ದಕ್ಷಿಣ ಕನ್ನಡ ಜಿಲ್ಲೆಯ ಸುಳ್ಯ ತಾಲೂಕಿನಲ್ಲಿರುವ ಸುಪ್ರಸಿದ್ಧ ದೇವಾಲಯ. ಇಲ್ಲಿ ಈಶ್ವರ ಪುತ್ರ ಷಣ್ಮುಖ ದೇವರನ್ನು ನಾಗ ರೂಪದಲ್ಲಿ ಸುಬ್ರಹ್ಮಣ್ಯ ಎಂಬ ಹೆಸರಿನಲ್ಲಿ ಆರಾಧಿಸಲಾಗುತ್ತದೆ.ನಾಗಾರಾಧನೆ ಇಲ್ಲಿ ಅತ್ಯಂತ ಮಹತ್ವವನ್ನು ಪಡೆದುಕೊಂಡಿದ್ದು ನಾಗಮಂಡಲವೆಂಬ ಸಾಂಪ್ರದಾಯಿಕ ನೃತ್ಯವನ್ನು ಕಾಣಬಹುದು.kukke subramanya temple

ದೇವಸ್ಥಾನದ   ಬಗ್ಗೆ
ಕುಕ್ಕೆ ಶ್ರೀ ಸುಬ್ರಹ್ಮಣ್ಯ ದೇವಸ್ಥಾನವು ಕರ್ನಾಟಕ ಸರಕಾರದ ಮುಜರಾಯಿ (ಧಾರ್ಮಿಕ ದತ್ತಿ) ಇಲಾಖೆಗೆ ಒಳಪಟ್ಟಿದೆ. ಪ್ರಾಕೃತಿಕ ಸೌಂದರ್ಯದ ಅದ್ಭುತ ರಮಣೀಯ ದೃಶ್ಯಗಳಿಂದ ಕೂಡಿದ ಸುಬ್ರಹ್ಮಣ್ಯ ಗ್ರಾಮವು ಸುಳ್ಯ ತಾಲೂಕು ದಕ್ಷಿಣಕನ್ನಡ ಜಿಲ್ಲೆಯಲ್ಲಿದೆ. ಇಲ್ಲಿಯ ಪಾವಿತ್ರ್ಯತೆಯು ಹಾಗೂ ದೇವ ಸಾನಿಧ್ಯವು ಅತೀ ವಿರಳ ಸ್ಥಳಗಳಲ್ಲಿ ಮಾತ್ರ ಕಾಣಬಹುದಾಗಿದ್ದು, ಹೆಮ್ಮೆ ಪಡುವಂತಾಗಿದೆ.
ಇಲ್ಲಿಯ ದೇವಸ್ಥಾನವು ಊರಿನ ಮಧ್ಯದಲ್ಲಿದ್ದು, ನದಿ-ಕಾಡು-ಪರ್ವತಗಳಿಂದ ಆವೃತವಾಗಿದ್ದು, ಪ್ರಕೃತಿಯ ಅಪ್ರತಿಮ ಸೌಂದರ್ಯಕ್ಕೆ ಭಾಷ್ಯದಂತಿದೆ. ಶ್ರೀ ಸುಬ್ರಹ್ಮಣ್ಯ ದೇವರು ಇಲ್ಲಿಯ ದೇವಳದ ಪ್ರಧಾನ ದೇವತೆ. ಮುಖ್ಯ ದ್ವಾರವು ಪೂರ್ವಾಭಿಮುಖವಾಗಿದೆ. ಭಕ್ತಾದಿಗಳು ಮುಖ್ಯ ಗೋಪುರವಿರುವ ಪಶ್ಚಿಮ ಬಾಗಿಲಿನಿಂದ ಪ್ರವೇಶಿಸಿ ಒಳಸುತ್ತನ್ನು ಪೂರ್ವ ಬಾಗಿಲಿನಿಂದ ಮುಂದುವರೆಸುತ್ತಾರೆ. ಗರ್ಭಗುಡಿಯ ಮಧ್ಯಭಾಗದಲ್ಲಿ ಶ್ರೀ ದೇವರ ಮೂರ್ತಿಯಿದೆ. ಅದರ ಮೇಲಿನ ಹಂತದಲ್ಲಿ ಶ್ರೀ ಸುಬ್ರಹ್ಮಣ್ಯ ಮೂರ್ತಿ ಮತ್ತು ವಾಸುಕಿ ಹಾಗೂ ಕೆಳ ಹಂತದಲ್ಲಿ ಆದಿಶೇಷನ ಮೂರ್ತಿಗಳಿವೆ. ಭಕ್ತಾದಿಗಳು ಒಳ ಸುತ್ತನ್ನು ಪ್ರವೇಶಿಸುವಾಗ ತಮ್ಮ ಶರ್ಟ್, ಬನಿಯಾನುಗಳನ್ನು ತೆಗೆಯಬೇಕಾಗುವುದು.
