ಬಂಟ್ವಾಳ:ಜಿಲ್ಲೆಯಲ್ಲಿ ಮೂರು ನದಿಗಳಿಂದ ವ್ಯಾಪಕವಾಗಿ ಮರಳು ಸಿಗುತ್ತಿದ್ದರೂ ಕಳೆದ ನಾಲ್ಕು ವರ್ಷಗಳಿಂದ ಕೃತಕ ಅಭಾವ ಸೃಷ್ಟಿಸುವ ಮೂಲಕ ಕೆಲವೇ ಮಂದಿ ಅಕ್ರಮವಾಗಿ ಹೊರಜಿಲ್ಲೆಗೆ ಮರಳು ರವಾನಿಸುವ ಮೂಲಕ ಅಪಾರ ಪ್ರಮಾಣದಲ್ಲಿ ಹಣ ಗಳಿಸುತ್ತಿದ್ದಾರೆ. ಇದರಿಂದಾಗಿ ನ್ಯಾಯಯುತವಾಗಿ ಮನೆ ಕಟ್ಟುವ ಮತ್ತು ರಸ್ತೆ ಅಭಿವೃದ್ಧಿ ಕಾಮಗಾರಿಗೆ ಬಾರೀ ಸಮಸ್ಯೆ ಉಂಟಾಗಿದೆ. ಈ ಅಕ್ರಮ ಮರಳು ಸಾಗಾಟ ಮತ್ತು ಕೃತಕ ಅಭಾವ ಸೃಷ್ಟಿ ವಿರುದ್ಧ ಇಲ್ಲಿನ ಕ್ಷೇತ್ರ ಬಿಜೆಪಿ ಸಮಿತಿ ವತಿಯಿಂದ ಇದೇ 13ರಂದು ಬೆಳಿಗ್ಗೆ 10 ಗಂಟೆಗೆ ಬಿ.ಸಿ.ರೋಡ್ ರಾಷ್ಟ್ರೀಯ ಹೆದ್ದಾರಿಯಲ್ಲಿ ಪ್ರತಿಭಟನಾ ಜಾಥಾ ಆಯೋಜಿಸಲಾಗಿದೆ ಎಂದು ಬಿಜೆಪಿ ಕ್ಷೇತ್ರಾಧ್ಯಕ್ಷ ಬಿ.ದೇವದಾಸ ಶೆಟ್ಟಿ ಹೇಳಿದ್ದಾರೆ.
ಬಿ.ಸಿ.ರೋಡಿನ ಪಕ್ಷದ ಕಚೇರಿಯಲ್ಲಿ ಶನಿವಾರ ಸಂಜೆ ಪತ್ರಿಕಾಗೋಷ್ಠಿಯಲ್ಲಿ ಅವರು ಮಾತನಾಡಿ, ಜಿಲ್ಲೆಯಲ್ಲಿ ಪ್ರತ್ಯೇಕ ಮರಳು ನೀತಿ ಅನುಷ್ಠಾನಗೊಳಿಸಬೇಕು ಎಂದು ಆಗ್ರಹಿಸಿದರು. ಜಿಲ್ಲೆಯಲ್ಲಿ ಮರಳು ಕೃತಕ ಅಭಾವ ಸೃಷ್ಟಿಗೆ ಜಾಣ ಕುರುಡು ನೀತಿ ಅನುಸರಿಸುತ್ತಿರುವ ಜಿಲ್ಲಾಡಳಿತ ಮತ್ತು ಜಿಲ್ಲಾ ಉಸ್ತುವಾರಿ ಸಚಿವ ಬಿ.ರಮಾನಾಥ ರೈ ಅವರು ನೇರ ಕಾರಣ ಎಂದು ಅವರು ಆರೋಪಿಸಿದರು.
ತಾಲ್ಲೂಕಿನ ಮೂಲರಪಟ್ಣ, ಸಂಗಬೆಟ್ಟು, ಅರಳ, ಸರಪಾಡಿ, ತಂಬೆ, ಸಜಿಪಮುನ್ನೂರು, ಕಡೇಶಿವಾಲಯ, ಕರಿಯಂಗಳ ಗ್ರಾಮ ಸಹಿತ ಹಲವಾರು ಪ್ರದೇಶಗಳಲ್ಲಿ ವ್ಯಾಪಕವಾಗಿ ಮರಳುಗಾರಿಗೆ ನಡೆಯುತ್ತಿದ್ದರೂ ಬಂಟ್ವಾಳದ ಜನರಿಗೆ ಮಾತ್ರ ಪ್ರತಿನಿತ್ಯ ಅಕ್ರಮ ಮರಳು ಸಾಗಾಟ ನೋಡುವ ಭಾಗ್ಯ ಮಾತ್ರ ದೊರೆತಿದೆ ಎಂದು ಅವರು ಟೀಕಿಸಿದರು.
