ಬಂಟ್ವಾಳ:ಮದ್ಯವ್ಯಸನ ಸೇರಿದಂತೆ ವಿವಿಧ ದುಶ್ಚಟಗಳನ್ನು ದೂರ ಮಾಡಿಕೊಂಡು ಸಮಾಜದಲ್ಲಿ ಗೌರವಯುತವಾಗಿ ಹೊಸ ಬದುಕು ಮುನ್ನಡೆಸಲು ಮದ್ಯವರ್ಜನ ಶಿಬಿರ ಸಹಕಾರಿಯಾಗಿದೆ. ಇದರಿಂದಾಗಿ ಶಿಬಿರಾರ್ಥಿಗಳು ದುಶ್ಚಟಮುಕ್ತರಾಗಿ ತನ್ನ ವೈಯಕ್ತಿಕ ಆರೋಗ್ಯದ ಬಗ್ಗೆ ಕಾಳಜಿ ಮತ್ತು ಮನೆಯಲ್ಲಿ ಕುಟುಂಬಿಕರಿಗೆ ನೆಮ್ಮದಿಯ ಜೀವನ ನಡೆಸಲು ಅನುಕೂಲವಾಗುತ್ತದೆ ಎಂದು ವಾಮದಪದವು ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಪ್ರಭಾರ ಪ್ರಾಂಶುಪಾಲ ಪ್ರೊ.ಬಿ.ಹರಿಪ್ರಸಾದ್ ಶೆಟ್ಟಿ ಹೇಳಿದ್ದಾರೆ.
ತಾಲ್ಲೂಕಿನ ವಾಮದಪದವು ಸರ್ಕಾರಿ ಪದವಿಪೂರ್ವ ಕಾಲೇಜಿನಲ್ಲಿ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಮತ್ತು ಜನಜಾಗೃತಿ ವೇದಿಕೆ ವತಿಯಿಂದ ನಡೆಯುತ್ತಿರುವ 1131ನೇ ಮದ್ಯವರ್ಜನ ಶಿಬಿರ ಪ್ರಯುಕ್ತ ಶುಕ್ರವಾರ ಏರ್ಪಡಿಸಿದ್ದ ಶಿಬಿರಾರ್ಥಿಗಳಿಗೆ ಮಾಹಿತಿ ಕಾರ್ಯಾಗಾರ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
ಸಂಪನ್ಮೂಲ ವ್ಯಕ್ತಿಯಾಗಿ ಪತ್ರಕರ್ತ ಮೋಹನ್ ಕೆ.ಶ್ರೀಯಾನ್ ರಾಯಿ ಮಾತನಾಡಿ, ಇತರರ ಒತ್ತಯಕ್ಕೆ ಮಣಿದು ಶಿಬಿರದಲ್ಲಿ ಪಾಲ್ಗೊಳ್ಳುವ ಬದಲಾಗಿ ಶಿಬಿರಾರ್ಥಿಗಳು ಸ್ವ ಇಚ್ಛೆಯಿಂದ ಪಾಲ್ಗೊಂಡಾಗ ತ್ವರಿತವಾಗಿ ದುಶ್ಚಟಮುಕ್ತರಾಗಲು ಸಾಧ್ಯವಾಗುತ್ತದೆ. ಶೀಘ್ರವೇ ದುಶ್ಚಟಮುಕ್ತರಾಗಿ ನವಜೀವನ ಸಮಿತಿ ಸದ್ಯರಾಗುವುದರ ಜೊತೆಗೆ ಭವಿಷ್ಯದಲ್ಲಿ ಗೌರವದ ದುಡಿಮೆಯ ಜೊತೆಗೆ ಉಳಿತಾಯ ಮನೋಭಾವ ಬೆಳೆಸಿಕೊಂಡಾಗ ಕೌಟುಂಬಿಕ ನೆಮ್ಮದಿ ಮತ್ತು ಸಮಾಜದಲ್ಲಿ ಗೌರವ ಪ್ರಾಪ್ತಿಯಾಗುತ್ತದೆ ಎಂದರು.
ಜನಜಾಗೃತಿ ವೇದಿಕೆ ಸದಸ್ಯ ಜಗಧೀಶ ಕೊಯಿಲ ಮತ್ತು ಪುಂಜಾಲಕಟ್ಟೆ ಪೊಲೀಸ್ ಠಾಣಾಧಿಕಾರಿ ರಾಮ ನಾಯ್ಕ್ ಮಾತನಾಡಿ, ಶಿಬಿರಾರ್ಥಿಗಳಿಗೆ ಉದಾಹರಣೆ ಸಹಿತ ಸೂಕ್ತ ಮಾಹಿತಿ ನೀಡಿದರು. ಕಾಲೇಜಿನ ಉಪ ಪ್ರಾಂಶುಪಾಲ ರಾಘವೇಂದ್ರ ಬಲ್ಲಾಳ್, ನವಜೀವನ ಸಮಿತಿ ಸದಸ್ಯ ಕರುಣಾಕರ ಶೆಟ್ಟಿ ಮತ್ತಿತರರು ಇದ್ದರು.
ಶಿಬಿರಾಧಿಕಾರಿ ದೇವಿ ಪ್ರಸಾದ್ ಸುವರ್ಣ ಸ್ವಾಗತಿಸಿ, ವಂದಿಸಿದರು.