ಕುಕ್ಕೆ ಸುಬ್ರಹ್ಮಣ್ಯ ನಾಗಗಳ ವಾಸಸ್ಥಾನವಾಗಿದೆ. ಇಲ್ಲಿ ಶ್ರೀ ಸುಬ್ರಹ್ಮಣ್ಯನಿಗೆ ಸಲ್ಲಿಸಿದ ಪೂಜೆಯು ಸರ್ಪರಾಜನಾದ ವಾಸುಕಿಗೆ ಸಲ್ಲುವುದು. ಹಾಗಾಗಿ ಈ ಸ್ಥಳವು ಎಲ್ಲಾ ತರಹದ ನಾಗದೋಷಗಳ ಪರಿಹಾರ ಸ್ಥಳವಾಗಿ ನಂಬಲಾಗಿದೆ. ದೇಶದ ಮೂಲೆ ಮೂಲೆಗಳಿಂದ ಸರ್ಪಸಂಸ್ಕಾರ, ನಾಗಪ್ರತಿಷ್ಠೆ, ಆಶ್ಲೇಷಬಲಿ ಹಾಗೂ ಇತರ ಪೂಜಾದಿಗಳನ್ನು ಸಲ್ಲಿಸಲು ಭಕ್ತಾದಿಗಳು ಬರುತ್ತಿರುತ್ತಾರೆ.

kkumaradhara
ಪೌರಾಣಿಕ ಹಿನ್ನೆಲೆ
ಶ್ರೀ ಕ್ಷೇತ್ರವು ಕುಮಾರಧಾರ ನದಿ ತೀರದಲ್ಲಿದೆ. ದುಷ್ಟ ರಾಕ್ಷಸರ ದಮನಕ್ಕಾಗಿ ಜನ್ಮವೆತ್ತಿದ ಕುಮಾರಸ್ವಾಮಿಯು ತಾರಕಾದಿ ಅಸುರರನ್ನು ಯುದ್ಧದಲ್ಲಿ ಸಂಹರಿಸಿ, ಸೋದರ ಗಣಪತಿಯ ಜೊತೆ ಕುಮಾರಪರ್ವತಕ್ಕೆ ಬಂದಾಗ ದೇವೇಂದ್ರನು ತನ್ನ ಮಗಳಾದ ದೇವಸೇನೆಯನ್ನು ಕುಮಾರಸ್ವಾಮಿಗೆ ಕುಮಾರಧಾರ ತೀರ್ಥದ ತಟದಲ್ಲಿ ಮಾರ್ಗಶಿರ ಶುದ್ಧ ಷಷ್ಠಿಯ ದಿನ ಪಾಣಿಗ್ರಹಣ ಮಾಡಿದನು. ಅದೇ ವೇಳೆ ಅಲ್ಲಿಯೇ ತಪಸ್ಸನ್ನಾಚರಿಸುತ್ತಿದ್ದ ನಾಗರಾಜನಾದ ವಾಸುಕಿಯ ಪ್ರಾರ್ಥನೆಯನ್ನು ಮನ್ನಿಸಿ ತಾನು ದೇವಸೇನಾ ಸಮೇತನಾಗಿ ಒಂದಂಶದಿಂದ ಅವನಲ್ಲಿ ನಿತ್ಯ ಸನ್ನಿಹಿತನಾಗಿ ಈ ಕ್ಷೇತ್ರದಲ್ಲಿ ನೆಲೆಸುವುದಾಗಿ ವಾಸುಕಿಯನ್ನು ಹರಸುತ್ತಾನೆ.subramanya god
