ನವದೆಹಲಿ: ಐಎನ್‌ಎಕ್ಸ್ ಮೀಡಿಯಾ ಪ್ರಕರಣ ಸಂಬಂಧ ಆರೋಪಿಯಾಗಿರುವ ಮಾಜಿ ಸಚಿವ ಪಿ. ಚಿದಂಬರಂ ಪುತ್ರ ಕಾರ್ತಿ ಚಿದಂಬರಂ ಅವರಿಗೆ ದೆಹಲಿ ಹೈಕೋರ್ಟ್ ಜಾಮೀನು ನೀಡಿದೆ.
ಇದೇ ವೇಳೆ ಕಾರ್ತಿ ಚಿದಂಬರಂ ಅವರಿಗೆ 10 ಲಕ್ಷ ಬಾಂಡ್ ಹಾಗೂ ಶ್ಯೂರಿಟಿ ನೀಡುವಂತೆ ಷರತ್ತು ವಿಧಿಸಿದೆ ಎನ್ನಲಾಗಿದೆ. ಐಎನ್ ಎಕ್ಸ್ ಮೀಡಿಯಾ ಸಂಸ್ಥೆಯಲ್ಲಿ ಅಕ್ರಮ ಹಣಕಾಸು ವರ್ಗಾವಣೆ ಪ್ರಕರಣ ಸಂಬಂಧ ಕೇಂದ್ರ ಮಾಜಿ ಸಚಿವ ಕಾರ್ತಿ ಚಿದಂಬರಂ ಅವರನ್ನು ಸಿ.ಬಿ.ಐ ಕಳೆದ ತಿಂಗಳ ಫೆ. 26ರಂದು ಬಂಧಿಸಿತ್ತು.
ಐಎನ್ಎಕ್ಸ್ ಮೀಡಿಯಾ ಭ್ರಷ್ಟಾಚಾರ ಹಾಗೂ ವಿದೇಶಿ ವಿನಿಮಯ ನಿರ್ವಹಣಾ ಕಾಯ್ದೆ (ಫೆಮಾ) ಉಲ್ಲಂಘಿಸಿದ ಆರೋಪ ಎದುರಿಸುತ್ತಿರುವ ಕಾರ್ತಿ ಚಿದಂಬರಂ ಅವರ ವಿರುದ್ಧ ಸಿಬಿಐ ಸಹ ಪ್ರಕರಣ ದಾಖಲಿಸಿಕೊಂಡಿತ್ತು. ಹಲವು ದಿನಗಳಿಂದ ಪ್ರಕರಣ ಸಂಬಂಧ ಕಾರ್ತಿ ಚಿದಂಬರಂ ಅವರ ವಿರುದ್ಧ ದಾಖಲಾಗಿದ್ದ ದೂರಿನ ಅನ್ವಯ ಹಲವು ಬಾರಿ ವಿಚಾರಣೆಗೆ ಒಳಗಾಗಿದ್ದರು.
ಕೇಂದ್ರದಲ್ಲಿ ಯುಪಿಎ ಸರ್ಕಾರವಿದ್ದಾಗ ಚಿದಂಬರಂ ಸಚಿವರಾಗಿದ್ದರು, ಈ ವೇಳೆ ಐಎನ್ ಎಕ್ಸ್ ಮೀಡಿಯಾ ಸಂಸ್ಥೆ ಹಗರಣ ನಡೆದಿತ್ತು. ಅಕ್ರಮ ಹಣ ವಹಿವಾಟು ತಡೆ ಕಾಯ್ದೆ ಅಡಿ ಕಾರ್ತಿ ಚಿದಂಬರಂ ವಿರುದ್ಧ ಇಡಿ ಮೇ, 2017ರಲ್ಲಿ ಪ್ರಕರಣ ದಾಖಲಿಸಿಕೊಂಡಿದ್ದು, ವಿದೇಶಿ ವಿನಿಮಯ ನಿರ್ವಹಣಾ ಕಾಯಿದೆ ಉಲ್ಲಂಘನೆ ಆರೋಪದಲ್ಲಿ ಕಾರ್ತಿ ಚಿದಂರಬರಂ ನನ್ನು ಬಂಧಿಸಲಾಗಿತ್ತು.

