ಮಂಗಳೂರು :ಕವಿ, ಕಥೆಗಾರ, ನಾಟಕಕಾರ, ವಿಮರ್ಶಕ, ಮಕ್ಕಳ ಸಾಹಿತ್ಯ ರಚನೆಕಾರರಾಗಿ ಗುರುತಿಸಿಕೊಂಡಿರುವ ರಘು ಇಡ್ಕಿದು ಮೂಲತ: ಬಂಟ್ವಾಳ ತಾಲೂಕಿನ ಮಿತ್ತೂರಿನವರು. ಇದೀಗ ಮಂಗಳೂರಿನ ಕೆನರಾ ಪದವಿಪೂರ್ವ ಕಾಲೇಜಿನಲ್ಲಿ ಉಪನ್ಯಾಸಕರಾಗಿ ಕಾರ್ಯನಿರ್ವಹಿಸುತ್ತಿದ್ದಾರೆ.
ಕಥೆ, ಕವನ, ನಾಟಕ, ಮಕ್ಕಳ ಸಾಹಿತ್ಯಕ್ಕೆ ಸಂಬಂಧೀಸಿದಂತೆ ಸಾಹಿತ್ಯ ಬರವಣಿಗೆಯ 10ಕ್ಕೂ ಅಧಿಕ ಪುಸ್ತಕಗಳು ಪ್ರಕಟಗೊಂಡಿದೆ. ವಿದ್ಯಾರ್ಥಿ ದೆಸೆಯಲ್ಲಿಯೇ ಬರವಣಿಗೆ ಆರಂಭಿಸಿದ ಅವರು ಕನ್ನಡ ಹಾಗೂ ತುಳು ಭಾಷೆಯ ಅನೇಕ ಸಾಹಿತ್ಯ ಕೃಷಿಗಳಲ್ಲಿ ತೊಡಗಿಸಿಕೊಂಡಿದ್ದಾರೆ. ಅನೇಕ ಕವಿಗೋಷ್ಠಿ, ಕಥಾಗೋಷ್ಠಿ, ವಿಚಾರಗೋಷ್ಠಿಗಳಲ್ಲಿ ಭಾಗವಹಿಸಿದ್ದಾರೆ. ತಾಲೂಕು, ಜಿಲ್ಲೆ ಹಾಗೂ ರಾಜ್ಯ ಮಟ್ಟದ ಸಾಹಿತ್ಯ ಸಮ್ಮೇಳನ, ಗೋಷ್ಠಿಗಳಲ್ಲಿ ಪ್ರಬಂಧ ಮಂಡಿಸಿದ್ದಾರೆ. ಆಕಾಶವಾಣಿಯಲ್ಲಿ ಅವರ ಕಥೆ, ಕವನ, ನಾಟಕ, ಭಾಷಣ ಪ್ರಸಾರವಾಗಿದೆ. ಅನೇಕ ಸಾಹಿತ್ಯ ಕಮ್ಮಟಗಳಲ್ಲಿ ಸಂಪನ್ಮೂಲ ವ್ಯಕ್ತಿಯಾಗಿ ಭಾಗವಹಿಸಿದ್ದಾರೆ.
ಡಾ. ಕೆ. ಚಿನ್ನಪ್ಪ ಗೌಡ ಮತ್ತು ಡಾ. ಸುರೇಂದ್ರರಾವ್ ಸಂಪಾದಿತ ಲಾಡೆಲ್ ಇನ್ ಎ ಗೋಲ್ಡನ್ ಬೌಲ್ ಇಂಗ್ಲೀಷ್ ಕವನ ಸಂಕಲನದಲ್ಲಿ ಅವರ ಪುಚ್ಚೆ ತುಳುವಿನ ಮಹತ್ವದ ಕವನ ಪ್ರಕಟವಾಗಿದೆ.
ಅನಂತ ಕೃಷ್ಣ ಉಡುಪರು ಹೊರ ತಂದಿರುವ ಮದರಂಗಿ ಭಾವಗೀತೆಗಳ ಸಿಡಿಯಲ್ಲಿ ಭಾವಗೀತೆ ಪ್ರಕಟವಾಗಿದೆ. ಕ್ರೀಡೆಗೆ ಸಂಬಂಧಿತ ಕ್ರೀಡಾಧ್ವಜ ಗೀತೆಯನ್ನು ಬರೆದಿದ್ದಾರೆ.
