ಕರಿಯಂಗಳ: ಬಹು ನಿರೀಕ್ಷಿತ ಬೇಡಿಕೆಯಾಗಿದ್ದ ಪೊಳಲಿ-ಮಳಲಿ ಸಂಪರ್ಕಿಸುವ ಕಿಂಡಿ ಅಣೆಕಟ್ಟಿಗೆ ರಾಜ್ಯ ಸಣ್ಣ ನೀರಾವರಿ ಯೋಜನೆಯಡಿ ಸುಮಾರು 12 ಕೋಟಿ 50 ಲಕ್ಷ ರೂ.ವೆಚ್ಚದಲ್ಲಿ ನಿರ್ಮಾಣಗೊಳ್ಳುವ ಕಾಮಗಾರಿಗೆ ಅರಣ್ಯ ಪರಿಸರ, ಜೀವಶಾಸ್ತ್ರ ಹಾಗೂ ದ.ಕ.ಜಿಲ್ಲಾ ಉಸ್ತುವಾರಿ ಸಚಿವ ಬಿ.ರಮಾನಾಥ ರೈ ಇಲ್ಲಿನ ಕುಡರಿಗುಡ್ಡೆಯಲ್ಲಿ ಬುಧವಾರ ಶಿಲಾನ್ಯಾಸ ನೆರವೇರಿಸಿದರು.
ಬಳಿಕ ಮಾತನಾಡಿದ ಅವರು, ಪಶ್ಚಿಮಾಭಿಮುಖವಾಗಿ ಹರಿದು ಸಮುದ್ರಕ್ಕೆ ಸೇರುವ ನದಿಗಳಿಗೆ ಅಲ್ಲಲ್ಲಿ ಕಿಂಡಿ ಅಣೆಕಟ್ಟು ನಿರ್ಮಿಸಿ ಮಣ್ಣಿನ ಅಂತರ್ಜಲ ಹೆಚ್ಚಿಸುವುದರೊಂದಿಗೆ ರೈತರಿಗೆ ಅನುಕೂಲವಾಗುವ ದೃಷ್ಟಿಯಿಂದ ಪಶ್ಚಿಮ ವಾಹಿನಿ ಯೋಜನೆ ರೂಪಿಸಲಾಗಿದ್ದು, ಇದು ದ.ಕ. ಜೆಲ್ಲೆಯ ಬಹು ನಿರೀಕ್ಷಿತ ಯೋಜನೆಯಾಗಿದೆ. ಈ ಯೋಜನೆ ಮೂಲಕ ಪೊಳಲಿ-ಮಳಲಿಗೆ ಕಿಂಡಿ ಅಣೆಕಟ್ಟು ನಿರ್ಮಾಣಗೊಳ್ಳುವುದು ನನಗೆ ಸಂತಸ ತಂದಿದೆ ಎಂದು ಹೇಳಿದರು.
ರಾಜ್ಯದಲ್ಲಿ ಬಜೆಟ್ ಮಂಡನೆಯಾಗುವ ಪೂರ್ವದಲ್ಲಿ ಜೆಲ್ಲೆಯ ನಮ್ಮ ಜನಪ್ರತಿನಿಧಿಗಳ ನಿಯೋಗವು ಮುಖ್ಯಮಂತ್ರಿಯನ್ನು ಭೇಟಿ ಮಾಡಿ ಪಶ್ಚಿಮ ವಾಹಿನಿ ಯೋಜನೆ ಜಾರಿಗೊಳಿಸಬೇಕೆಂದು ಒತ್ತಾಯಿಸಲಾಗಿತ್ತು. ನಮ್ಮ ಅಹವಾಲುಗೆ ಸ್ಪಂದಿಸಿದ ಸಿಎಂ ಸಿದ್ದರಾಮಯ್ಯ ಈ ಯೋಜನೆಯನ್ನು ಅನುಷ್ಠಾನಕ್ಕೆ ತಂದು ಪ್ರಥಮ ಹಂತದ 200 ಕೋ.ರೂ. ಅನುದಾನವನ್ನು ರಾಜ್ಯ ಬಜೆಟ್ ನಲ್ಲಿ ಘೋಷಿಸಿದ್ದಾರೆ. ಈ ಯೋಜನೆ ಮೂಲಕ ಈಗಾಗಲೇ ಮೂರು ಕಡೆಗಳಲ್ಲಿ ಶಂಕು ಸ್ಠಾಪನೆ ನೆರವೇರಿಸಲಾಗಿದೆ ಎಂದರು.
