ಕಲಬುರಗಿ: ಜಿಲ್ಲೆಯ ಸೇಡಂ ತಾಲೂಕಿನ ನೃಪತುಂಗ ನೆಲ ಮಳಖೇಡ ಕೋಟೆಯಲ್ಲಿ ಮಾ. 4 ಹಾಗೂ 5 ರಂದು ನಡೆಯಲಿರುವ ರಾಷ್ಟ್ರಕೂಟ ಉತ್ಸವಕ್ಕೆ ಜಿಲ್ಲಾಡಳಿತ ಭರದ ಸಿದ್ದತೆ ನಡೆಸಿದೆ.
ಕೋಟೆ ಆವರಣ ಸ್ಚಚ್ಛತೆ, ಆಮಂತ್ರಣ ಪತ್ರಿಕೆ ಸಿದ್ಧಪಡಿಸುವುದು ಸೇರಿದಂತೆ ಪ್ರಮುಖ ಕಾರ್ಯಗಳು ಈಗಾಗಲೇ ಮುಗಿದಿವೆ. ಉತ್ಸವ ಯಶಸ್ವಿಗೊಳಿಸಲು ಧ್ವನಿಸುರಳಿ ಮೂಲಕ ಪ್ರಚಾರ ಮಾಡಲಾಗುತ್ತಿದೆ. ಜಿಲ್ಲಾ ಉಸ್ತುವಾರಿ ಸಚಿವ, ಜಿಲ್ಲಾಡಳಿತ ಸಾಕಷ್ಟು ಮುತುವರ್ಜಿಯಿಂದ ಕಾರ್ಯ ನಿರ್ವಹಿಸುತ್ತಿದೆ.
ಜ್ಞಾನಪೀಠ ಪ್ರಶಸ್ತಿ ಪುರಸ್ಕೃತ ಸಾಹಿತಿ ಚಂದ್ರಶೇಖರ ಕಂಬಾರ ಅವರು ಉತ್ಸವಕ್ಕೆ ಚಾಲನೆ ನೀಡಲಿದ್ದಾರೆ.
ಉತ್ಸವ ನಿಮಿತ್ತ ಈಗಾಗಲೇ ಜಿಲ್ಲೆಯ ಎಲ್ಲ ತಾಲೂಕುಗಳಲ್ಲಿ ರಥಯಾತ್ರೆ ನಡೆಸಲಾಗುತ್ತಿದೆ. ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷ ವೀರಭದ್ರ ಸಿಂಪಿ ಮತ್ತವರ ಬಳಗಕ್ಕೆ ಈ ಕಾರ್ಯ ನಿರ್ವಹಿಸುತ್ತಿದ್ದಾರೆ. ವಿವಿಧ ತಾಲೂಕಿನ 136 ಗ್ರಾಮಗಳಲ್ಲಿ ಈ ರಥಯಾತ್ರೆ ಸಂಚರಿಸಲಿದೆ.
ಮಲ್ಲೇಪುರಂ ಜಿ. ವೆಂಕಟೇಶ, ಪ್ರಾಣೇಶ ಗಂಗಾವತಿ, ಇಬ್ರಾಹಿಂ ಸುತಾರ, ಸಂಗೀತ ನಿರ್ದೇಶಕ ಅರ್ಜುನ ಜನ್ಯ, ವಿದ್ವಾಂಸರು, ಕಲಾವಿದರು ಉತ್ಸವದಲ್ಲಿ ಭಾಗಿಯಾಗಲಿದ್ದಾರೆ ಎಂದು ಹೆಚ್ಚುವರಿ ಜಿಲ್ಲಾಧಿಕಾರಿ ಭೀಮಾಶಂಕರ ತೆಗ್ಗೆಳ್ಳಿ ತಿಳಿಸಿದ್ದಾರೆ.

