ಮುಂಬೈ: ಜೀವನದಲ್ಲಿ ಜುಗುಪ್ಸೆಗೊಂಡು ಎಂಬಿಎ ಪದವಿಧರ ಯುವಕನೋರ್ವ ಸಮುದ್ರಕ್ಕೆ ಹಾರಿ ಆತ್ಮಹತ್ಯೆ ಮಾಡಿಕೊಂಡ ಘಟನೆ ನಗರದ ಆಶೋರ್ ಜುಹು ಚೌಪಟ್ಟಿಯಲ್ಲಿ ಮಂಗಳವಾರ ತಡವಾಗಿ ಬೆಳಕಿಗೆ ಬಂದಿದೆ.
ಅಜಿತ್ ದುಕ್ರೆ (29) ಆತ್ಮಹತ್ಯೆ ಮಾಡಿಕೊಂಡ ಯುವಕ ಎಂದು ಗುರುತಿಸಲಾಗಿದೆ.
ಅಜಿತ್ ಪುಣೆ ನಿವಾಸಿಯಾಗಿದ್ದು, ಅಣ್ಣನೊಂದಿಗೆ ಘಟಕ್ಪುರನಲ್ಲಿ ವಾಸವಾಗಿದ್ದರು. ಅಲ್ಲದೆ, ಪ್ರತಿಷ್ಠಿತ ಸಂಸ್ಥೆಯೊಂದರಲ್ಲಿ ದುಡಿಯುತ್ತಿದ್ದರು. ಜ.1ರಂದು ಅಜಿತ್ ಮನೆಯಿಂದ ನಾಪತ್ತೆಯಾಗಿದ್ದರು. ಈ ಬಗ್ಗೆ ಅಜಿತ್ ಸಹೋದರ ಅನಿಲ್ ಸ್ಥಳೀಯ ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದರು.
ಅಂದೇ ರಾತ್ರಿ ಇಲ್ಲಿನ ಸಂತಾಕ್ರೂಜ್ ಬಳಿಯ ಆಶೋರ್ ಜುಹು ಚೌಪಟ್ಟಿ ಸಮುದ್ರದಲ್ಲಿ ಅಪರಿಚಿತ ಶವವೊಂದು ಪತ್ತೆಯಾಗಿದ್ದು, ಕಾರ್ಯಾಚರಣೆ ನಡೆಸಿದ ಪೊಲೀಸರು ಮೃತ ದೇಹವನ್ನು ಅಜಿತ್ ಎಂದು ಗುರುತಿಸಿದ್ದಾರೆ.
ಅಜಿತ್ ಪ್ರಕರಣಕ್ಕೆ ಸಂಬಂಧಿಸಿದಂತೆ ತನಿಖೆ ಮುಂದುವರಿಸದ ಪೊಲೀಸರು, ಆತನ ಮನೆ ಕೋಣೆಯನ್ನು ಪರಿಶೀಲನೆ ನಡೆಸಿದ್ದು, ಈ ವೇಳೆ ಅಜಿತ್ ತಾನು ಆತ್ಮಹತ್ಯೆ ಮಾಡುವುದಾಗಿ ಡೆತ್ ನೋಟ್ ಬರೆದಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ.
ಡೆತ್ ನೋಟ್ನಲ್ಲಿ ಏನಿದೆ: “ನನ್ನನ್ನು ಸದಾ ಒಂಟಿತನ ಕಾಡುತ್ತಿತ್ತು.ಇದರಿಂದ ಸಮಾಜದಲ್ಲಿ ಯಾರೊಂದಿಗೆ ಬೆರೆಯಲು ಸಾಧ್ಯವಾಗುತ್ತಿರಲಿಲ್ಲ. ಅಲ್ಲದೆ, ಇವರೊಂದಿಗೆ ವ್ಯವಹರಿಸುವ ಕನಿಷ್ಠ ಜ್ಞಾನವು ನನ್ನಲ್ಲಿ ಇರಲಿಲ್ಲ. ತುಂಬಾ ನೊಂದು ನನ್ನ ಜೀವನಕ್ಕೆ ವಿದಾಯ ಹೇಳಿ, ನಾನು ಜಲ ಸಮಾಧಿ ಆಗುತ್ತಿದ್ದೇನೆ” ಎಂದು ಅಜಿತ್ ಡೆತ್ ನೋಟ್ ನಲ್ಲಿ ಬರೆದಿದ್ದಾರೆ.

