ಮಂಗಳೂರು: ದ.ಕ.ಜಿಲ್ಲೆಯ ವಿವಿಧ ಸಂಘಟನೆಗಳ ಬೀಡಿ ಗುತ್ತಿಗೆದಾರರ ಸಂಘ ಇವರ ನೇತೃತ್ವದಲ್ಲಿ 2017-18 ನೇ ಸಾಲಿನಲ್ಲಿ ಬೀಡಿ ಗುತ್ತಿಗೆದಾರರಿಗೆ ಮಾಲಕರು ನೀಡಬೇಕಾಗಿದ್ದ ಹೆಚ್ಚುವರಿ ಕಮಿಷನ್‍ಗಾಗಿ ಹಲವು ಬಾರಿ ಮಾಲಕರಿಗೆ ಮನವಿ ಸಲ್ಲಿಸಿದರೂ, ಸ್ಪಂದಿಸದೆ ಇದ್ದುದರಿಂದ ದಿನಾಂಕ 13-11-2017 ನೇ ಸೋಮವಾರದಿಂದ ವಿವಿಧ ಬೀಡಿ ಗುತ್ತಿಗೆದಾರರ ಸಂಘಟನೆಗಳು ಅನಿರ್ಧಿಷ್ಟಾವಧಿ ಸರಣಿ ಮುಷ್ಕರ ಕೈ ಗೊಂಡಿದ್ದರು.
ಎಂಟು ದಿನಗಳಿಂದ ನಡೆದ ಮುಷ್ಕರದ ಬಿಸಿ ಮಾಲಕರಿಗೆ ತಟ್ಟಿದ್ದು ದಿನಾಂಕ 20-11-2017 ನೇ ಸೋಮವಾರ ಮುಷ್ಕರದಲ್ಲಿ ಪಾಲ್ಗೊಂಡ ಸಂಘಟನೆಗಳನ್ನು ಮಾತುಕತೆಗೆ ಆಹ್ವಾನಿಸಿದರು. ಮಾತುಕತೆ ಯಶಸ್ವಿಯಾಗಿ 1-4-2017 ರಿಂದ ಅನ್ವಯವಾಗುವಂತೆ ಗುತ್ತಿಗೆದಾರರಿಗೆ ಒಂದು ಸಾವಿರ ಬೀಡಿಗೆ ರೂ.2\- ಹೆಚ್ಚುವರಿ ಕಮಿಷನ್ ನೀಡುವುದಾಗಿ ಒಪ್ಪಿಕೊಂಡಿರುತ್ತಾರೆ.ಈ ಬಗ್ಗೆ ಪತ್ರಿಕಾಗೋಷ್ಠಿ ಕರೆದ ಸಂಘಟನೆಗಳ ಮುಖಂಡರಾದ ಕೃಷ್ಣ ರೈ, ಕೃಷ್ಣಪ್ಪ ತೊಕ್ಕೊಟ್ಟು, ಶ್ರೀ ಗಂಗಾಧರ ಶೆಟ್ಟಿ, ರವಿ ಉಡುಪಿ, ಶಶಿಧರ್ ಕಾಸರಗೋಡು, ಅಬ್ದುಲ್ ಖಾದರ್ ಕಿನ್ನಿಗೋಳಿ, ಬಿ.ಎಂ.ಅಬೂಬಕ್ಕರ್, ಲಕ್ಷ್ಮಣ್ ಕುಮಾರ್ ಫರಂಗಿಪೇಟೆ ಉಪಸ್ಥಿತರಿದ್ದರು.
ಕರಾವಳಿ ಬೀಡಿ ಕಂಟ್ರಾಕ್ಟರ್ಸ್ ಎಸೋಸಿಯೇಶನ್, ದ.ಕ.-ಉಡುಪಿ ಜಿಲ್ಲಾ ಬೀಡಿ ಗುತ್ತಿಗೆದಾರರ ಸಂಘ, ಕರ್ನಾಟಕ ರಾಜ್ಯ ಬೀಡಿ ಗುತ್ತಿಗೆದಾರರ ಸಂಘ, ಜಯ ಕರ್ನಾಟಕ ಬೀಡಿ ಗುತ್ತಿಗೆದಾರರ ಸಂಘ, ಸೌತ್ ಕೆನರಾ ಉಡುಪಿ ಜಿಲ್ಲಾ ಬೀಡಿ ಕಂಟ್ರಾಕ್ಟರ್ಸ್ ಯೂನಿಯನ್ ಸಂಘಟನೆಗಳ ಅಧ್ಯಕ್ಷರು ಹಾಗೂ ಪಧಾಧಿಕಾರಿಗಳು ಮಾಧ್ಯಮ ಪ್ರಕಟನೆಯಲ್ಲಿ ತಿಳಿಸಿದ್ದಾರೆ.ಹಾಗೂ ಬೀದಿಗಿಳಿದು ಮುಷ್ಕರದಲ್ಲಿ ಪಾಲ್ಗೊಂಡು ಹೋರಾಟ ನಡೆಸಿದ ಎಲ್ಲಾ ಬೀಡಿ ಗುತ್ತಿಗೆದಾರರಿಗೆ ಕೃತಜ್ಞತೆಯನ್ನು ತಿಳಿಸಿರುತ್ತಾರೆ.