2014 ರಿಂದ 2017ರ ವರೆಗೆ ಕರ್ನಾಟಕ ತುಳು ಸಾಹಿತ್ಯ ಅಕಾಡಮಿಯ ಸದಸ್ಯರಾಗಿ, ಮಂಗಳೂರು ತಾಲೂಕು ಚುಟುಕು ಸಾಹಿತ್ಯ ಪರಿಷತ್ತಿನ ಅಧ್ಯಕ್ಷರಾಗಿ, ವಿಟ್ಲ ತುಳು ಸಾಹಿತ್ಯ ಪರಿಷತ್ತಿನ ಸಕ್ರಿಯ ಸದಸ್ಯರಾಗಿ ಕಾರ್ಯನಿರ್ವಹಿಸಿದ್ದಾರೆ.
ಕನ್ನಡ ಸರಕಾರದ 10ನೇ ತರಗತಿಯ ತುಳು ಪಠ್ಯ ಪುಸ್ತಕದಲ್ಲಿ ಅವರ ಕವನ ಮಕ್ಕಳಿಗೆ ಪಠ್ಯವಾಗಿದೆ. ಮಂಗಳೂರು ವಿಶ್ವವಿದ್ಯಾನಿಲಯದ ತುಳು ಡಿಪ್ಲೋಮಾದ ಪಠ್ಯಗಳಲ್ಲಿ ಅವರನ್ನು ತುಳುವಿನ ಪ್ರಮುಖ ಕವಿಯಾಗಿ ಗುರುತಿಸಲಾಗಿದೆ. ಅಲ್ಲದೇ ಅವರ ಕಥೆಯನ್ನು ತುಳು ಡಿಪ್ಲೋಮಾ ತರಗತಿಯ ಪಠ್ಯಗಳಲ್ಲಿ ಅಳವಡಿಸಲಾಗಿದೆ.
ಆಕಾಶವಾಣಿಯಲ್ಲಿ ಪ್ರಸಾರವಾಗುವ ಭಾವಗೀತೆಗಳಲ್ಲಿ ಅವರ ರಚನೆಯ ನಿನ್ನ ಒಲವಿಗೆ ನಾನು ಹಾಡುವೆ, ಕೊಳಲನು ನುಡಿಸುವ ಮುರಳಿ, ಶ್ರಾವಣ ಭಾವಗೀತೆಗಳು ಜನಪ್ರಯವಾಗಿದೆ.10ಕ್ಕೂ ಅಧಿಕ ಪುಸ್ತಕ ಪ್ರಕಟ 
ಪ್ರಕಟವಾದ ಕೃತಿಗಳು
* ಅಜ್ಜನ ಗಡ್ಡ (2005) ತುಳು ಮಕ್ಕಳ ಕವನ ಸಂಕಲನ
* ತಿಬಿಲೆ (2007) ತುಳು ಕವನ ಸಂಕಲನ
* ಕಾರ್ನಿಕೊ (2008) ತುಳು ಕಥಾ ಸಂಕಲನ
* ಮುಕ್ಕಾಲ್ ಮೂಜಿ ಗಳಿಗೆ (2009) ತುಳು ಕಥಾ ಸಂಕಲನ
* ನನ್ನ ನೆರಳಿನ ಚಿತ್ರ (2013) ಕನ್ನಡ ಕಥಾ ಸಂಕಲನ
* ಮೆನ್ಪರಿ (2015) ತುಳು ಮಕ್ಕಳ ಕವನ ಸಂಕಲನ
* ನಾಗಿ ಮತ್ತು ಇತರ ನಾಟಕಗಳು (2017) ನಾಟಕ ಸಂಕಲನ
* ಮಣ್ಣ್‍ದುಳಾಯಿದ ಬಂಗಾರದ ಬೇರ್ (2017) ತುಳು ಮಕ್ಕಳ ಕಥಾ ಸಂಕಲನ
* ದೇವರಿಗೆ ಬಿಟ್ಟ ಕಾಗದ (2017) ಕನ್ನಡ ಮಕ್ಕಳ ಕವನ ಸಂಕಲನ
* ಕಯ್ಯಾರೆರ್ನ ಕಬಿತೆಲು (2016) ಸಂಪಾದಿತ ಕೃತಿ
ಸಂಪಾದಕರಾಗಿ:
1997ರಲ್ಲಿ ಹೊಸದಿಗಂತ ಪತ್ರಿಕೆಯಲ್ಲಿ ಉಪಸಂಪಾದಕ
* ಕರ್ನಾಟಕ ತುಳು ಸಾಹಿತ್ಯ ಅಕಾಡೆಮಿಯ ಮದಿಪು ತ್ರೈಮಾಸಿಕ ಸಂಚಿಕೆಯ ಸಂಪಾದಕನಾಗಿ ಸೇವೆ.
