ಬಂಟ್ವಾಳ:ಇಲ್ಲಿನ ತ್ಯಾಜ್ಯ ವಿಲೇವಾರಿಗೆ ಸಂಬಂಧಿಸಿದಂತೆ ಪ್ರತೀ ತಿಂಗಳು ರೂ ಆರು ಲಕ್ಷ ಮೊತ್ತ ವ್ಯಯಿಸಲಾಗುತ್ತಿದ್ದು, ಗುತ್ತಿಗೆದಾರರು ಪುರಸಭೆ ಹೆಸರಿನಲ್ಲಿ ರಶೀದಿ ವಿತರಿಸಿ ಮತ್ತೆ ರೂ 3ಲಕ್ಷ ಮೊತ್ತ ಮನೆಗಳಿಂದ ವಸೂಲಿ ಮಾಡುತ್ತಿದ್ದಾರೆ. ಕಸ ಗುಡಿಸುವ ಕೂಲಿ ಕಾರ್ಮಿಕರಿಗೆ ವೇತನ ಪಾವತಿಸಲು ಪ್ರತೀ ತಿಂಗಳು ರೂ 13,260 ಮೊತ್ತ ಇಲ್ಲಿಂದ ಪಡೆಯುವ ಗುತ್ತಿಗೆದಾರರು ಕಾರ್ಮಿಕರಿಗೆ ಕೇವಲ ರೂ 6,500 ನೀಡುತ್ತಿದ್ದಾರೆ.14btl-Purasabhe

ಪಿಎಫ್, ಇಎಸ್‍ಐ, ಸಮವಸ್ತ್ರ ಸಹಿತ ಸುರಕ್ಷಾ ಸಲಕರಣೆ ಮತ್ತಿತರ ಸೌಲಭ್ಯವೂ ಅವರಿಗೆ ನೀಡದೆ ಅವರ ಎಟಿಎಂ ಮತ್ತು ಪಾಸ್‍ಬುಕ್ ತನ್ನಲ್ಲೇ ಇರಿಸಿಕೊಂಡ ಗುತ್ತಿಗೆದಾರ ಅವರ ಹೆಸರಿನಲ್ಲಿ ಲಕ್ಷಾಂತರ ಮೊತ್ತದ ಹಣ ಗುಳುಂ ಮಾಡುತ್ತಿದ್ದರೂ ಪುರಸಭೆ ಮೌನವಾಗಿರಲು ಸಾಧ್ಯವೇ…? ಬುದ್ದಿವಂತರ ಜಿಲ್ಲೆ ಎಂದು ಕರೆಸಿಕೊಳ್ಳುವ ಈ ಜಿಲ್ಲೆಯ ಬಂಟ್ವಾಳ ಪುರಸಭೆಯಲ್ಲಿ ಜೀತಪದ್ದತಿ ಇನ್ನೂ ಜಾರಿಯಲ್ಲಿದೆಯೇ…? ಪುರಸಭೆಗೆ ಇದಕ್ಕಿಂತ ನಾಚಿಕೆಗೇಡಿನ ಸಂಗತಿ ಬೇರೊಂದಿಲ್ಲ ಎಂದು ವಿರೋಧ ಪಕ್ಷ (ಬಿಜೆಪಿ) ಸದಸ್ಯರಾದ ಬಿ.ದೇವದಾಸ ಶೆಟ್ಟಿ ಮತ್ತು ಎ.ಗೋವಿಂದ ಪ್ರಭು ಇವರು ಆಡಳಿತ ಪಕ್ಷ (ಕಾಂಗ್ರೆಸ್)ವನ್ನು ತರಾಟೆಗೆ ತೆಗೆದುಕೊಂಡ ಘಟನೆ ಗುರುವಾರ ನಡೆದಿದೆ.

ಪುರಸಭಾಧ್ಯಕ್ಷ ಪಿ. ರಾಮಕೃಷ್ಣ ಆಳ್ವ್ಯಧ್ಯಕ್ಷತೆಯಲ್ಲಿ ಗುರುವಾರ ನಡೆದ ಸಾಮಾನ್ಯ ಸಭೆಯಲ್ಲಿ ಈ ಆರೋಪ ಕೇಳಿ ಬಂತು. ಎಸ್‍ಡಿಪಿಐ ಸದಸ್ಯ ಮುನೀಶ್ ಆಲಿ ಇದಕ್ಕೆ ಧ್ವನಿಗೂಡಿಸಿ, ಬಡ ಕಾರ್ಮಿಕರ ಕಣ್ಣೀರ ಶಾಪ ಪುರಸಭೆಗೆ ಬೇಡ ಎಂದರು.ಇನ್ನೊಂದೆಡೆ ಕಳೆದ ಸಾಲಿನಲ್ಲಿ ಅಂಗಡಿ, ಮನೆ ತೆರಿಗೆ, ಕಟ್ಟಡ, ಅಂಗಡಿ, ಕುಡಿಯುವ ನೀರು, ಜಾಹೀರಾತು ಶುಲ್ಕ, ತೆರಿಗೆ ಸಂಗ್ರಹದಲ್ಲಿ ಲಕ್ಷಾಂತರ ಮೊತ್ತದ ಬಾಕಿ ವಸೂಲಿ ಬಗ್ಗೆ ಲೆಕ್ಕಪರಿಶೋಧಕರು ಸಲ್ಲಿಸದ ವರದಿ ಮತ್ತು ಪರಿಸರ ಮಾಲಿನ್ಯ ನಿಯಂತ್ರಣ ಮಂಡಳಿಗೆ ಪಾವತಿಸಲು ಬಾಕಿ ಉಳಿಸಿಕೊಂಡ ರೂ 6ಲಕ್ಷ ಮೊತ್ತದ ದಂಡ ಪಾವತಿ ಬಗ್ಗೆ ಸದಸ್ಯ ಬಿ.ದೇವದಾಸ ಶೆಟ್ಟಿ ಗಮನ ಸೆಳೆದರು.

