ಕುಂಬಳೆ: ಪೈವಳಿಕೆ ಸಮೀಪದ ಬಾಯಾರು ಮುಳಿಗದ್ದೆ ಪರಿಸರದ ಬೀಡಿ ಕಟ್ಟುವ ಯುವತಿಯನ್ನು ಬಲವಂತವಾಗಿ ರಬ್ಬರ್ ತೋಟಕ್ಕೆ ಕರೆದೊಯ್ದು ಗ್ಯಾಂಗ್ ರೇಪ್ ಪ್ರಕರಣದ ಮುಖ್ಯ ಆರೋಪಿ ಮುಳಿಗದ್ದೆ ಸುಣ್ಣಾಡ ನಿವಾಸಿ ಹಾಗೂ ಸಿಪಿಎಂನ ಯುವಸಂಘಟನೆ ಡಿವೈಎಫ್ಐ ಕಾರ್ಯಕರ್ತನಾಗಿರುವ ಝಕಾರಿಯಾ ಯಾನೆ ಝಕ್ಕಿ (28) ಎಂಬಾತನನ್ನು ಗುರುವಾರ ಬೆಳಗ್ಗೆ ಕೇರಳ ಮತ್ತು ಕರ್ನಾಟಕದ ಗಡಿಪ್ರದೇಶ ಮೀಯಪದವು ಪರಿಸರದಲ್ಲಿ ಬಂಧಿಸಲಾಗಿದೆ. ಈತನಿಗೆ ಸಾಥ್ ನೀಡಿದ ಇನ್ನಿಬ್ಬರನ್ನು ಬಂಧಿಸುವ ಬಗ್ಗೆ ಪೊಲೀಸರು ವಿಶ್ವಾಸ ವ್ಯಕ್ತಪಡಿಸಿದ್ದಾರೆ.

ಮಂಗಳವಾರ ಮಧ್ಯಾಹ್ನ ಮುಳಿಗದ್ದೆ ಬೀಡಿಬ್ರಾಂಚ್ಗೆ ತೆರಳಿ ಮನೆಗೆ ಹಿಂತಿರುಗುತ್ತಿದ್ದ 22ರ ಹರೆಯದ ಯುವತಿಯನ್ನು ಬೈಕ್ನಲ್ಲಿ ಆಗಮಿಸಿದ ಝಕರಿಯಾ ನಿರ್ಜನ ಪ್ರದೇಶದಲ್ಲಿ ತಡೆದುನಿಲ್ಲಿಸಿ ಬೆದರಿಕೆಯೊಡ್ಡಿ ಅಲ್ಲೇ ಪರಿಸರದ ಕಾಡುಪೊದೆಯಿರುವ ಜಾಗಕ್ಕೆ ಎಳೆದೊಯ್ದು ಅಮಾನುಷವಾಗಿ ಲೈಂಗಿಕ ದೌರ್ಜನ್ಯ ನಡೆಸಿದ್ದನು. ಈ ಸಂದರ್ಭ ಯುವತಿ ಬೊಬ್ಬೆ ಹಾಕಿ ತಪ್ಪಿಸಿಕೊಳ್ಳಲು ಪ್ರಯತ್ನಿಸಿದಾಗ ಆಕೆಯ ಮೈಕೈಗಳಿಗೆ ಬ್ಲೇಡ್ನಿಂದ ಗೀರಿ ಆರೋಪಿ ಗಾಯಗೊಳಿಸಿದ್ದನು. ಇದೇ ವೇಳೆ ಪಕ್ಕದ ರಸ್ತೆಯಲ್ಲಿ ಜೀಪೊಂದು ಆಗಮಿಸುತ್ತಿರುವುದನ್ನು ಅರಿತ ಕಾಮಾಂಧರು ಬೈಕ್ನಲ್ಲಿ ಪರಾರಿಯಾಗಿದ್ದರು. ನಂತರ ಯುವತಿಯನ್ನು ಕಾಸರಗೋಡು ಜನರಲ್ ಆಸ್ಪತ್ರೆಯಲ್ಲಿ ದಾಖಲಿಸಲಾಗಿತ್ತು.
ಬಂಧಿತ ಆರೋಪಿ ಝಕಾರಿಯಾ 14ಕ್ಕೂ ಹೆಚ್ಚು ಪ್ರಕರಣದಲ್ಲಿ ಆರೋಪಿಯಾಗಿದ್ದು , ಸುತ್ತಲ ಪರಿಸರದಲ್ಲಿ ಈತ ಜನರಿಗೆ ಭಯ ಹುಟ್ಟಿಸುತ್ತಿದ್ದ. ಪೈವಳಿಕೆ, ಬಾಯಾರು, ಮುಳಿಗದ್ದೆ ಆಸುಪಾಸಿನಲ್ಲಿ ಹಿಂದುಗಳನ್ನು ಬೆದರಿಸುವುದು, ಕೊಲೆ, ಕೊಲೆಯತ್ನ , ದರೋಡೆ, ಲೈಂಗಿಕ ದೌರ್ಜನ್ಯ ಮುಂತಾದ ಅನೇಕ ಕೃತ್ಯಗಳಲ್ಲಿ ಈತ ಭಾಗಿಯಾಗಿದ್ದ ಎನ್ನಲಾಗಿದೆ. ಅಲ್ಲದೆ ಕಾಪಾ, ಗೂಂಡಾ ಕಾಯಿದೆಯಡಿ ಈತನನ್ನು ಬಂಧಿಸಲಾಗಿದ್ದರೂ, ಸಾಖ್ಯಾಧಾರಗಳ ಕೊರತೆಯಿಂದ ಜೈಲಿನಿಂದ ಬಿಡುಗಡೆಗೊಂಡಿದ್ದ. ವಿಟ್ಲ ಕನ್ಯಾನದ ಸುರೇಶ್ ಶೆಟ್ಟಿ ಎಂಬವರಿಗೆ ಹಲ್ಲೆ ನಡೆಸಿದ ಪ್ರಕರಣ, ಪೈವಳಿಕೆಯಲ್ಲಿ ಎಸ್ಐ ಒಬ್ಬರಿಗೆ ಬೆದರಿಕೆ ಹಾಕಿದ ಪ್ರಕರಣವೂ ಇದರಲ್ಲಿ ಸೇರಿದೆ.
