ಮಂಗಳೂರು:ಇಂದು ಸ್ಪರ್ಧಾ ಜಗತ್ತು ಎಂದು ಎಲ್ಲಾ ರಂಗಗಳಲ್ಲೂ ಮಕ್ಕಳನ್ನು ತಯಾರು ಮಾಡುತ್ತಿದ್ದೇವೆ. ಸ್ಪಧೆ ಅಂತಿಮವಾಗಿ ಹಿಂಸೆಯನ್ನು ಉಂಟು ಮಾಡುತ್ತದೆ. ಸೋಲು ಅವಮಾನಕರ ಅಲ್ಲ. ಗೆಲ್ಲುವದಕ್ಕಿಂತ ಸೋಲು ಶ್ರೇಯಸ್ಕರ ಎಂದು ಇಂದಿನ ಮಕ್ಕಳಿಗೆ ಹೆತ್ತವರು ತಿಳಿಸಿಕೊಡಬೇಕು ಎಂದು ಜಾನಪದ ವಿದ್ವಾಂಸ ಡಾ. ಕೆ. ಚಿನ್ನಪ್ಪ ಗೌಡ ಹೇಳಿದರು.

ಅವರು ಸುರತ್ಕಲ್‍ನ ಗೋವಿಂದ ದಾಸ ಕಾಲೇಜಿನ ಸಭಾಂಗಣದಲ್ಲಿ ಮಂಗಳೂರು ತಾಲೂಕು ಚುಟುಕು ಸಾಹಿತ್ಯ ಪರಿಷತ್, ರೋಟರಿಕ್ಲಬ್ ಆಶ್ರಯದಲ್ಲಿ ತುಳು ಅಕಾಡೆಮಿ ಮಾಜಿ ಸದಸ್ಯ, ಸಾಹಿತಿ ರಘು ಇಡ್ಕಿದು ಅವರ ” ದೇವರಿಗೆ ಬಿಟ್ಟ ಕಾಗದ” ಕನ್ನಡ ಕವನ ಸಂಕಲನವನ್ನು ಬಿಡುಗಡೆಗೊಳಿಸಿ ಮಾತನಾಡಿದರು.
ಮಕ್ಕಳಿಗೆ ಹೆಚ್ಚೆಚ್ಚು ನಿರ್ಬಂಧ ಹೇರುವುದಕ್ಕಿಂತ ಮಕ್ಕಳು ನಮ್ಮೆದುರೆ ಎಲ್ಲಾ ವಿಚಾರಗಳಿಗೂ ತೆರೆದುಕೊಳ್ಳುವಂತೆ ಮಾಡಬೇಕು. ಪಂಚಭೂತಗಳ ಸ್ಪರ್ಶ ಆದಾಗ ಮಕ್ಕಳು ಉತ್ತಮವಾಗಿ ಬೆಳೆಯಲು ಸಾಧ್ಯ ಎಂದರು.
ಸಮಾರಂಭದ ಅಧ್ಯಕ್ಷತೆ ವಹಿಸಿದ್ದ ಗೋವಿಂದದಾಸ ಕಾಲೇಜಿನ ಪ್ರಾಂಶುಪಾಲ ಡಾ. ಮುರಳಿಧರ್ ರಾವ್ ಮಾತನಾಡಿ, ಮಕ್ಕಳ ಮುಗ್ದತೆ ದೊಡ್ಡವರಲ್ಲಿಯೂ ಇದ್ದರೆ ಮನಸ್ಸು ಅಸ್ವಸ್ಥಗೊಳ್ಳದೆ ಸ್ವಚ್ಛವಾಗಿ ಇರುತ್ತದೆ ಎಂದರು.
ಉಪಪ್ರಾಂಶುಪಾಲ ಪ್ರೊ. ಕೃಷ್ಣಮೂರ್ತಿ, ಡಾ. ಹರಿಕೃಷ್ಣ, ಅರೆಹೊಳೆ ಸದಾಶಿವ ರಾವ್, ನಿವೃತ್ತ ಆರ್‍ಟಿಒ ಅಧೀಕ್ಷಕ ಮಾಧವ ಯು., ಕೃತಿಕಾರ ರಘು ಇಡ್ಕಿದು ಇದ್ದರು. ಅರೆಹೊಳೆ ಸದಾಶಿವ ರಾವ್ ಸ್ವಾಗತಿಸಿದರು. ಶಯಲಜಾ ಕುದುಕೋಳಿ ವಂದಿಸಿದರು.ಎನ್. ಸುಬ್ರಾಯ ಭಟ್ ನಿರೂಪಿಸಿದರು.