ಸಂಪಾದಕೀಯ ಮಂಡಳಿಯಲ್ಲಿ
* ಮೋದಕ ಸ್ಮರಣ ಸಂಚಿಕೆ
* ಷಣ್ಮುಖ ಸ್ಮರಣ ಸಂಚಿಕೆ
* ಸಿಂಹ ನಿನಾದ ಸ್ಮರಣ ಸಂಚಿಕೆ
ಅಂಕಣಕಾರನಾಗಿ
* ಉಷಾಕಿರಣ ಪತ್ರಿಕೆಯಲ್ಲಿ ಆಕಾಶವಾಣಿಯ ಅಂಕಣ ಬರಹ ಪ್ರತಿ ಭಾನುವಾರ ಪ್ರಕಟ
* ನಮ್ಮ ಬಂಟ್ವಾಳ ವಾರ ಪತ್ರಿಕೆಯಲ್ಲಿ ಪ್ರತೀ ವಾರ ತುಳು ಮಕ್ಕಳ ಕಥೆ ಪ್ರಕಟವಾಗುತ್ತಿದೆ.
* ಪೂವರಿ ತುಳು ಮಾಸ ಪತ್ರಿಕೆಯಲ್ಲಿ ಸಣ್ಣ ಕಥೆ ಪ್ರಕಟ
* ಅಮೃತ ಪ್ರಕಾಶ ಪತ್ರಿಕೆಯಲ್ಲಿ ಪುಸ್ತಕ ವಿಮರ್ಶೆ ಪ್ರಕಟವಾಗುತ್ತಿದೆ.
ಇಂದು ಕೃತಿ ಬಿಡುಗಡೆ
ಮಂಗಳೂರು ತಾಲೂಕು ಚುಟುಕು ಸಾಹಿತ್ಯ ಪರಿಷತ್ತು, ಗೋವಿಂದ ದಾಸ ಕಾಲೇಜು ಸುರತ್ಕಲ್ ಹಾಗೂ ರೋಟರಿ ಕ್ಲಬ್ ಸುರತ್ಕಲ್ ಆಶ್ರಯದಲ್ಲಿ ಸಾಹಿತಿ ರಘು ಇಡ್ಕಿದು ಅವರ ‘ದೇವರಿಗೆ ಬಿಟ್ಟ ಕಾಗದ’ ಕನ್ನಡ ಮಕ್ಕಳ ಕವನ ಸಂಕಲನ ಅ. 28 ರಂದು ಗೋವಿಂದದಾಸ ಕಾಲೇಜಿನ ಸಭಾಂಗಣದಲ್ಲಿ ಬಿಡುಗಡೆಗೊಳ್ಳಲಿದೆ.
ಕೃತಿಯನ್ನು ಜಾನಪದ ವಿದ್ವಾಂಸ ಡಾ. ಕೆ. ಚಿನ್ನಪ್ಪ ಗೌಡ ಬಿಡುಗಡೆ ಮಾಡಲಿದ್ದಾರೆ. ಗೋವಿಂದಾಸ ಕಾಲೇಜಿನ ಪ್ರಾಂಶುಪಾಲ ಡಾ. ಮುರಳೀಧರ ರಾವ್ ಅಧ್ಯಕ್ಷತೆ ವಹಿಸಲಿದ್ದಾರೆ. ಉಪ ಪ್ರಾಂಶುಪಾಲ ಪ್ರೊ. ಕೃಷ್ಣಮೂರ್ತಿ, ನಿವೃತ್ತ ಆರ್‍ಟಿಒ ಅಧೀಕ್ಷಕ ಮಾಧವ ಯು., ಡಾ. ಹರಿಕೃಷ್ಣ, ಅರೆಹೊಳೆ ಸದಾಶಿವ ರಾವ್ ಭಾಗವಹಿಸಲಿದ್ದಾರೆ.
