ಕೈಕಂಬ: ಗ್ರಾಮ ಜೀವನ ಬಿಂಬಿಸಿ, ಪುನರುತ್ಥಾನಗೊಳಿಸುವ ಧ್ಯೇಯದೊಂದಿಗೆ ಗುರುಪುರ ಗೋಳಿದಡಿ ಗುತ್ತಿನ ವಾರ್ಷಿಕ `ಪರ್ಬೊ-ಪರ್ಬದ ಸಿರಿ’ ಜಾನಪದೀಯ ಶೈಲಿಯಲ್ಲಿ ಜ. 19ರಂದು ಶ್ರೀ ವೈದ್ಯನಾಥೇಶ್ವರ ಪ್ರಾಂಗಣದಲ್ಲಿ ವಿದ್ಯುಕ್ತವಾಗಿ ಉದ್ಘಾಟನೆಗೊಂಡಿತು. ಉದ್ಘಾಟಕರಾದ ಕಾವೇರಿ ಪೂಜಾರ್ತಿ ಪಾಡ್ದನ ಹಾಡಿದರೆ, ಲಕ್ಷ್ಮಣ ಆಚಾರ್ಯ, ಗಂಗಾಧರ ಸಫಲಿಗ, ಹುಸೈನಬ್ಬ ತಾರಿಕರಿಯ, ಮೌರಿಸ್ ಡಿ’ಸೋಜ, ತಿಮ್ಮಪ್ಪ ಪೂಜಾರಿ, ರಾಮ ಗುರಿಕಾರ `ಪರ್ಬೊದ ಸಿರಿ’ಗೆ ಶುಭ ಹಾರೈಸಿದರು. ಇದೇ ವೇಳೆ ಗುತ್ತಿನ ಮನೆಯ ಶ್ರೀ ಮೂಡುಗಣಪತಿ ಸೇವೆ ಹಾಗೂ ಶ್ರೀ ಚಂಡಿಕಾಹೋಮ ಸಂಪನ್ನವಾಯಿತು.
`ಪರ್ಬೊದ ಸಿರಿ’ ಆಬಾಲವೃದ್ಧರನ್ನು ಆಕರ್ಷಿಸುವಂತಿತ್ತು. ಎಲ್ಲೆಡೆ ಜಾತ್ರೆಯ ಸಡಗರ. ಸಾಲುದ್ದದ ಸಂತೆ(ವ್ಯಾಪಾರಿ ಪ್ರದರ್ಶನ ಮಳಿಗೆ) ಹಾಗೂ ಪ್ರಾಚ್ಯ ವಸ್ತುಗಳ ಪ್ರದರ್ಶನ ನಿಬ್ಬೆರಗಾಗಿಸುವಂತಿದೆ. ಒಂದೆಡೆ ಮಕ್ಕಳ ಆಟಿಕೆಗಳ ಮಾರಾಟ ಕಂಡು ಬಂದರೆ, ಇನ್ನೊಂದೆಡೆಗ್ರಾಮೀಣ ಜನಜೀವನದಲ್ಲಿ ಯಥೇಚ್ಚ ಬಳಕೆಯಾಗುತ್ತಿದ್ದ ಸೊತ್ತುಗಳ ಪ್ರದರ್ಶನ.
ಪರ್ಬದ ಸಿರಿಯಲ್ಲಿ ಮಕ್ಕಳ ಆಟಿಕೆ ಮಾರಾಟ, ಶ್ರೀದತ್ತ ತುಳ ಜಾನಪದ ಮತ್ತು ಇತಿಹಾಸ ಅಧ್ಯಯನ ಕೇಂದ್ರ ನೆಲ್ಲಿಕಟ್ಟೆ(ಹಿರ್ಗಾನ-ಕಾರ್ಕಳ) ಇಲ್ಲಿನ ರ್ಸುಧಾಕರ ಶೆಟ್ಟಿ ನೇತೃತ್ವದಲ್ಲಿ ಪ್ರಾಚ್ಯ ಮತ್ತು ಗ್ರಾಮೀಣ ವಸ್ತುಗಳ ಪ್ರದರ್ಶನ ಹಾಗೂ ಆಶಿಕಾ ಕಡಂಬರಿಂದ ಪ್ರಾಚ್ಯ ಮತ್ತು ದೇಶ-ವಿದೇಶಗಳ ನಾಣ್ಯಗಳ ಪದರ್ಶನ ಆಯೋಜಿಸಲಾಗಿತ್ತು. ಉಳಿದಂತೆ ಶ್ರೀ ಮಹಾಮಾಯಿ ಮಹಾಗಣಪತಿ ಹೋಂ ಪ್ರಾಡಕ್ಸ್ (ಮುಲ್ಕಿ-ಕರ್ನಿರೆ) ಮಾರಾಟ-ಪ್ರದರ್ಶನ, ಶ್ರೀ ಅಂಬಿಕಾ ಮಹಿಳಾ ಗೃಹ ಉದ್ಯಮ ಇಳಂತಿಲದವರ(ಮೂಲಿಕಾವನ-ಉಪ್ಪಿನಂಗಡಿ) ಡಯಾಬಿಟಿಸ್ ಔಷಧಿ ಮಾರಾಟ, ಉತ್ತರ ಭಾರತದ ಪರಿಸರ ಸ್ನೇಹಿ-ಸೀಸರಹಿತ ವಿಶಿಷ್ಠ ಮಣ್ಣಿನ ಉತ್ಪನ್ನಗಳ ಮಾರಾಟ-ಪ್ರದರ್ಶನ, ದಾವಣಗೆರೆಯ ವಾಲಿ ಕರಿ ಜೀರಿಗೆ (ಕಲೂಂಜಿ) ಸಾವಯವ ಜೀಜಗಳ ಮಾರಾಟ, ಧನ್ವಂತರಿ ನೋವು ನಿವಾರಕ ಮಲಾಮು (ಬೆಳಗಾವಿ), ಶ್ರೀ ಜ್ಞಾನಗಂಗಾ ಪುಸ್ತಕ ಮಳಿಗೆ, ಜ್ಯೂಸಿನಂಗಡಿ(ಉಚಿತ), ಮಕ್ಕಳ ತಿರುಗುವ ತೊಟ್ಟಿಲು, ಕಬ್ಬಿಣ ಕಾಯಿಸುವ `ಸಿದಿ’, ಕಂಬಳದ ಕೋಣ, ಕುದುರೆ, ಜಾನುವಾರು ಕಾಣಬಹುದು. ಜೊತೆಗೆ ಗುತ್ತಿನ ಗತ್ತಿನ ಜಾತ್ರೆಗೆ ಆಗಮಿಸಿದವರಿಗೆ ಊಟೋಪಚಾರ ಹಾಗೂ ಒಂದೊಂದು ಕಲ್ಲಂಗಡಿ(ಬಚ್ಚಂಗಾಯಿ) ಲಭ್ಯವಿದೆ. ಹತ್ತಿರದಲ್ಲೇ ಅಗೋಳಿ ಮಂಜಣ್ಣ ಆಖಾಡದಲ್ಲಿ ಗ್ರಾಮೀಣ ಮಹಿಳಾ ಮತ್ತು ಪುರುಷರಿಗೆ ವ್ಯವಸ್ಥೆಗೊಳಿಸಲಾಗಿರುವ ಶಕ್ತಿಕಲ್ಲು ಎತ್ತುವ ಸ್ಪರ್ಧೆಗೆ ಅಣಿಗೊಳಿಸಲಾದ ಕಲ್ಲುಗಳು ಕಂಗೊಳಿಸುತ್ತಿದ್ದವು.
…………..
ಏನಿದು ಬಾಳೆ
ನಾರಿನ ಸೀರೆ ?
ಬಾಳೆ ಎಲೆ ಊಟಕ್ಕೆ ಉಪಯೋಗಿಸುವುದು ಮತ್ತು ಮಲ್ಲಿಗೆ ಹೆಣೆಯಲು ಬಾಳೆನಾರು ಉಪಯೋಗಿಸುತ್ತಾರೆಂಬುದು ಗೊತ್ತಿದೆ. ಆದರೆ ಇದೇ ಬಾಳೆನಾರಿನಿಂದ ಸೀರೆ ತಯಾರಿಸುತ್ತಾರೆ ಎಂಬ ವಿಷಯ `ಪರ್ಬೊದ ಸಿರಿ’ಯಲ್ಲಿ ಹಲವರ ಕುತೂಹಲಕ್ಕೆ ಕಾರಣವಾಯಿತು.
“ಇದು ಬಾಳೆ ನಾರಿನ ಸೀರೆ ಎಂದರೆ ಒಪ್ಪಿಕೊಳ್ಳಲು ಯಾರೂ ಸಿದ್ಧರಿರುವುದಿಲ್ಲ. ಪ್ರಾಚೀನ ಭಾರತದಲ್ಲಿ ಬಳಕೆಯಾಗುತ್ತಿದ್ದ `ನಾರು ಮಡಿ'(ನಾರುಡುಗೆ) ಎಂದರೆ ಬಾಳೆ ನಾರಿನ ಬಟ್ಟೆಬರೆ ಎಂದರ್ಥ. ಕೈಮಗ್ಗದಲ್ಲಿ ನಿರ್ಮಿಸಲಾಗುತ್ತಿದ್ದ ಈ ಬಟ್ಟೆ ಈಗ ಬಹುತೇಕ ಅಳಿದು ಹೋಗಿದೆ. ಅಚ್ಚರಿಯೆಂದರೆ ಉತ್ತರ ಪ್ರದೆಶದ ಆಗ್ರಾದ ಗ್ರಾಮವೊಂದರಲ್ಲಿ ಇದೀಗ ತನ್ನ ಅಸ್ತಿತ್ವ ಕಂಡುಕೊಂಡಿದ್ದು, ಉದ್ಯಮವಾಗಿ ಬೆಳೆಯುತ್ತಿದೆ. ಇದಕ್ಕೆ ಅಲ್ಲಿನ ಸರ್ಕಾರ ಸಹಾಯಧನ ನೀಡುತ್ತಿದೆ. ಬಾಳೆನಾರಿನ ಬಟ್ಟೆ ತಂಪಾಗಿದ್ದು, ಆರೋಗ್ಯಕ್ಕೆ ಉತ್ತಮ. ಈ ಬಟ್ಟೆಗೆ ಬೆಳ್ಳಿ ಝರಿ ಸೇರಿಸಿ ಸೀರೆ ಹೆಣೆದರೆ ಇದರ ಬೆಲೆ ಲಕ್ಷ ರೂ ದಾಟುತ್ತದೆ. ಪ್ರಸಕ್ತ ಇಲ್ಲಿ ಮಾರಾಟಕ್ಕೆ ತಂದಿರುವ ಸೀರೆಗೆ 5,300 ರೂ ಆಗಿದೆ. ಪುರುಷರ ಲುಂಗಿಗೆ 2,700 ರೂ ಬೆಲೆ ನಿಗದಿಪಡಿಸಲಾಗಿದೆ. ಇದರಲ್ಲಿ ಸ್ವಲ್ಪ ರಿಯಾಯಿತಿ ಇದೆ. ಬಾಳೆನಾರಿನ ಬೆಡ್‍ಶೀಟ್ ಹಾಗೂ ಇತರ ಉತ್ಪನ್ನಗಳಿವೆ. ಬಾಳೆನಾರಿನ ಬಟ್ಟೆ `ಲೈಟ್ ಕ್ರೀಮ್’ ಬಣ್ಣದಲ್ಲಿರುತ್ತದೆ. ಇದಕ್ಕಿಂತ ಮತ್ತೊಂದು ಸಹಜ ಬಣ್ಣದ ಬಟ್ಟೆ ಬಾಳೆನಾರಿಂದ ಉತ್ಪಾದಿಸಲು ಸಾಧ್ಯವಿಲ್ಲ” ಎಂದು ಉಪ್ಪಿನಂಗಡಿಯ ಶ್ರೀ ಮಂಗಳ ಮಹಿಳಾ ಗೃಹ ಉದ್ಯಮದ ಸಿಬ್ಬಂದಿ ಅನಂತ ಪ್ರಸಾದ್ ಹೇಳುತ್ತಾರೆ.
ಬಿದಿರಕ್ಕಿ ಮಾರಾಟ
ಇದೇ ಮಳಿಗೆಯಲ್ಲಿ ಪ್ರಾಚೀನ ಕಾಲದಲ್ಲಿ ಅನಾವೃಷ್ಠಿ-ಬರಗಾಲದ ವೇಳೆ ಅಕ್ಕಿ ಹಾಗೂ ಇತರ ಆಹಾರ ಧಾನ್ಯ ಲಭ್ಯವಿಲ್ಲದಾಗ ನಮ್ಮ ಜನ ತಿನ್ನಲು ಉಪಯೋಗಿಸುತ್ತಿದ್ದ `ಬಿದಿರಕ್ಕಿ’ ಇದೇ ಮಾರಾಟ ಮಳಿಗೆಯಲ್ಲಿದ್ದು, ಕುತೂಹಲಿಗರ ಆಕರ್ಷಿಣೀಯ ಕೇಂದ್ರವಾಗಿದೆ.
………………
ಹತ್ತಿರದಲ್ಲಿ ನಡೆಯುತ್ತಿದ್ದ `ಬಂಡಿ’ ಜಾತ್ರೆ ಅಥವಾ ಪೊಳಲಿ, ಕುಡುಪು ಜಾತ್ರೆಯ ಸಮಯದಲ್ಲಿ ಮಾತ್ರ ಇಂತಹ ಸಂತೆ ಕಂಡಿದ್ದೇನೆ. ಆದರೆ ಈಗ ಅದೆಲ್ಲವೂ ಗೌಣವಾಗಿದೆ. ಅಂದಿನ ಜಾತ್ರೆಯ ಸೊಬಗು ಈಗಿನ ಮಕ್ಕಳಿಗೆ ಸಿಗದು. ಈ ನಿಟ್ಟಿನಲ್ಲಿ ಗೋಳಿದಡಿ ಗುತ್ತಿನಲ್ಲಿ ಆಯೋಜಿಸಲಾಗಿರುವ ಗ್ರಾಮೀಣ ಬದುಕಿನ ಸೊಗಡು ಪ್ರತಿಬಿಂಬಿಸುವ ಬೃಹತ್ `ಪರ್ಬೊದ ಸಿರಿ’ಯು ಯುವ ಪೀಳಿಗೆಗೆ ಗ್ರಾಮೀಣ ಬದುಕು ಹಾಗೂ ಗ್ರಾಮ ಹಬ್ಬಗಳ ಅಂದ ಉಣಬಡಿಸಿದಂತಿದೆ” ಎಂದು `ಪರ್ಬೊದ ಸಿರಿ’ ಉದ್ಘಾಟಕರಲ್ಲೊಬ್ಬರಾದ ಗುರುಪುರ ಕಾವೇರಿ ಪೂಜಾರ್ತಿ(ಪಾಡ್ದಾನ ಹಾಡುಗಾರ್ತಿ) ಹೇಳಿದರು.
