ಮಡಿಕೇರಿ: ಎರಡು ಕೆಎಸ್ಸಾರ್ಟಿಸಿ ಬಸ್ಗಳ ನಡುವೆ ಮುಖಾಮುಖಿ ಢಿಕ್ಕಿ ಹೊಡೆದ ಪರಿಣಾಮ ಎರಡು ಬಸ್ಸಿನ ಇಬ್ಬರು ಚಾಲಕರು ಸ್ಥಳದಲ್ಲೇ ಮೃತಪಟ್ಟಿದ್ದು, ಸುಮಾರು 15 ಮಂದಿ ಅಧಿಕ ಪ್ರಯಾಣಿಕರು ಗಂಭೀರ ಗಾಯಗೊಂಡಿರುವ ಘಟನೆ ಜಿಲ್ಲೆಯ ಸೋಮವಾರಪೇಟೆ ತಾಲೂಕಿನ ಸುಂಟಿಕೊಪ್ಪ ಸಮೀಪದ ಶಾಂತಿಗೇರಿ ಬಳಿ ಗುರುವಾರ ನಡೆದಿದೆ.
ಪಾಲಾಕ್ಷ ಹಾಗೂ ಶರೀಫ್ ಮೃತಪಟ್ಟ ಎರಡು ಬಸ್ಸಿನ ಚಾಲಕರು ಎಂದು ಗುರುತಿಸಲಾಗಿದೆ.
ಮಡಿಕೇರಿಯಿಂದ ಹಾಸನಕ್ಕೆ ತೆರಳುತ್ತಿದ್ದ ಹಾಗೂ ಮೈಸೂರಿನಿಂದ ಮಡಿಕೇರಿ ಕಡೆಗೆ ಬರುತ್ತಿದ್ದ ಎರಡು ಕೆಎಸ್ಸಾರ್ಟಿಸಿ ಬಸ್ ಗಳ ನಡುವೆ ಢಿಕ್ಕಿ ಹೊಡೆದ ಪರಿಣಾಮ ಎರಡು ಬಸ್ ಗಳ ಚಾಲಕರು ಮೃತಪಟ್ಟಿದ್ದು, 15ಕ್ಕೂ ಅಧಿಕ ಮಂದಿ ಪ್ರಯಾಣಿಕರಿಗೆ ಗಾಯಗಳಾಗಿದೆ. ಇವರನ್ನು ಜಿಲ್ಲಾಸ್ಪತ್ರೆಗೆ ದಾಖಲಿಸಲಾಗಿದೆ.
ಹಾಸನ ಕಡೆಗೆ ತೆರಳುತ್ತಿದ್ದ ಬಸ್ ಚಾಲಕ ಪಾಲಾಕ್ಷನ ಅವರು ಲಾರಿಯೊಂದನ್ನು ಹಿಂದಿಕ್ಕುವ ಭರದಲ್ಲಿ ಮುಂದಿನ ಬಸ್ ಗೆ ಢಿಕ್ಕಿ ಹೊಡಿದಿದ್ದರಿಂದ ಈ ಘಟನೆ ನಡೆದಿದೆ ಎಂದು ತಿಳಿದು ಬಂದಿದೆ.
ಈ ಬಗ್ಗೆ ಸುಂಟಿಕೋಪ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಇನ್ನು ಈ ಘಟನೆಯಿಂದ ಹೆದ್ದಾರಿ ಸಂಚಾರ ಸಂಪೂರ್ಣ ಅಸ್ತವ್ಯಸ್ತಗೊಂಡಿತ್ತು.