ಕೃತಿಯ ಕುರಿತು
“ಅಜ್ಜನ ಮನೆಗೆ ಹೋಗಲುಬಹುದು
ಅಜ್ಜಿಯ ಜತೆಯಲಿ ಆಡಲು ಬಹುದು
ಅಜ್ಜನು ಹೇಳುವ ಕತೆಗಳ ಕೇಳುತ
ಖುಶಿಯಲಿ ನಿದ್ದೆಯ ಮಾಡಲುಬಹುದು”
ನಾವೀಗ ಬಹಳ ದೂರ ಬಿಟ್ಟು ಬಂದಿರುವ ಮಾನವೀಯ ಪ್ರಪಂಚವೊಂದರ ಅನುಭವವನ್ನು ದಾಖಲಿಸುವ ಸಾಲುಗಳಿವು. ಅಜ್ಜ-ಅಜ್ಜಿಯರ ಒಡನಾಟ ಗುಡ್ ಮಾರ್ನಿಂಗ್ ಎಂದಷ್ಟಕ್ಕೆ ಸೀಮಿತವಾಗಿದೆ. ಈ ರೀತಿಯ ಕವಿತೆಗಳನ್ನು ಮಕ್ಕಳಿಗೆ ಕಟ್ಟಿಕೊಟ್ಟು ಹಾರುತ್ತಿರುವ ವಿಮಾನವನ್ನು ಕಂಡು ಆನಂದಿಸುವ ಕಣ್ಣುಗಳಿವೆ. ಯೋಧನಾಗಬೇಕೆಂದು ಆಪೇಕ್ಷಿಸುವ ಆಕಾಂಕ್ಷೆಯ ಮನಸ್ಸಿದೆ. ಕನ್ನಡದ ಅಭಿಮಾನವನ್ನು ಬೆಳೆಸುವ ಜಾಗೃತ ಪ್ರಜ್ಞೆಯಿದೆ. ಪೇಪರ್ ಮಾರುವ ಹುಡುಗನ ಕನಸಿದೆ. ತಪ್ಪಿಗೆ ತಕ್ಕ ಶಿಕ್ಷೆಯಿದೆ ಎಂದು ಸಾರುವ ನೀತಿಯಿದೆ.
“ಕವಿಯುತ್ತಿದ್ದ ಆನೆಗಾತ್ರದ
ಮೋಡವೆಲ್ಲಿ ಹೋಯಿತು.
ನಾಟ್ಯವಾಡುತ್ತಿದ್ದ ನವಿಲು
ಎಲ್ಲಿ ಎತ್ತ ಹಾರಿತು”
ಎಂದು ಕಳೆದುಕೊಂಡಿರುವ ಪ್ರಪಂಚವನ್ನು ಹುಡುಕುವ ಬೆರಗಿದೆ. ಮಕ್ಕಳಿಗೆ ಬೇಕಾದ ಎಲ್ಲವನ್ನು ಇಲ್ಲಿ ಅತ್ಯಂತ ಪ್ರಬುದ್ಧ ಸ್ಥಿತಿಯಲ್ಲಿ ಬರೆಯಲಾಗಿದೆ. ನಾವು ನಮ್ಮೋಳಗೆ ಕಳೆದುಕೊಂಡಿರುವ ಏನನ್ನೊ ಮತ್ತೆ ಪಡೆಯುವುದಕ್ಕೆ ಕಾವ್ಯ ಸೇತುವೆಯಾಗಬೇಕು. ಕವನ ಮಾಧ್ಯಮ ಕುಂದರವಾಗದಂತೆ ಮತ್ತೆ ಸೇತುವೆಯಾಗಿ ಜವಾಬ್ದಾರಿ ಈಗ ಬರೆವ ಕವಿಗಳ ಮೇಲಿದೆ. ಅಂತ ಕೆಲಸ ರಘು ಇಡ್ಕಿದು ಅಂತಹ ಪ್ರತಿಭಾವಂತ ಕವಿಗಳು ಅವಶ್ಯಕವಾಗಿ ಮಾಡಬೇಕಿದೆ.
ಲೇಖಕ ರಘು ಇಡ್ಕಿದು
