ಕೈಕಂಬ : ಫೆ. 17ರಂದು ವಾಮಂಜೂರು ತಿರುವೈಲುಗುತ್ತು ಸಂಕುಪೂಂಜ-ದೇವುಪೂಂಜ ಜೋಡುಕರೆ ಕಂಬಳ ವಿವಿಧ ಹಂತಗಳಲ್ಲಿ ಕೋಣಗಳ ಓಡಿಸುವ ಸ್ಪರ್ಧೆಯೊಂದಿಗೆ ಅತ್ಯಂತ ಅದ್ದೂರಿ ಹಾಗೂ ಜನಪದೀಯ ಶೈಲಿಯಲ್ಲಿ ಜರುಗಿತು.
ಬೆಳಗ್ಗೆ ಆರಂಭವಾದ ಕಂಬಳ ನಾಳೆಯವರೆಗೂ ಮುಂದುವರಿಯಲಿದೆ. ಸಂಜೆಯವರೆಗೆ ಕೆಲವು ಹಂತದಲ್ಲಿ ಕೋಣಗಳ ಓಟ ನಡೆದಿದ್ದು, ಹಲವರು ಬಹುಮಾನ ಗಳಿಸಿದರು.
ಕಂಬಳಕ್ಕಾಗಿ ನಿರ್ಮಿಸಲಾಗಿರುವ ಎರಡು `ಕರೆ’ಗಳಲ್ಲಿ ಆರೂವರೆ ಮತ್ತು ಏಳೂವರೆ ಕೋಲು ಎತ್ತರದಲ್ಲಿ `ನಿರ್ಸಾನಿ’ ಗುರುತು ಮಾಡಲಾಗಿತ್ತು. ಸಾವಿರಾರು ಕಂಬಳ ಅಭಿಮಾನಿಗಳ ಸಹಿತ ಕೆಲವು ವಿದೇಶಿಗರೂ ಕಂಬಳದ ಕುತೂಹಲದ ಕ್ಷಣಗಳನ್ನು ದಾಖಲಿಸಿಕೊಂಡರು. ತುಳುನಾಡ ಸಂಪ್ರದಾಯದಂತೆ ಅತಿಥಿಗಳ ಸತ್ಕಾರ ಸ್ವಾಗತ ನಡೆಯಿತು.
ಸುರತ್ಕಲ್, ಕೂಳೂರು, ಗುರುಪುರ, ಬೋಳಾರ, ಬೋಳಂಬಳ್ಳಿ, ನಂದಳಿಕೆ ಐಕಳ ಪಟ್ಟೆ, ಹಂಕರ ಜಾಲ್, ಬಾರಕೂರು, ವಾಮಂಜೂರು, ಮೂಡುಕೋಡಿ ವೇಣೂರು, ಬೆಳ್ಯಾರುಗುತ್ತು, ಕೌಡೂರು ಬೀಡು, ಹೊಸಬೆಟ್ಟು ಸಾಣೂರು, ವಿಟ್ಲ, ಇರುವೈಲು, ಸುಳ್ಯ, ಕಳತ್ತೂರು, ಬೋಳದಗುತ್ತು, ಕಾಂತಾವರ ಮೊದಲಾದ ಕಡೆಗಳ ಪ್ರತಿಷ್ಠಿತ ಮನೆತನದ ಕೋಣಗಳು ಸ್ಪರ್ಧಾ ಕಣದಲ್ಲಿದ್ದವು.
ವೇದಿಕೆಯಲ್ಲಿ ಕೆಪಿಸಿಸಿ ಕಾರ್ಯಾಧ್ಯಕ್ಷ ದಿನೇಶ್ ಗುಂಡೂರಾವ್, ಕಾಂಗ್ರೆಸ್ ಯುವ ಮುಖಂಡ ಮಿಥುನ್ ರೈ, ಶಾಸಕ ಮೊೈದಿನ್ ಬಾವ, ಶಿವಕುಮಾರ್, ಲೋಕಯ್ಯ ಶೆಟ್ಟಿ, ಶಾಲೆಟ್ ಪಿಂಟೋ, ಸೀತಾರಾಮ ಜಾಣು ಶೆಟ್ಟಿ, ಗುಣಪಾಲ ಕಡಂಬ, ಎ ಸಿ ವಿಜಯರಾಜ್, ತಿರುವೈಲುಗುತ್ತಿನ ನವೀನ್ಚಂದ್ರ ಆಳ್ವ, ಪ್ರವೀಣಚಂದ್ರ ಆಳ್ವ, ರಾಜಕುಮಾರ್ ಶೆಟ್ಟಿ, ಗಿರೀಶ್ ಆಳ್ವ ಮೊದಲಾದವರು ಉಪಸ್ಥಿತರಿದ್ದರು.

