ಬಂಟ್ವಾಳ: ತಾಲೂಕಿನ ಮಾಡಮೆ-ಕರ್ಪೆ ರಸ್ತೆ ನಡುವಿನ ಕಂಡದಬೆಟ್ಟು ಎಂಬಲ್ಲಿ ಕ್ರಿಸ್ಮಸ್ ಹಬ್ಬ ಸಂಭ್ರಮದಲ್ಲಿದ್ದ ರಿಕ್ಷಾ ಚಾಲಕರೊಬ್ಬರು ಮನೆ ಸಮೀಪದ ತೆರೆದ ಬಾವಿಗೆ ಆಕಸ್ಮಿಕವಾಗಿ ಬಿದ್ದು ಸಾವನ್ನಪ್ಪಿದ ಘಟನೆ ಸೋಮವಾರ ನಡೆದಿದೆ.
ಮೃತರನ್ನು ಸ್ಥಳೀಯ ನಿವಾಸಿ ದಿವಂಗತ ನಿಕೋಲಸ್ ಪಿಂಟೋ ಎಂಬವರ ಪುತ್ರ ಪ್ರವೀಣ್ ಪಿಂಟೋ(32) ಎಂದು ಗುರುತಿಸಲಾಗಿದೆ.
ಇವರು ಸೋಮವಾರ ಮಧ್ಯಾಹ್ನ ಸುಮಾರು 3ಕ್ಕೆ ಮನೆ ಸಮೀಪದಲ್ಲಿರುವ ಸಂಬಂಧಿ ಆಲ್ವಿನ್ ರಾಡ್ರಿಗಸ್ ಎಂಬವರ ಮನೆಯಿಂದ ಕ್ರಿಸ್ಮಸ್ ಹಬ್ಬಕ್ಕೆ ತಯಾರಿಸಿದ ಇಡ್ಲಿ ಮತ್ತು ಮಾಂಸ ಮನೆಗೆ ತರುತ್ತಿದ್ದ ವೇಳೆ ಅಡಿಕೆ ತೋಟದಲ್ಲಿ ತೆರೆದ ಬಾವಿಗೆ ಆಕಸ್ಮಿಕವಾಗಿ ಕಾಲು ಜಾರಿ ಬಿದ್ದು ಮೃತಪಟ್ಟಿದ್ದಾರೆ ಎಂದು ತಿಳಿದು ಬಂದಿದೆ.
ಬಾವಿಯಲ್ಲಿ ಅಳವಡಿಸಿದ್ದ ಸಿಮೆಂಟ್ ರಿಂಗ್ ಇವರ ತಲೆಗೆ ತಾಗಿ ಗಂಭೀರ ಗಾಯಗೊಂಡು ನೀರಿನಲ್ಲಿ ಮುಳುಗಿದ್ದರು. ಈ ಸಂದರ್ಭದಲ್ಲಿ ಉಂಟಾದ ಭಾರೀ ಶಬ್ಧಕ್ಕೆ ಓಡಿ ಬಂದ ಆಲ್ವಿನ್ ಮತ್ತು ಸ್ಥಳೀಯರು ಧಾವಿಸಿ ಬಂದರೂ ಗಾಯಾಳುವನ್ನು ಮೇಲೆತ್ತಲು ಸಾಧ್ಯವಾಗಿಲ್ಲ. ಬಂಟ್ವಾಳ ಅಗ್ನಿಶಾಮಕ ದಳ ತಂಡ ಆಗಮಿಸಿ ಮೃತ ದೇಹವನ್ನು ಸಂಜೆ ವೇಳೆಗೆ ಮೇಲೆತ್ತಿದೆ ಎಂದು ಪುಂಜಾಲಕಟ್ಟೆ ಠಾಣೆ ಪೊಲೀಸರು ತಿಳಿಸಿದ್ದಾರೆ.
ತೀರಾ ಬಡ ಕುಟುಂಬ: ಕಳೆದ 4 ವರ್ಷಗಳ ಹಿಂದೆ ತಂದೆ ನಿಕೋಲಸ್ ಪಿಂಟೋ ಸಾವನ್ನಪ್ಪಿದ್ದು, ಹಿರಿಯ ಸಹೋದರಿಗೆ ಈಗಾಗಲೇ ವಿವಾಹವಾಗಿದೆ. ಮನೆಯಲ್ಲಿ ಅನಾರೋಗ್ಯಪೀಡಿತ ವಯೋವೃದ್ಧೆ ತಾಯಿ ಲಿಲ್ಲಿ ಪಿಂಟೋ ಮತ್ತು ಅವಿವಾಹಿತ ಪ್ರವೀಣ್ ಪಿಂಟೋ ಮಾತ್ರ ಇದ್ದರು. ತೀರಾ ಬಡ ಕುಟುಂಬ ಮತ್ತು ಅನಾರೋಗ್ಯಪೀಡಿತ ತಾಯಿ ನೋಡಿಕೊಳ್ಳುತ್ತಿದ್ದ ಮೃತ ಪ್ರವೀಣ್ ಪಿಂಟೊ ರಿಕ್ಷಾ ಚಾಲನೆ ಮತ್ತು ಕೂಲಿ ಕೆಲಸ ಮಾಡುತ್ತಿದ್ದರು. ಇದೀಗ ಮನೆಗೆ ಆಧಾರವಾಗಿದ್ದ ಏಕೈಕ ಪುತ್ರನನ್ನು ಕಳೆದುಕೊಂಡು ಅನಾಥೆಯಾಗಿದ್ದೇನೆ ಎಂದು ಮೃತರ ತಾಯಿ ಲಿಲ್ಲಿ ಪಿಂಟೋ ಆಳಲು ತೋಡಿಕೊಂಡಿದ್ದಾರೆ.