ಈ ಭಾಗದಲ್ಲಿ ನಿರ್ಮಾಗೊಳ್ಳುವ ಅಣೆಕಟ್ಟಿನ ಮೇಲೆ ಸೇತುವೆಗೂ ಅನುವುಮಾಡಿಕೊಡಲಾಗಿದ್ದು, ವಾಹನಗಳ ಸುಗಮ ಸಂಚಾರಕ್ಕೆ ಆದ್ಯತೆ ಕಲ್ಪಿಸಲಾಗಿದೆ. ಆದ್ದರಿಂದ ಕಾಮಗಾರಿಯನ್ನು ಸರಿಯಾದ ಕ್ರಮದಲ್ಲಿ ಪರಿಪೂರ್ಣಗೊಳಿಸಬೇಕು ಎಂದು ಸ್ಥಳದಲ್ಲಿದ್ದ ಇಂಜಿನಿಯರ್ ಗಳಿಗೆ ಖಡಕ್ ಸೂಚನೆ ನೀಡಿದರು.
ಇಂಜಿನಿಯರ್ ಷಣ್ಮುಗಂ ಮಾತನಾಡಿ, ಪಶ್ಚಿಮ ವಾಹಿನಿ ಯೋಜನೆಯಲ್ಲಿ ಮೂರು ಜಿಲ್ಲೆಗೆ ಪ್ರಥಮ ಹಂತದ 200 ಕೋ. ರೂ. ಮಂಜೂರಾಗಿದ್ದು. ಇದರಲ್ಲಿ ದ.ಕ.ಜಿಲ್ಲೆಗೆ ಸುಮಾರು 91.25 ಕೋ.ರೂ. ವೆಚ್ಚದಲ್ಲಿ 10 ಕಿಂಡಿ ಅಣೆಕಟ್ಟಿನ ಕಾಮಗಾರಿ ನಡೆಯಲಿದ್ದು, ಇದರಲ್ಲಿ ಒಟ್ಟು ಮೂರು ಕಡೆಗಳಲ್ಲಿ ಶಿಲಾನ್ಯಾಸ ನೆರೆವೇರಿಸಿದ್ದೇವೆ ಎಂದು ಮಾಹಿತಿ ನೀಡಿದರು.
ಇಲ್ಲಿನ ಪೊಳಲಿ-ಮಳಲಿಗೆ ಸಂಪರ್ಕಿಸುವ ಅಣೆಕಟ್ಟು ಕಾಮಗಾರಿಯನ್ನು ಮೂರು ಹಂತಗಳಲ್ಲಿ ಕೈಗೊಳ್ಳಲಿದ್ದೇವೆ. ಈ ಅಣೆಕಟ್ಟಿನಲ್ಲಿ 24 ಕಬ್ಬಿಣ ಕಿಂಡಿ ಹಾಗೂ ಸುಮಾರು 23 ಪಿಲ್ಲರ್ ಗಳಿವೆ. ಇದರಲ್ಲಿ ಶೇ.49.74 ಎಂಸಿಎಫ್ ಅಷ್ಟು ನೀರನ್ನು ಶೇಖರಣೆ ಮಾಡುವ ಸಾಮರ್ಥ್ಯ ಇದ್ದು, ಇದರಿಂದ ಅಂತರ್ಜಲ ವೃದ್ಧಿ ಹಾಗೂ ರೈತರಿಗೆ ಅನುಕೂಲವಾಗಲಿದೆ ಎಂದು ಅವರು ವಿವರಿಸಿದರು.
ಕಾರ್ಯಕ್ರಮದಲ್ಲಿ ಜಿ.ಪಂ.ಸದಸ್ಯರಾದ ಚಂದ್ರಪ್ರಕಾಶ ಶೆಟ್ಟಿ, ಎಂ.ಎಸ್. ಮೊಹಮ್ಮದ್, ಬಂಟ್ವಾಳ ತಾ.ಪಂ. ಉಪಾಧ್ಯಕ್ಷ ಅಬ್ಬಾಸ್ ಅಲಿ, ತಾ.ಪಂ.ಸದಸ್ಯ ಜಿ. ಸುನೀಲ್, ಬಂಟ್ವಾಳ ಬುಡ ಅಧ್ಯಕ್ಷ ಸದಾಶಿವ ಬಂಗೇರ, ಗಂಜಿಮಠ ಗ್ರಾ.ಪಂ. ಅಧ್ಯಕ್ಷೆ ಮಾಲತಿ, ಇಂಜಿನಿಯರಾದ ಪ್ರಕಾಶ್, ಪ್ರಸನ್ನ, ಪ್ರಗತಿ ಪರ ಕೃಷಿಕ ಉದಯ ಆಳ್ವ, ಸುಧಾಕರ್ ಟೈಲರ್, ಗಣಪ ನಾಯ್ಕ್, ಪ್ರಶಾಂತ್ ಕುಲಾಲ್ ಮತ್ತಿತರರು ಉಪಸ್ಥಿತರಿದ್ದರು. ರಾಜು ಕೋಟ್ಯಾನ್ ಸ್ವಾಗತಿಸಿ, ಚಂದ್ರಹಾಸ ಪಲ್ಲಿಪಾಡಿ ಕಾರ್ಯಕ್ರಮವನ್ನು ನಿರೂಪಿಸಿದರು.



