ಬಂಟ್ವಾಳ:ನಾಲ್ಕು ವರ್ಷಗಳ ಬಳಿಕ ಬಂಟ್ವಾಳ ಪುರಸಭೆಗೆ ಹಠಾತನೆ ರಚನೆಯಾದ ಸ್ಥಾಯಿ ಸಮಿತಿಯಲ್ಲಿ ಗೈರು ಹಾಜರಾದ ಸದಸ್ಯರ ಹೆಸರಿನಲ್ಲಿ ಸಮಿತಿಗೆ ಸದಸ್ಯರೊಬ್ಬರನ್ನು ಅನುಮೋದಿಸಿರುವ ಪ್ರಕರಣ ತಡವಾಗಿ ಬೆಳಕಿಗೆ ಬಂದಿದೆ.ಅ.10ರಂದು ಬಂಟ್ವಾಳ ಪುರಸಭೆಯ ಸಾಮಾನ್ಯ ಸಭೆಗೆ ಅರ್ಧ ತಾಸು ಮುನ್ನಾ ಸ್ಥಾಯಿ ಸಮಿತಿ ರಚನೆಯ ವಿಶೇಷ ಸಭೆ ನಡೆದಿತ್ತು. ಈ ಸಭೆಯಲ್ಲಿ ಸ್ಥಾಯಿ ಸಮಿತಿಗೆ ಏಳು ಮಂದಿ ಸದಸ್ಯರನ್ನು ಸೂಚನೆ ಹಾಗೂ ಅನುಮೋದಿಸುವ ಮೂಲಕ ಆಯ್ಕೆ ಪ್ರಕ್ರಿಯೆ ನಡೆದಿತ್ತು.

ಕಾಂಗ್ರೆಸ್‍ನ ಜೆಸಿಂತ ಡಿಸೋಜ, ಸಂಜೀವಿ, ನಾಮನಿರ್ದೇಶಿತ ಸದಸ್ಯ ಲೋಲಾಕ್ಷ ಶೆಟ್ಟಿ, ಲೋಕೇಶ್ ಪೂಜಾರಿ ಹಾಗೂ ಎಸ್‍ಡಿಪಿಐ ಸದಸ್ಯೆ ಮುಮ್ತಾಝ್ ಸ್ಥಾಯಿ ಆಯ್ಕೆ ಪ್ರಕ್ರಿಯೆ ವೇಳೆ ಗೈರುಹಾಜರಿಯಾಗಿರುವುದು ಪುರಸಭೆಯ ಹಾಜರಿ ಪುಸ್ತಕ ದೃಢಪಡಿಸಿದೆ. ಬಿಜೆಪಿಯ ಐವರು ಸದಸ್ಯರು ಸ್ಥಾಯಿ ಸಮಿತಿ ರಚನೆಯ ವಿಶೇಷ ಸಭೆಯನ್ನು ಪೂರ್ವಸೂಚನೆಯಂತೆ ಬಹಿಷ್ಕರಿಸಿತ್ತು. ಪುರಸಭಾಧ್ಯಕ್ಷ ರಾಮಕೃಷ್ಣ ಆಳ್ವ, ಉಪಾಧ್ಯಕ್ಷ ಮುಹಮ್ಮದ್ ನಂದರ್‍ಬೆಟ್ಟು, ಬುಡಾ ಅಧ್ಯಕ್ಷ, ಸದಾಶಿವ ಬಂಗೇರ ಸೇರಿದಂತೆ ಕಾಂಗ್ರೆಸ್‍ನ ಇತರ ಸದಸ್ಯರು, ಎಸ್‍ಡಿಪಿಐನ ಇಬ್ಬರು ಸದಸ್ಯರು ಹಾಜರಿದ್ದರು.

ಗೈರು ಹಾಜರಿಯಾದವರಿಂದ ಅನುಮೋದನೆ:
ಸ್ಥಾಯಿ ಸಮಿತಿಗೆ ಸದಸ್ಯರನ್ನು ಆಯ್ಕೆ ಮಾಡುವ ವೇಳೆ ಎಸ್‍ಡಿಪಿಐನ ಮೋನಿಶ್ ಆಲಿ ಅಹ್ಮದ್ ಅವರನ್ನು ಅದೇ ಪಕ್ಷ ಮುಹಮ್ಮದ್ ಇಕ್ಬಾಲ್ ಅವರು ಸೂಚನೆ ಮಾಡಿದ್ದರೆ, ಇನ್ನೋರ್ವ ಸದಸ್ಯೆ ಮುಮ್ತಾಝ್ ಅನುಮೋದಿಸಿರೆಂದು ಪುರಸಭೆಯ ಹಾಜರಾತಿ ಪುಸ್ತಕದಲ್ಲಿ ದಾಖಲಾಗಿರುತ್ತದೆ. ಆದರೆ ಸದಸ್ಯೆ ಮುಮ್ತಾಝ್ ಅವರು ಸ್ಥಾಯಿ ಸಮಿತಿಯ ಆಯ್ಕೆ ಪ್ರಕ್ರಿಯೆ ವೇಳೆ ಗೈರು ಹಾಜರಾಗಿದ್ದಾರೆಂಬ ಉಲ್ಲೇಖ ಅದೇ ಹಾಜರಿ ಪುಸ್ತಕದಲ್ಲಿ ದಾಖಲಾಗಿರುತ್ತದೆ. ಹಾಗಾಗಿ ಸದಸ್ಯೆ ಮುಮ್ತಾಝ್ ಅವರು ಗೈರು ಹಾಜರಿಯಲ್ಲಿ ಅನುಮೋದನೆಯಾಗಿರುವುದು ಪುರಸಭಾಡಳಿತ ಮತ್ತೊಂದು ವಿವಾದವನ್ನು ಮೈಮೇಲೆ ಎಳೆದುಕೊಂಡಿದೆ.ಸ್ಥಾಯಿ ಸಮಿತಿ ಅಧ್ಯಕ್ಷರ ಆಯ್ಕೆಯು ಸಮಿತಿ ಸದಸ್ಯರ ಪ್ರತ್ಯೇಕ ಸಭೆ ಕರೆದು ಆಯ್ಕೆ ಮಾಡಬೇಕಿತ್ತು. ಆದರೆ ನೂತನ ಸ್ಥಾಯಿ ಸಮಿತಿಯ ಅಧ್ಯಕ್ಷ ಆಯ್ಕೆ ಮಾತ್ರ ಎಲ್ಲ ಸದಸ್ಯರ ಸಮ್ಮುಖದಲ್ಲಿ ನಡೆದಿದೆ ಎಂದು ಬಿಜೆಪಿ ಸದಸ್ಯರು ಆರೋಪಿಸಿದ್ದಾರೆ.

