ.

By suddi9

Leave a Reply

Your email address will not be published. Required fields are marked *