ಹುಬ್ಬಳ್ಳಿ: ರಾಹುಲ್ ಗಾಂಧಿ ರಾಜ್ಯಕ್ಕೆ ಎಷ್ಟು ಸಲ ಬಂದರೂ ಯಾವುದೇ ಪ್ರಯೋಜನ ಆಗಲ್ಲ, ಅವರು ಹೋದಲ್ಲಿ ಬಿಜೆಪಿ ಪಕ್ಷ ಅಧಿಕಾರ ಚುಕ್ಕಾಣಿ ಹಿಡಿದಿದೆ ಎಂದು ವಿಪಕ್ಷನಾಯಕ ಜಗದೀಶ್ ಶೆಟ್ಟರ್ ವ್ಯಂಗ್ಯವಾಡಿದ್ದಾರೆ.
ಶನಿವಾರ ಹುಬ್ಬಳ್ಳಿಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಎಐಸಿಸಿ ಅಧ್ಯಕ್ಷ ರಾಹುಲ್ ಗಾಂಧಿ ಮುಂಬೈ ಕರ್ನಾಟಕ ಪ್ರವಾಸ ಮಾಡುತ್ತಿದ್ದು ಅವರು ಪ್ರಚಾರ ಮಾಡಿದಲ್ಲೆಲ್ಲ ಬಿಜೆಪಿ ಅಧಿಕಾರಕ್ಕೆ ಬರಲಿದೆ. ಎಐಸಿಸಿ ಅಧ್ಯಕ್ಷರಾದ ಕಾರಣ ಅನಿವಾರ್ಯವಾಗಿ ಅವರು ಪ್ರಚಾರ ಮಾಡಬೇಕಾಗಿದೆ, ರಾಜ್ಯ ಕಾಂಗ್ರೆಸ್ನವರು ರಾಹುಲ್ ಗಾಂಧಿಯವರನ್ನು ಹೊತ್ತುಕೊಂಡು ಸುಮ್ಮನೆ ಓಡಾಡುತ್ತಾರೆ ಎಂದು ಟೀಕಿಸಿದರು.
ಮೂರು ದಿನಗಳ ಕಾಲ ಉತ್ತರಕರ್ನಾಟಕದಲ್ಲಿ ಪ್ರವಾಸ ಮಾಡಲಿರುವ ರಾಹುಲ್ ಗಾಂಧಿ ಮಹದಾಯಿ ಮತ್ತು ಕಳಸಾ- ಬಂಡೂರಿ ಯೋಜನೆ ಜಾರಿ ಬಗ್ಗೆ ಮಾತನಾಡಬೇಕು. ಕರ್ನಾಟಕಕ್ಕೆ ಹನಿ ನೀರು ಬಿಡಲ್ಲ ಎಂದು ಸೋನಿಯಾ ಗಾಂಧಿ ಹೇಳಿದ್ದರು, ಸದ್ಯೆ ಕರ್ನಾಟಕದ ಪ್ರವಾಸದಲ್ಲಿರುವ ರಾಹುಲ್ ಗಾಂಧಿ ಮಹದಾಯಿ ವಿಚಾರದಲ್ಲಿ ತಮ್ಮ ನಿಲುವನ್ನು ಸ್ಪಷ್ಟಪಡಿಸಬೇಕು. ಗೋವಾ ಕಾಂಗ್ರೆಸ್ ನಾಯಕರಿಗೆ ಮಹದಾಯಿ ವಿಷಯದಲ್ಲಿ ಅಡ್ಡಗಾಲು ಹಾಕದಂತೆ ಸೂಚಿಸಬೇಕು,ಇಲ್ಲದಿದ್ದರೆ ಮಹಾದಾಯಿ ವಿಚಾರದಲ್ಲಿ ಕಾಂಗ್ರೆಸ್ ನಾಟಕ ಮಾಡುತ್ತಿರುವುದು ಸ್ಪಷ್ಟವಾಗುತ್ತೆ ಎಂದರು.
ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರದ್ದು ಗೂಂಡಾ ಸಂಸ್ಕೃತಿ ಅನುಸರಿಸುತ್ತಿದೆ, ಸದನದ ಒಳಗೂ ಹೊರಗೂ ಕಾಂಗ್ರೆಸ್ನವರ ಗೂಂಡಾಗಿರಿ ಮಿತಿಮೀರಿದೆ ಎಂದು ಕಿಡಿಕಾರಿದರು.