ಮುಖ್ಯಾಧಿಕಾರಿ ವಿರುದ್ಧ ದೂರು:
ಈ ನಡುವೆ ಪುರಸಭೆಯ ಸಾಮಾನ್ಯ ಸಭೆಯ ನಿರ್ಣಯವನ್ನು ದಾಖಲಿಸುವಲ್ಲಿ ಪುರಸಭಾ ಕಾಯ್ದೆಯನ್ನೇ ಮುಖ್ಯಾಧಿಕಾರಿ ಅವರು ಉಲ್ಲಂಘಿಸಿದ್ದಾರೆ ಎಂದು ಪೌರಾಡಳಿತ ನಿರ್ದೇಶಕರಿಗೆ ಬಿಜೆಪಿ ಸದಸ್ಯ ದೇವದಾಸ್ ಶೆಟ್ಟಿ ದೂರು ಸಲ್ಲಿಸಿದ್ದಾರೆ.ಸ್ಥಳೀಯ ಸಂಸ್ಥೆಯಲ್ಲಿ ನಿರ್ಣಯ ಪುಸ್ತಕದಲ್ಲಿ ನಿರ್ಣಯವನ್ನು ದಾಖಲಿಸುವ ಕುರಿತು ಸ್ಪಷ್ಟ ನಿರ್ದೇಶನವಿದ್ದು, ಈ ನಿರ್ದೇಶನವನ್ನು ಪಾಲಿಸದಿರುವುದರಿಂದ ಗೊಂದಲಕ್ಕೆ ಕಾರಣವಾಗುತ್ತಿದೆ. ಸಭೆಗಳ ಮಹತ್ವವನ್ನು ಕಳೆದುಕೊಳ್ಳುತ್ತಿದೆ ಮತ್ತು ಹಲವಾರು ಅಕ್ರಮ ಹಾಗೂ ಅವ್ಯವಹಾರಕ್ಕೂ ಕಾರಣವಾಗುತ್ತಿದೆ.

ಅ. 10ರಂದು ನಡೆದ ಸಭೆಯ ಮುಗಿದ ಬಳಿಕ ನಿರ್ಣಯವನ್ನು ದಾಖಲಿಸಿ ಅಧ್ಯಕ್ಷರು ಮತ್ತು ಸದಸ್ಯರ ಸಹಿ ಪಡೆಯುವಂತೆ ಸೂಚಿಸಿದರು. ಮುಖ್ಯಾಧಿಕಾರಿ ರೇಖಾ ಶೆಟ್ಟಿ ಅವರು ನಿರ್ಣಯ ದಾಖಲಿಸಲು 3 ದಿನದ ಅವಕಾಶಬೇಕು ಎಂದು ಹೇಳಿ ನಿರ್ಣಯ ದಾಖಲಿಸಲು ನಿರಾಕರಿಸಿದ್ದಾರೆ. ಇದು ಪುರಸಭಾ ಕಾಯ್ದೆಯ ಉಲ್ಲಂಘನೆಯಾಗಿದ್ದು ಅವರ ವಿರುದ್ಧ ಕ್ರಮ ಕೈಗೊಳ್ಳುವಂತೆ ದೂರಿನಲ್ಲಿ ಒತ್ತಾಯಿಸಿದ್ದಾರೆ. ಈ ದೂರಿನ ಪ್ರತಿಯನ್ನು ಮೈಸೂರು ಪ್ರಾದೇಶಿಕ ಆಯುಕ್ತರು, ಜಿಲ್ಲಾಧಿಕಾರಿ, ಸಹಾಯಕ ಆಯುಕ್ತರು ಜಿಲ್ಲಾ ಯೋಜನಾ ನಿರ್ದೇಶಕರಿಗೂ ರವಾನಿಸಿದ್ದಾರೆ.

By Suddi9

Leave a Reply

Your email address will not be published. Required fields are marked *