ಅಕ್ರಮ ಮರಳು ಸಾಗಾಟಕ್ಕೆ ತಡೆ:
ಈ ಪ್ರತಿಭಟನೆ ಬಳಿಕವೂ ಜಿಲ್ಲಾಡಳಿತ ಎಚ್ಚೆತ್ತುಕೊಳ್ಳದಿದ್ದಲ್ಲಿ ಸ್ವತಃ ಬಿಜೆಪಿ ಕಾರ್ಯಕರ್ತರೇ ಮರಳು ಲಾರಿ ತಡೆದು ಪೊಲೀಸರಿಗೆ ಒಪ್ಪಿಸುವ ಕಾರ್ಯ ಮಾಡಲಿದೆ. ಮಾತ್ರವಲ್ಲದೆ ನದಿಯಿಂದ ಮರಳು ಮೇಲೆತ್ತಿ ಜನರಿಗೆ ನೇರವಾಗಿ ವಿತರಿಸಲು ಮುಂದಾಗುತ್ತೇವೆ ಎಂದು ಬಿಜೆಪಿ ಜಿಲ್ಲಾ ಉಪಾಧ್ಯಕ್ಷ ಜಿ.ಆನಂದ ಎಚ್ಚರಿಸಿದರು.
ರಾಜಧನ ದುರುಪಯೋಗ:
ಜಿಲ್ಲೆಯ ಸಮಗ್ರ ಅಭಿವೃದ್ಧಿಗೆ ಪ್ರಕೃತಿದತ್ತವಾಗಿ ದೇವರು ಕೊಟ್ಟ ಮರಳು ಸಂಪತ್ತು ಕೇವಲ ಕೆಲವೇ ಮಂದಿ ಪಾಲಾಗುತ್ತಿದೆ. ಇದರಿಂದಾಗಿ ಪ್ರತೀ ವರ್ಷ ಸುಮಾರು 1000 ದಿಂದ 1,500 ಕೋಟಿ ಮೊತ್ತದ ರಾಜಧನ ಸರ್ಕಾರದ ಕೈತಪ್ಪುತ್ತಿದೆ. ಈ ಜಿಲ್ಲೆಯ ಅಭಿವೃದ್ಧಿಗೆ ಇದೇ ಹಣ ಬಳಸಿದರೂ ಜಿಲ್ಲೆಯನ್ನು ‘ಸಿಂಗಾಪುರ ಮಾದರಿ’ಯಲ್ಲಿ ಅಭಿವೃದ್ಧಿ ಪಡಿಸಬಹುದು. ಇದಕ್ಕಾಗಿ ಆನ್ಲೈನ್ ಮಾದರಿಯಲ್ಲಿ ಪಾರದರ್ಶಕ ವ್ಯವಸ್ಥೆ ಮಾಡುವ ಮೂಲಕ ಭ್ರಷ್ಟಾಚಾರಕ್ಕೆ ಕಡಿವಾಣ ಹಾಕಲು ಸಾಧ್ಯವಿದೆ ಎಂದು ಬಿಜೆಪಿ ಮುಖಂಡ ಉಳಿಪಾಡಿಗುತ್ತು ರಾಜೇಶ ನಾಯ್ಕ್ ಸಲಹೆ ನೀಡಿದರು.
ಈ ಜಿಲ್ಲೆಯಲ್ಲಿ ಗಾಂಜಾ ಮಾರಟ ಸೇರಿದಂತೆ ಕಾನೂನು ಬಾಹಿರ ಚಟುವಟಿಕೆ ನಡೆಯುತ್ತಿದ್ದು, ಸಮಾಜದಲ್ಲಿ ಅಶಾಂತಿ ಮತ್ತು ಅಸ್ಥಿರತೆ ಉಂಟು ಮಾಡಲಾಗುತ್ತಿದೆ. ಇನ್ನೊಂದೆಡೆ ಕೇರಳದಿಂದ ಕರಾವಳಿ ಪ್ರದೇಶಕ್ಕೆ ಉಗ್ರರು ನುಸುಳುತ್ತಿರುವ ಬಗ್ಗೆಯೂ ಬಿಜೆಪಿ ಕಳೆದ ಹಲವು ವರ್ಷಗಳಿಂದ ಎಚ್ಚರಿಸುತ್ತಾ ಬಂದಿದ್ದರೂ ಆಡಳಿತಾರೂಢ ಕಾಂಗ್ರೆಸ್ ಮಾತ್ರ ತೀರಾ ನಿರ್ಲಕ್ಷ್ಯ ಧೋರಣೆ ಅನುಸರಿಸುತ್ತಿದೆ. ಈ ಬಗ್ಗೆ ಇನ್ನಾದರೂ ಪೊಲೀಸ್ ಇಲಾಖೆ ಎಚ್ಚೆತ್ತು ಇದನ್ನು ಗಂಭೀರವಾಗಿ ಪರಿಗಣಿಸಿ ತನಿಖೆ ನಡೆಸಬೇಕು ಎಂದು ಅವರು ಆಗ್ರಹಿಸಿದರು.
ದೇಯಿ ಬೈದೆತಿ ವಿಗ್ರಹಕ್ಕೆ ಅಪಮಾನ: 10ರಂದು ಬಿಜೆಪಿ ಪಾದಯಾತ್ರೆ
ತುಳುನಾಡಿನ ವೀರಪುರುಷ ಮತ್ತು ದೈವಾಂಶ ಸಂಭೂತರೆನಿಸಿದ ಕೋಟಿ -ಚೆನ್ನಯರ ತಾಯಿ ದೇಯಿ ಬೈದೆತಿ ವಿಗ್ರಹಕ್ಕೆ ಅವಮಾನಿಸಿ ಫೊಟೋ ತೆಗೆದು ಬಳಿಕ ಸಾಮಾಜಿಕ ಜಾಲತಾಣಗಳಲ್ಲಿ ಹರಡಿದ ಮತಾಂಧ ಶಕ್ತಿಗಳ ವಿರುದ್ಧ ಮತ್ತು ಜಿಲ್ಲೆಯ ಶ್ರದ್ಧಾಕೇಂದ್ರಗಳ ರಕ್ಷಣೆಗಾಗಿ ಇದೇ 10ರಂದು ಪುತ್ತೂರಿನಲ್ಲಿ ಬಿಜೆಪಿ ಪಾದಯಾತ್ರೆ ನಡೆಸಲಿದೆ ಎಂದು ಮಾಜಿ ಶಾಸಕ ಎ.ರುಕ್ಮಯ ಪೂಜಾರಿ ತಿಳಿಸಿದರು.
ಪುತ್ತೂರು ಶ್ರೀ ಮಹಾಲಿಂಗೇಶ್ವರ ದೇವಸ್ಥಾನದ ಗದ್ದೆಯಿಂದ ದೇಯಿ ಬೈದೆತಿ ಔಷಧವನ ತನಕ ಅಂದು ಬೆಳಿಗ್ಗೆ 9.30 ಗಂಟೆಗೆ ನಡೆಯುವ ಪಾದಯಾತ್ರೆಯಲ್ಲಿ ಸಂಸದ ನಳಿನ್ ಕುಮಾರ್ ಕಟೀಲು ಸಹಿತ ಸಾವಿರಾರು ಮಂದಿ ಬಿಜೆಪಿ ಕಾರ್ಯಕರ್ತರು ಮತ್ತು ಮುಖಂಡರು ಭಾಗವಹಿಸಲಿದ್ದಾರೆ ಎಂದು ಅವರು ವಿವರಿಸಿದರು. ಈ ದೇಯಿ ಬೈದೆತಿ ವಿಗ್ರಹ ಪ್ರತಿಷ್ಠೆಗೊಂಡಿಲ್ಲ ಎಂದು ಜಿಲ್ಲಾ ಉಸ್ತುವಾರಿ ಸಚಿವ ಬಿ.ರಮಾನಾಥ ರೈ ಅವರು ಈಗಾಗಲೇ ಹಾರಿಕೆ ಉತ್ತರ ನೀಡಿದ್ದಾರೆ. ಆದರೆ ಮಹಾತ್ಮಾ ಗಾಂಧೀಜಿ, ಡಾ.ಬಿ.ಆರ್.ಅಂಬೇಡ್ಕರ್ ವಿಗ್ರಹಕ್ಕೆ ಇಂತಹ ಅವಮಾನ ನಡೆದಿದ್ದರೆ ಜಿಲ್ಲೆಯಲ್ಲಿ ಏನು ಆಗುತ್ತಿತ್ತು ಎಂಬ ಬಗ್ಗೆಯೂ ಅವರು ಆಲೋಚಿಸಬೇಕು ಎಂದು ಅವರು ಸಲಹೆ ನೀಡಿದರು.
ಸುದ್ದಿಗೋಷ್ಠಿಯಲ್ಲಿ ಪಕ್ಷದ ಪ್ರಮುಖರಾದ ರಾಮದಾಸ ಬಂಟ್ವಾಳ, ಬಿ.ದಿನೇಶ ಭಂಡಾರಿ, ಮೋನಪ್ಪ ದೇವಸ್ಯ, ದಿನೇಶ್ ಅಮ್ಟೂರು, ರಮಾನಾಥ ರಾಯಿ, ಸೀತಾರಾಮ ಪೂಜಾರಿ ಮತ್ತಿತರರು ಉಪಸ್ಥಿತರಿದ್ದರು.