ಪರಶುರಾಮ ಸೃಷ್ಠಿಯ ಸಪ್ತ ಕ್ಷೇತ್ರಗಳಲ್ಲೊಂದಾದ ಕುಕ್ಕೆ ಶ್ರೀ ಸುಬ್ರಹ್ಮಣ್ಯ ಕ್ಷೇತ್ರವು ಪುರಾಣ, ಇತಿಹಾಸ ಕಾಲಗಳಿಂದಲೂ ನಾಗಾರಾಧನೆಗೆ ಪ್ರಸಿದ್ಧಿಯಾಗಿದ್ದು, ವಾಸುಕೀ ಸನ್ನಿಹಿತ ಶ್ರೀ ಸುಬ್ರಹ್ಮಣ್ಯ ದೇವರು ಭಕ್ತಾಭೀಷ್ಟ ಪ್ರದಾಯಕನಾಗಿ ಈ ಕ್ಷೇತ್ರದ ಅಧಿದೇವತೆಯಾಗಿ ನೆಲೆಸಿರುತ್ತಾನೆ. ಗುಪ್ತ ಕ್ಷೇತ್ರವೆಂಬುವುದಾಗಿಯೂ ಈ ಕ್ಷೇತ್ರವನ್ನು ಕರೆಯುತ್ತಾರೆ. ಮೃತ್ತಿಕಾ ಪ್ರಸಾದ ಇಲ್ಲಿನ ಶ್ರೇಷ್ಠ ಪ್ರಸಾದವಾಗಿದೆ. ಪವಿತ್ರ ಕುಮಾರಧಾರ ತೀರ್ಥ ಸ್ನಾನದಿಂದ ಮತ್ತು ಮಡೆಸ್ನಾನದಿಂದ ಕುಷ್ಠ ರೋಗದಂತಹ ಭಯಾನಕ ರೋಗಗಳೂ, ಧರ್ಮ ವ್ಯಾಧಿಗಳೂ ಶಮನವಾಗುವುದೆಂಬುದು ಭಕ್ತರ ಅಪಾರ ನಂಬಿಕೆ. ಶ್ರೀ ದೇವರಿಗೆ ಅನ್ನದಾನ ಸುಬ್ಬಪ್ಪನೆಂಬ ನಾಮಾಭಿದಾನವಿದ್ದು, ಶ್ರೀ ಕ್ಷೇತ್ರದಲ್ಲಿ ಸಹಸ್ರಾರು ಸಂಖ್ಯೆಯಲ್ಲಿ ಭಕ್ತಾದಿಗಳಿಗೆ ನಿತ್ಯ ಅನ್ನಸಂತರ್ಪಣೆ ನಡೆಯುತ್ತಿದೆ. ಸರ್ಪದೋಷದಿಂದ ಬರುವಂತಹ ಸಂತಾನ ಹೀನತೆ, ಚರ್ಮ ವ್ಯಾಧಿ, ದೃಷ್ಠಿ ಮಾಂದ್ಯ, ಭೂಮಿ ದೋಷವೇ ಮೊದಲಾದ ಜ್ವಲಂತ ಸಮಸ್ಯೆಗಳಿಗೆ ಪರಿಹಾರವಾಗಿ ಸರ್ಪಸಂಸ್ಕಾರ, ನಾಗಪ್ರತಿಷ್ಠೆ, ಆಶ್ಲೇಷಬಲಿ ಇತ್ಯಾದಿ ಪ್ರಮುಖ ಹರಕೆ ಸೇವೆಗಳನ್ನು ಭಕ್ತರು ಇಲ್ಲಿ ನಡೆಸಿ ಕೃತಾರ್ಥರಾಗುತ್ತಾರೆ. ಜನ್ಮ ಜನ್ಮಾಂತರದ ದುರಿತಗಳ ನಾಶನಾದ ಶ್ರೀ ಸುಬ್ರಹ್ಮಣ್ಯ ದೇವರು ಭಕ್ತಾದಿಗಳ ಶ್ರದ್ಧಾ-ಭಕ್ತಿ ಪೂರ್ವಕ ಸೇವಾ ಕೈಂಕರ್ಯಗಳನ್ನು ಸ್ವೀಕರಿಸಿ ಇಷ್ಟಾರ್ಥಗಳನ್ನು ಕರುಣಿಸಿ ಪೊರೆಯುವ ಕಲಿಯುಗ ಪ್ರತ್ಯಕ್ಷ ದೇವರೆನಿಸಿಕೊಂಡಿದ್ದಾನೆ.
ದೇವಸ್ಥಾನದ ಶಂಕುಸ್ಥಾಪನೆ ಸುಮಾರು ಐದು ಸಾವಿರ ವರ್ಷಗಳ ಹಿಂದೆ :
ಶ್ರೀ ಸುಬ್ರಹ್ಮಣ್ಯ ಕ್ಷೇತ್ರಪೂರ್ವದಲ್ಲಿ ಕುಕ್ಕೆ ಪಟ್ಟಣವೆಂದು ಪ್ರಸಿದ್ಧಿಯಾಗಿತೆಂದು ಶಾಸನಗಳಿಂದಲೂ, ಗ್ರಂಥಗಳಿಂದಲೂ ತಿಳಿದು ಬರುತ್ತದೆ. ಶ್ರೀ ಆದಿ ಶಂಕರಾಚಾರ್ಯರು ದಿಗ್ವಿಜಯಕ್ಕಾಗಿ ಇಲ್ಲಗೆ ಬಂದು ಕೆಲವು ದಿನ ವಾಸ ಮಾಡಿದ್ದರೆಂದೂ ಆನಂದ ವಿರಚಿತ “ಶಂಕರ ವಿಜಯ”ದಲ್ಲಿ ಹೇಳಿದೆ. ಶ್ರೀ ಶಂಕರಾಚಾರ್ಯ ವಿರಚಿತ “ಸುಬ್ರಹ್ಮಣ್ಯ ಭುಜಂಗ ಪ್ರಯಾತ ಸ್ತೋತ್ರ”ದಲ್ಲಿ “ಭಜೇ ಕುಕ್ಕೆಲಿಂಗಂ” ಎಂದು ಈ ಕ್ಷೇತ್ರದಲ್ಲಿ ಉಲ್ಲೇಖವಿದೆ. ಇಲ್ಲಿಯ ಸ್ಥಳ ಪುರಾಣ ಪ್ರಕಾರ ಅನೇಕ ದೇವ ಋಷಿಗಳು ಶಿವಲಿಂಗಗಳನ್ನು ಈ ಕ್ಷೇತ್ರದಲ್ಲಿ ಸ್ಥಾಪಿಸಿದ್ದಾಗಿ ತಿಳಿದು ಬರುತ್ತದೆ. ಇಂತಹ ಪ್ರಸಿದ್ಧ ಶಿವಲಿಂಗವನ್ನು ಉಲ್ಲೇಖಿಸುವುದೇ ಕುಕ್ಕೆಲಿಂಗವೆಂಬ ಶಬ್ದದ ಅರ್ಥವಾಗಿರುವುದೆಂದು ತಿಳಿಯಬೇಕು. ಶ್ರೀ ಸ್ಕಂದ ಪುರಾಣದ ಸನತಕುಮಾರ ಸಂಹಿತೆಯಲ್ಲಿ ಸಹ್ಯಾದ್ರಿ ಖಂಡದ ತೀರ್ಥಕ್ಷೇತ್ರದ ಮಹಿಮಾ ರೂಪಣದೊಳಗೆ ಶ್ರೀ ಸುಬ್ರಹ್ಮಣ್ಯ ಕ್ಷೇತ್ರವು ಧಾರಾ ನದಿಯ ತೀರದಲ್ಲಿರುವುದು. ಶ್ರೀ ಷಣ್ಮುಖ ಸ್ವಾಮಿಯು ತಾರಕಾದಿ ಮಹಾ ಅಸುರರನ್ನು ನಿಗ್ರಹಿಸಿ ತಮ್ಮ ಶಕ್ತ್ಯಾಯುಧ ಧಾರೆಯನ್ನು ಈ ತೀರ್ಥದಲ್ಲಿ ತೊಳೆದುದರಿಂದ ಇದಕ್ಕೆ ಕುಮಾರಧಾರಾ ತೀರ್ಥವೆಂದು ಹೆಸರು ಬಂತೆಂದು ಇತಿಹಾಸವಿದೆ. ಸರ್ಪದೋಷ ಪೀಡಿತರಾಗಿ ಔಷಧಗಳಿಂದ ಶಮನವಾಗದಂತಹ ರೋಗಗಳಿಂದ ನರಳುವವರು ಹಾಗೂ ಸಂತಾನವಿಲ್ಲದೆ ಇರುವವರು ಶ್ರೀ ಸುಬ್ರಹ್ಮಣ್ಯನ ಸನ್ನಿಧಿಯಲ್ಲಿ ಸೇವಾ ಕೈಂಕರ್ಯಗಳನ್ನು ನೆರವೇರಿಸಿ ಸಕಲಾಭೀಷ್ಠ ಸಿದ್ಧಿಯನ್ನು ಹೊಂದುತ್ತಿರುವುದು ಪ್ರಸಿದ್ಧವಾಗಿದೆ. ಶ್ರೀ ಸುಬ್ರಹ್ಮಣ್ಯ ಷಷ್ಠಿ ಮಹೋತ್ಸವಗಳ ಕಾಲದಲ್ಲಿ ಭಕ್ತಾದಿಗಳು ತಮ್ಮ ಅನೇಕ ದೈಹಿಕ ಹಾಗೂ ಮಾನಸಿಕ ಸಂಕಷ್ಟಗಳ ನಿವಾರಣೆಗಾಗಿ ಹೇಳಿಕೊಂಡಿರುವ ಹರಕೆ “ಬೀದಿ ಮಡೆಸ್ನಾನ” (ಉರುಳು ಸೇವೆ) ಮಾಡುತ್ತಿರುವುದನ್ನು ಕಾಣಬಹುದು. ಅಲ್ಲದೇ ಸಂತರ್ಪಣೆಯ ಉಚ್ಚಿಷ್ಠದಲ್ಲಿ ಹೊರಳಾಡಿಕೊಂಡು ಅಂಗಣದಲ್ಲಿ ಪ್ರದಕ್ಷಿಣೆ ಬರುವ “ಮಡೆಸ್ನಾನ” ಸೇವೆಯು ಮುಖ್ಯ ಹರಕಯಲ್ಲಿ ಒಂದಾಗಿದೆ. “ಕುಮಾರಧಾರೆ ಮಿಂದೇವು, ಕುಕ್ಕೆಲಿಂಗನ ಕಂಡೇವು, ಕೊಪ್ಪರಿಗೆ ಅನ್ನ ಉಂಡೇವು” ಎಂಬ ಪೂರ್ವ ನಾಣ್ಣುಡಿಯಂತೆ ಇಲ್ಲಿ ಅನ್ನದಾನವು ನಡೆಯುತ್ತಿರುವುದು. ಇತಿಹಾಸ ಪ್ರಸಿದ್ಧ “ಮೂಲಮೃತ್ತಿಗೆ” (ಹುತ್ತದ ಮಣ್ಣು) ಇಲ್ಲಿಯ ಮುಖ್ಯ ಪ್ರಸಾದವಾಗಿರುತ್ತದೆ.
