
ಝುನಿಹುನು (ರಾಜಸ್ತಾನ): ಮಹಿಳೆ ಮತ್ತು ಪುರುಷರ ನಡುವ ಸಮಾನತೆ ಸಾಧಿಸಿದಾಗ ಮಾತ್ರ ಸದೃಢ ಮತ್ತು ಸ್ವಾಸ್ಥ್ಯ ಸಮಾಜದ ನಿರ್ಮಾಣ ಸಾಧ್ಯ ಎಂದು ಪ್ರಧಾನಿ ನರೇಂದ್ರ ಮೋದಿ ಪ್ರತಿಪಾದಿಸಿದ್ದಾರೆ.
‘ಬೇಟಿ ಬಚಾವೋ, ಬೇಟಿ ಪಡಾವೋ ‘ ಆಂದೋಲನ ವಿಸ್ತರಣೆಯ ಭಾಗವಾಗಿ ರಾಜಸ್ತಾನದ ಝುಂಜುನುದಲ್ಲಿ ಸಾರ್ವಜನಿಕ ಸಭೆಯನ್ನು ಉದ್ದೇಶಿಸಿ ಗುರುವಾರ ಮಾತನಾಡಿದ ಅವರು, ಗಂಡುಮಕ್ಕಳಂತೆಯೇ ಹೆಣ್ಣುಮಕ್ಕಳಿಗೂ ಗುಣಮಟ್ಟದ ಶಿಕ್ಷಣ ನೀಡುವ ಅಗತ್ಯವಿದೆ. ಪುರುಷ ಮತ್ತು ಮಹಿಳೆಯರಲ್ಲಿನ ಸಮಾನತೆ ಯಾವುದೇ ಸಮಾಜವನ್ನು ಸದೃಢ ಮತ್ತು ಆರೋಗ್ಯಕರವಾಗಿರಿಸುತ್ತದೆ. ಗಂಡುಮಕ್ಕಳಷ್ಟೇ ಸಂಖ್ಯೆಯಲ್ಲಿ ಹೆಣ್ಣು ಮಕ್ಕಳು ಹುಟ್ಟುವಂತೆ ನೋಡಿಕೊಳ್ಳಬೇಕು. ಹುಡುಗ-ಹುಡುಗಿ (ಬೇಟಾ-ಬೇಟಿ) ಇಬ್ಬರೂ ಸಮಾನರು ಎಂದು ಮೋದಿ ಒತ್ತಿ ಹೇಳಿದರು.
ಅತ್ತೆ ಮನಸ್ಸು ಮಾಡಿದರೆ ಬೇಕಾದಷ್ಟು ಬದಲಾವಣೆ ಮಾಡಬಹುದು. ಮನೆಯಲ್ಲಿ ಹೆಣ್ಣು ಮಗು ಬೇಕು ಎಂದು ಆಕೆ ಹೇಳಿದರೆ ಯಾರೂ ಅದಕ್ಕೆ ಅಡ್ಡ ನಡೆದುಕೊಳ್ಳುವುದಿಲ್ಲ ಎಂದು ಮೋದಿ ಹೇಳಿದರು.
ಇದಕ್ಕೂ ಮೊದಲು ಬೇಟಿ ಬಚಾವೋ ಬೇಟಿ ಪಢಾವೋ ಆಂದೋಲನದ ವಿಸ್ತರಣಾ ಕಾರ್ಯಕ್ರಮಕ್ಕೆ ಮೋದಿ ಚಾಲನೆ ನೀಡಿದರು. ಪ್ರಸ್ತುತ 161 ಜಿಲ್ಲೆಗಳಲ್ಲಿರುವ ಆಂದೋಲನ ಇಂದಿನ ಮಹಿಳಾ ದಿನಾಚರಣೆ ಸಂದರ್ಭದಲ್ಲಿ 640 ಜಿಲ್ಲೆಗಳಿಗೆ ವಿಸ್ತರಣೆಗೊಂಡಿದೆ.
ಕಾರ್ಯಕ್ರಮದಲ್ಲಿ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಸಚಿವೆ ಮನೇಕಾ ಗಾಂಧಿ, ರಾಜಸ್ತಾನ ಮುಖ್ಯಮಂತ್ರಿ ವಸುಂಧರಾ ರಾಜೇ ಮತ್ತಿತರರು ಉಪಸ್ಥಿತರಿದ್ದರು.