ಈ ಬಗ್ಗೆ ಪುರಸಭಾಧ್ಯಕ್ಷ ಪಿ.ರಾಮಕೃಷ್ಣ ಆಳ್ವ ಮತ್ತು ಮುಖ್ಯಾಧಿಕಾರಿ ರೇಖಾ ಜೆ.ಶೆಟ್ಟಿ ಪ್ರತಿಕ್ರಿಯಿಸಿ, ಗುತ್ತಿಗೆದಾರರನ್ನು ಕರೆಸಿ ಸೂಕ್ತ ಕ್ರಮ ಕೈಗೊಳ್ಳುವುದಾಗಿ ಭರವಸೆ ನೀಡಿದರು. ಈ ಬಗ್ಗೆ ಕೂಡಲೇ ಸೂಕ್ತ ನಿರ್ಧರ ಕೈಗೊಳ್ಳಬೇಕು ಎಂದು ಆಡಳಿತ ಪಕ್ಷ ಸದಸ್ಯರಾದ ಗಂಗಾಧರ ಪೂಜಾರಿ ಮತ್ತು ಪ್ರವೀಣ ಬಿ. ಧ್ವನಿಗೂಡಿಸಿದರು.ಇದೇ ವೇಳೆ ಪುರಸಭಾ ವ್ಯಾಪ್ತಿಯಲ್ಲಿ ರೂ 50ಲಕ್ಷ ವೆಚ್ಚದದಲ್ಲಿ ಕೈಗೊಂಡ ಸಮಗ್ರ ಕುಡಿಯುವ ನೀರಿನ ಯೋಜನೆ ಕಾಮಗಾರಿ ಮತ್ತು ಪೈಪ್‍ಲೈನ್ ಅಳವಡಿಕೆ ಸಹಿತ ಇದರ ನಿರ್ವಹಣೆ ಮತ್ತು ಗುತ್ತಿಗೆ ಆಧಾರಿತ ಸಿಬ್ಬಂದಿ ನೇಮಕ ಬಗ್ಗೆ ನಗರ ನೀರು ಸರಬರಾಜು ಮತ್ತು ಜಲಮಂಡಳಿ ಎಂಜಿನಿಯರ್ ಶೋಭಲಕ್ಷ್ಮಿ ಸಭೆಗೆ ಮಾಹಿತಿ ನೀಡಿದರು.

ಸ್ಥಾಯಿ ಸಮಿತಿ ಅಧ್ಯಕ್ಷ ವಾಸು ಪೂಜಾರಿ, ಸದಸ್ಯರಾದ ಸದಾಶಿವ ಬಂಗೇರ, ಮಹಮ್ಮದ್ ಶರೀಫ್, ಜಗದೀಶ ಕುಂದರ್, ವಸಂತಿ ಚಂದಪ್ಪ, ಚಂಚಲಾಕ್ಷಿ, ಮಹಮ್ಮದ್ ಇಕ್ಬಾಲ್, ಬಿ.ಮೋಹನ್, ಸುಗುಣ ಕಿಣಿ ಮತ್ತಿತರರು ಚರ್ಚೆಯಲ್ಲಿ ಪಾಲ್ಗೊಂಡರು. ಎಂಜಿನಿಯರ್ ಡೊಮಿನಿಕ್ ಡಿಮೆಲ್ಲೊ, ಮೆನೇಜರ್ ಲೀಲಾವತಿ, ಆರೋಗ್ಯಾಧಿಕಾರಿ ರತ್ನಪ್ರಸಾದ್, ಅಧಿಕಾರಿಗಳಾದ ಮತ್ತಡಿ, ಉಮಾವತಿ, ಸುಶ್ಮಾ ಮತ್ತಿತರರು ಇದ್ದರು.

By suddi9

Leave a Reply

Your email address will not be published. Required fields are marked *