ಸರ್ಪ ಸಂಸ್ಕಾರ ಬಹಳ ಮುಖ್ಯವಿಧಿ
ಇಲ್ಲಿನ ಸರ್ಪ ಸ೦ಸ್ಕಾರ ಬಹಳ ಶ್ರೇಷ್ಟ ಮತ್ತು ಪ್ರಸಿದ್ಢ. ಸರ್ಪ ದೋಷ ಇರುವವರು ಇಲ್ಲಿಗೆ ಬ೦ದು, ಸರ್ಪ ಸ೦ಸ್ಕಾರ ಮತ್ತು ನಾಗ ಪ್ರತಿಷ್ಟೆ ನೆರವೇರಿಸಿ ದೋಷ ಮುಕ್ತರಾಗುತ್ತಾರೆ. ಇತ್ತೀಚೆಗೆ ಇಲ್ಲಿಗೆ ಭೇಟಿ ನೀಡಿ ಈ ಕಾರ್ಯಗಳನ್ನು ನೆರವೇರಿಸಿದ ವಿಖ್ಯಾತರಲ್ಲಿ ಸಚಿನ್ ತೆ೦ಡೂಲ್ಕರ್ ಮತ್ತು ಹೇಮಮಾಲಿನಿ ಸೇರಿದ್ದಾರೆ. ಇಲ್ಲಿಗೆ ಭೇಟಿ ಕೊಟ್ಟಲ್ಲಿ ಸಮೀಪದ “ಆದಿ ಸುಬ್ರಹ್ಮಣ್ಯ ಸ್ವಾಮಿ” ಯ ದೇವಾಲಯ ಮತ್ತು “ಕುಮಾರಧಾರ” ನದಿಯನ್ನು ಸ೦ದರ್ಶಿಸಲು ಮರೆಯ ಬೇಡಿ.
ಜಾತಕಗಳಲ್ಲಿನ ಹಲವಾರು ದೋಷ ಪರಿಹಾರ ಇಲ್ಲಿ ಮಾಡಿಸಿಕೊಳ್ಳಬಹುದು
ಜಾತಕಗಳಲ್ಲಿನ ಸರ್ಪದೋಷ ಅಥವಾ ನಾಗದೋಷ, ಕಾಳಸರ್ಪದೋಷ ಇತ್ಯಾದಿ ದೋಷಗಳ ಕಾರಣದಿಂದ ಅನಾರೋಗ್ಯ, ತಡವಿವಾಹ, ವೈವಾಹಿಕ ಸುಖಭಂಗ, ಪುತ್ರಹೀನತೆ (ಗಂಡು ಸಂತಾನ ಇಲ್ಲದಿರುವುದು),ಸಂತಾನಹೀನತೆ (ಮಕ್ಕಳೇ ಆಗದಿರುವುದು,ಉದ್ಯೋಗದಲ್ಲಿ ಅಸಮಾಧಾನ,ಇತ್ಯಾದಿ ತೊಂದರೆಗಳನ್ನು ಅನುಭವಿಸುತ್ತಿರುವವರ ಈ ಮೇಲೆ ಹೇಳಲಾದ ದೋಷಗಳಿಗೆ ಪರಿಹಾರ ಮಾಡಿಸಲು ಕರ್ನಾಟಕದಲ್ಲಿರುವ ಅತ್ಯಂತ ಪವಿತ್ರವಾದ ನಾಗರೂಪದಲ್ಲಿರುವ ಸುಬ್ರಹ್ಮಣ್ಯಸ್ವಾಮಿಯ ದೇವಸ್ಥಾನವಿರುವ ಕ್ಷೇತ್ರ ಎಂದರೆ ಈ ಕುಕ್ಕೆ ಸುಬ್ರಹ್ಮಣ್ಯ ಕ್ಷೇತ್ರ. ಈ ಕ್ಷೇತ್ರಕ್ಕೆ ಪ್ರಪಂಚದ ನಾನಾ ಮೂಲೆಗಳಿಂದ ಭಕ್ತರು ಬಂದು ಸರ್ಪಸಂಸ್ಕಾರ, ನಾಗಪ್ರತಿಷ್ಠೆ, ಆಶ್ಲೇಷಬಲಿ, ಇತ್ಯಾದಿ ಸೇವೆ ಸಲ್ಲಿಸಿ ದೋಷಮುಕ್ತರಾಗಿ ಸುಖಜೀವನ ನಡೆಸುತ್ತಿದ್ದಾರೆ. ಕುಜದೋಷವಿರುವವರೂ ಸಹಾ ಇಲ್ಲಿ ಪರಿಹಾರ ಕಾಣುತ್ತಾರೆ. ಕಾರ್ತಿಕೇಯ, ಸುಬ್ರಹ್ಮಣ್ಯ ಎಂದೆಲ್ಲಾ ಕರೆಸಿಕೊಳ್ಳುವ ಈ ದೇವನು ಕ್ಷೀರಪ್ರಿಯನು. ಭಕ್ತರ ದೋಷಗಳನ್ನು ಪರಿಹಾರ ಮಾಡುವ ಸಲುವಾಗಿಯೇ ಈ ಕ್ಷೇತ್ರದಲ್ಲಿ ನೆಲೆಸಿದ್ದಾನೆ ಎಂದರೆ ತಪ್ಪಾಗಲಾರದು.
