ಬಡಗಬೆಳ್ಳೂರು: ಬಂಟ್ವಾಳತಾಲ್ಲೂಕಿನ ಬಡಗಬೆಳ್ಳೂರು ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಇಲ್ಲಿನ ಬಡಗಬೆಳ್ಳೂರು ಮತ್ತು ತೆಂಕಬೆಳ್ಳೂರು ಗ್ರಾಮಗಳ ಗದ್ದೆ ನಡುವೆ ಹಾದು ಹೋಗಿರುವ ತೋಡಿಗೆ ನೀರಿಂಗಿಸುವ ನೆಪದಲ್ಲಿ ಮಂಗಳೂರಿನ ಯುನೈಟೆಡ್ ಬ್ರಿವೆರೀಸ್ ಲಿಮಿಟೆಡ್ ಸಂಸ್ಥೆ (ಯುಬಿ)ಯು ಕಳೆದ ಏಳು ತಿಂಗಳ ಹಿಂದೆ ಲಕ್ಷಾಂತರ ಮೊತ್ತದ ವೆಚ್ಚದಲ್ಲಿ ನಿರ್ಮಿಸಿದ ‘ನಾಲಾ ಯೋಜನೆ’ ಬಗ್ಗೆ ಸ್ಥಳೀಯ ರೈತರ ದೂರಿಗೆ ಸಂಬಂಧಿಸಿದಂತೆ ಮಂಗಳೂರು ಲೋಕಾಯುಕ್ತರು ಸಹಿತ ಬಂಟ್ವಾಳ ಕಂದಾಯ ಇಲಾಖೆ ಅಧಿಕಾರಿಗಳು ಶನಿವಾರ ಸಂಜೆ ಭೇಟಿ ನೀಡಿ ಪರಿಶೀಲನೆ ನಡೆಸಿದರು.

ಲೋಕಾಯುಕ್ತ ಇನ್ಸ್‍ಪೆಕ್ಟರ್ ವಿವೇಕಾನಂದ, ತಹಶೀಲ್ದಾರ್ ಪುರಂದರ ಹೆಗ್ಡೆ, ಕಂದಾಯ ನಿರೀಕ್ಷಕ ಕೆ.ರಾಮ, ಗ್ರಾಮಕರಣಿಕೆ ಜ್ಯೋತಿ, ಪಿಡಿಒ ಹರೀಶ್, ಸೀತಾರಾಮ ಪೂಜಾರಿ, ಸಹಾಯಕ ವಿಠಲ್ ಸ್ಥಳಕ್ಕೆ ಭೇಟಿ ನೀಡಿದ್ದರು. 
ರೈತರ ಆರೋಪ:
ಮಂಗಳೂರಿನ ಯುನೈಟೆಡ್ ಬ್ರಿವೆರೀಸ್ ಲಿಮಿಟೆಡ್ ಸಂಸ್ಥೆ (ಯುಬಿ)ಯು ಆರಂಭದಲ್ಲಿ ಇಲ್ಲಿನ ರೈತರಿಗೆ ಸುಮಾರು 7 ಕಿ.ಮೀ. ಉದ್ದಕ್ಕೆ ಗದ್ದೆ ಬದಿ ಹಾದು ಹೋಗಿರುವ ತೋಡಿಗೆ ನಾಲೆ ನಿರ್ಮಿಸಿ ಕೊಡುವುದಾಗಿ ಭರವಸೆ ನೀಡಿತ್ತು. ಆದರೆ ಇಲ್ಲಿನ ಸಾಣೂರುಪದವು-ಕೊಳತ್ತಮಜಲು ಮುಖ್ಯ ರಸ್ತೆಗೆ ಕಾಣುವಂತೆ ಕೇವಲ 300 ಮೀಟರಿನಷ್ಟು ಮಾತ್ರ ನಾಲಾ ಯೋಜನೆ ಕಾಮಗಾರಿ ನಡೆಸಿದ್ದಾರೆ.
ಇದು ತೀರಾ ಕಳಪೆ ಗುಣಮಟ್ಟದಿಂದ ಕೂಡಿದ್ದು, ಕಳೆದ ಜೂ.12ರಂದು ತರಾತುರಿಯಲ್ಲಿ ಲೋಕಾರ್ಪಣೆಗೊಂಡಿದೆ. ಮಾತ್ರವಲ್ಲದೆ ರೈತರ ಗದ್ದೆಗೆ ಹಾನಿ ಉಂಟು ಮಾಡಿದ ಪರಿಣಾಮ ಇಲ್ಲಿನ ಬಹುತೇಕ ಗದ್ದೆಗಳಿಗೆ ಮಳೆಗಾಲದಲ್ಲಿ ಕೆಸರು ನೀರು ತುಂಬಿಕೊಂಡು ಕೃಷಿ ಚಟುವಟಿಕೆ ನಡೆಸಲು ಅಸಾಧ್ಯವಾಗಿದೆ. ಈ ಯೋಜನೆಯಲ್ಲಿ ವ್ಯಾಪಕ ಭ್ರಷ್ಟಾಚಾರ ನಡೆದಿದ್ದು, ಇದರಲ್ಲಿ ಕಂಪೆನಿ ಮುಖ್ಯಸ್ಥರು ಮಾತ್ರವಲ್ಲದೆ ಸ್ಥಳೀಯ ಕೆಲವೊಂದು ಪ್ರಭಾವಿ ವ್ಯಕ್ತಿಗಳು ಕೂಡ ಶಾಮೀಲಾಗಿದ್ದಾರೆ ಎಂದು ಆರೋಪಿಸಿ ಸ್ಥಳೀಯ ಹೋರಾಟಗಾರ ಉಮೇಶ ಶೆಟ್ಟಿ ನೇತೃತ್ವದಲ್ಲಿ ನೂರಾರು ಮಂದಿ ರೈತರು ಮಂಗಳೂರು ಲೋಕಾಯುಕ್ತರು ಮತ್ತು ಬಂಟ್ವಾಳ ಕಂದಾಯ ಇಲಾಖೆ ಅಧಿಕಾರಿಗಳಿಗೆ ದೂರು ಸಲ್ಲಿಸಿದ್ದರು.
ಹೋರಾಟಗಾರ ಉಮೇಶ ಶೆಟ್ಟಿ ಪರಿಮೊಗರು, ಸ್ಥಳೀಯ ಕೃಷಿಕರಾದ ಪ್ರಸನ್ನ ಪೂಜಾರಿ, ಶೀನ ಪೂಜಾರಿ ಕಟ್ಟೆ, ನಾರಾಯಣ ಶೆಟ್ಟಿ, ಗುಣಪಾಲ ಶೆಟ್ಟಿ, ನಾರಾಯಣ ಮೂಲ್ಯ, ಇನಾಸ್ ಫೆರ್ನಾಂಡಿಸ್ ನಾರಾಯಣ ನಾಯಕ್ , ವಾಮನ ಪಡೀಲ್ ಬೈಲು,ಸಂಜೀವ ಶೆಟ್ಟಿ ಮತ್ತಿತರರು ಇದ್ದರು.
