15 btl -Nandarabettu

ಬಂಟ್ವಾಳ: ತಾಲೂಕಿನಾದ್ಯಂತ ಬುಧವಾರ ಸಂಜೆ ಸುರಿದ ದಿಢೀರ್ ಗಾಳಿ ಮಳೆಗೆ ಇಲ್ಲಿನ ಪುರಸಬಾ ವ್ಯಾಪ್ತಿಯ ನಂದರಬೆಟ್ಟು ಮತ್ತಿತರ ಕಡೆಗಳಲ್ಲಿ ಅಪಾರ ಮೊತ್ತದ ಹಾನಿ ಉಂಟಾಗಿದೆ.

ಇಲ್ಲಿನ ನಿವಾಸಿ ಪ್ರೇಮಾ ಅವರ ಮನೆಗೆ ಮರವೊಂದು ಮುರಿದು ಬಿದ್ದ ಪರಿಣಾಮ ಮನೆ ಮಾಡಿನ ಹೆಂಚು ಮತ್ತು ಗೋಡೆಗೆ ಹಾನಿಯಾಗಿದೆ. ಇದರಿಂದಾಗಿ ಸುಮಾರು 50 ಸಾವಿರ ರೂ. ಮೊತ್ತದ ನಷ್ಟ ಉಂಟಾಗಿರುವ ಬಗ್ಗೆ ಅಂದಾಜಿಸಲಾಗಿದೆ.

ಘಟನಾ ಸ್ಥಳಕ್ಕೆ ಗ್ರಾಮಕರಣಿಕ ಶಿವಾನಂದ ನಾಟೆಕರ್, ಸಿಬ್ಬಂದಿ ಸದಾಶಿವ ಕೈಕಂಬ ಮತ್ತಿತರರು ಗುರುವಾರ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಕಲ್ಲಡ್ಕ ಪೇಟೆ ನಿವಾಸಿ  ಅಬೂಬಕ್ಕರ್ ಎಂಬವರ ಮನೆ ಎದುರು ತೆಂಗಿನ ಮರವೊಂದು ಉರುಳಿ ಬಿದ್ದು, ಮನೆ ಮತ್ತು ತಡೆಗೋಡೆಗೆ ಸುಮಾರು 30 ಸಾವಿರ ರೂ. ಮೊತ್ತದ ನಷ್ಟ ಉಂಟಾಗಿದೆ ಎಂದು ಅಂದಾಜಿಲಾಗಿದೆ.

ಇಲ್ಲಿನ ನರಹರಿ ನಗರ ನಿವಾಸಿ ವಿಶಾಲಾಕ್ಷಿ ಬಾಲಕೃಷ್ಣ ಪೂಜಾರಿ ಎಂಬವರ ಮನೆಗೆ ಮರವೊಂದು ಉರುಳಿ ಬಿದ್ದು, ಮನೆಗೆ ರೂ 30 ಸಾವಿರ ಮೊತ್ತದ ನಷ್ಟ ಉಂಟಾಗಿದೆ ಎಂದು ಅಂದಾಜಿಸಲಾಗಿದೆ. ಘಟನಾ ಸ್ಥಳಕ್ಕೆ ಗ್ರಾಮಕರಣಿಕ ಯೋಗಾನಂದ, ಸಹಾಯಕ ಸಿಬ್ಬಂದಿ ಮೋಹನ್ ಭೇಟಿ ನೀಡಿ ಸ್ಥಳ ತನಿಖೆ ನಡೆಸಿರುವುದಾಗಿ ತಿಳಿಸಿದ್ದಾರೆ.

ತಾಲ್ಲೂಕಿನ ಸಿದ್ದಕಟ್ಟೆ ಸಮೀಪದ ಸಂಗಬೆಟ್ಟು ಎಂಬಲ್ಲಿ ರಸ್ತೆ ಬದಿ ಮರದ ಗೆಲ್ಲೊಂದು ಮುರಿದು ವಿದ್ಯುತ್ ತಂತಿ ಮೇಲೆ ಬಿದ್ದ ಪರಿಣಾಮ ವಿದ್ಯುತ್ ಕಂಬಕ್ಕೆ ಹಾನಿಯಾಗಿದೆ. ಇಲ್ಲಿನ ರಾಯಿ ಮತ್ತಿತರ ಗ್ರಾಮೀಣ ಪ್ರದೇಶದಲ್ಲಿ ಗುರುವಾರ ಬೆಳಗ್ಗೆ ತನಕ ವಿದ್ಯುತ್ ಸಂಪರ್ಕ ಇಲ್ಲದೆ ಕತ್ತಲೆಯಲ್ಲೇ ಕಳೆಯುವಂತಾಗಿತ್ತು ಎಂದು ಸ್ಥಳೀಯರು ತಿಳಿಸಿದ್ದಾರೆ.

ಇಲ್ಲಿನ ಕೊಯಿಲ ಸರ್ಕಾರಿ ಪ್ರೌಢ ಶಾಲೆಯಲ್ಲಿ ಅಪೂರ್ಣಗೊಂಡ ತಡೆಗೋಡೆ ಕಾಮಗಾರಿಗೆ ತುಂಬಿದ ಮಣ್ಣು ರಸ್ತೆಗೆ ಕೊಚ್ಚಿ ಹೋಗಿದೆ. ರಾಯಿ-ಕೈತ್ರೋಡಿ ರಸ್ತೆಯಲ್ಲಿಯೂ ಚರಂಡಿ ಇಲ್ಲದೆ ಮಳೆಯ ಕೆಸರು ನೀರು ಕೆಲವೊಂದು ಮನೆಯಂಗಳಕ್ಕೆ ನುಗ್ಗಿದೆ ಎಂದು ದೂರಿದ್ದಾರೆ.

 

By Suddi9

Leave a Reply

Your email address will not be published. Required fields are marked *