ಶ್ರೀ ಸುಬ್ರಮಣ್ಯಾಷ್ಟೋತ್ತರ ಶತನಾಮಾವಳೀಃ
ಓಂ ಸ್ಕಂದಾಯ ನಮಃ | ಓಂ ಗುಹಾಯ ನಮಃ | ಓಂ ಷಣ್ಮುಖಾಯ ನಮಃ | ಓಂ ಫಾಲನೇತ್ರಾಸುತಾಯ ನಮಃ | ಓಂ ಪ್ರಭವೇ ನಮಃ | ಓಂ ಪಿಂಗಲಾಯ ನಮಃ | ಓಂ ಕೃತ್ತಿಕಾಸುನವೇ ನಮಃ | ಓಂ ಶಿಖಿವಾಹನಾಯ ನಮಃ | ಓಂ ದ್ವಿಷಡ್ಬುಜಾಯ ನಮಃ | ಓಂ ದ್ವಿಷಣ್ಣೇತ್ರಾಯ ನಮಃ | ಓಂ ಶಕ್ತಿಧರಾಯ ನಮಃ | ಓಂ ಪಿಶಿತಾಶಪ್ರಭಂಜನಾಯ ನಮಃ | ಓಂ ತಾರಕಾಸುರಸಂಹಾರಿಣೇ ನಮಃ | ಓಂ ರಕ್ಷೋಬಲವಿಮರ್ದನಾಯ ನಮಃ | ಓಂ ಮತ್ತಾಯ ನಮಃ | ಓಂ ಪ್ರಮತ್ತಾಯ ನಮಃ | ಓಂ ಉನ್ಮತ್ತಾಯ ನಮಃ | ಓಂ ಸುರಸೈನ್ಯಸುರಕ್ಷಕಾಯ ನಮಃ | ಓಂ ದೇವಸೇನಾಪತಯೇ ನಮಃ | ಓಂ ಪ್ರಙ್ಞಾಯ ನಮಃ | ಓಂ ಕೃಪಾಲವೇ ನಮಃ | ಓಂ ಭಕ್ತವತ್ಸಲಾಯ ನಮಃ | ಓಂ ಉಮಾಸುತಾಯ ನಮಃ | ಓಂ ಶಕ್ತಿಧರಾಯ ನಮಃ | ಓಂ ಕುಮಾರಾಯ ನಮಃ | ಓಂ ಕ್ರಾಂಚಧಾರಣಾಯ ನಮಃ | ಓಂ ಸೇನಾನ್ಯೇ ನಮಃ | ಓಂ ಅಗ್ನಿಜನ್ಮನೇ ನಮಃ | ಓಂ ವಿಶಾಖಾಯ ನಮಃ | ಓಂ ಶಂಕರಾತ್ಮಜಾಯ ನಮಃ | ಓಂ ಶೈವಾಯ ನಮಃ | ಓಂ ಸ್ವಾಮಿನೇ ನಮಃ | ಓಂ ಗಣಸ್ವಾಮಿನೇ ನಮಃ | ಓಂ ಸರ್ವಸ್ವಾಮಿನೇ ನಮಃ | ಓಂ ಸನಾತನಾಯ ನಮಃ | ಓಂ ಅನಂತಶಕ್ತಯೇ ನಮಃ | ಓಂ ಅಕ್ಷೋಬ್ಯಾಯ ನಮಃ | ಓಂ ಪಾರ್ವತೀಪ್ರಿಯನಂದನಾಯ ನಮಃ | ಓಂ ಗಂಗಾಸುತಾಯ ನಮಃ | ಓಂ ಶರೋಧ್ಭೂತಾಯ ನಮಃ | ಓಂ ಅಹುತಾಯ ನಮಃ | ಓಂ ಪಾವಕಾತ್ಮಜಾಯ ನಮಃ | ಓಂ ಜೃಂಭಾಯ ನಮಃ | ಓಂ ಪ್ರಜೃಂಭಾಯ ನಮಃ | ಓಂ ಉಜೃಂಭಾಯ ನಮಃ | ಓಂ ಕಮಲಾಸನಸಂಸ್ತುತಾಯ ನಮಃ | ಓಂ ಏಕವರ್ಣಾಯ ನಮಃ | ಓಂ ದ್ವಿವರ್ಣಾಯ ನಮಃ | ಓಂ ತ್ರಿವರ್ಣಾಯ ನಮಃ | ಓಂ ಸುಮನೋಹರಾಯ ನಮಃ | ಓಂ ಚತುರ್ವರ್ಣಾಯ ನಮಃ | ಓಂ ಪ್ರಜಾಪತಯೇ ನಮಃ | ಓಂ ಅಹರ್ಪತಯೇ ನಮಃ | ಓಂ ಅಗ್ನಿಗರ್ಭಾಯ ನಮಃ | ಓಂ ಶಮಿಗರ್ಭಾಯ ನಮಃ | ಓಂ ವಿಶ್ವರೇತಸೇ ನಮಃ | ಓಂ ಸುರಾರಿಘ್ನೇ ನಮಃ | ಓಂ ಹರಿದ್ವರ್ಣಾಯ ನಮಃ | ಓಂ ಶುಭಕರಾಯ ನಮಃ | ಓಂ ವಟವೇ ನಮಃ | ಓಂ ವಟವೇಷಧೃತೇ ನಮಃ | ಓಂ ಗಭಸ್ತಯೇ ನಮಃ | ಓಂ ಗಹನಾಯ ನಮಃ | ಓಂ ಚಂದ್ರವರ್ಣಾಯ ನಮಃ | ಓಂ ಕಲಾಧರಾಯ ನಮಃ | ಓಂ ಮಾಯಾಧರಾಯ ನಮಃ | ಓಂ ಮಹಮಾಯಿನೇ ನಮಃ | ಓಂ ಕೈವಲ್ಯಾಯ ನಮಃ | ಓಂ ಶಂಕರಾತ್ಮಭುವೇ ನಮಃ | ಓಂ ವಿಶ್ವಯೋನಯೇ ನಮಃ | ಓಂ ಆಮೇಯಾತ್ಮನೇ ನಮಃ | ಓಂ ತೇಜೋನಿಧಯೇ ನಮಃ | ಓಂ ಅನಾಮಯಾಯ ನಮಃ | ಓಂ ಪರಮೇಷ್ಠಿನೇ ನಮಃ | ಓಂ ಪರಬ್ರಹ್ಮಣೇ ನಮಃ | ಓಂ ವೆದಗರ್ಭಾಯ ನಮಃ | ಓಂ ವಿರಾಟ್ಸುತಾಯ ನಮಃ | ಓಂ ಪುಲ್ಲಿಂದಕನ್ಯಾಭರ್ತೆ ನಮಃ | ಓಂ ಮಹನಾರಸ್ವತಾವೃತಾಯ ನಮಃ | ಓಂ ಅಶ್ರಿತಾಖಿಲದಾತ್ರೇ ನಮಃ | ಓಂ ಚೋರಘ್ನಾಯ ನಮಃ | ಓಂ ರೋಗನಾಶನಾಯ ನಮಃ | ಓಂ ಅನಂತಮೂರ್ತಯೇ ನಮಃ | ಓಂ ಆನಂದಾಯ ನಮಃ | ಓಂ ಶಿಖಂಡಿಕೃತಕೇತನಾಯ ನಮಃ | ಓಂ ಡಂಭಾಯ ನಮಃ | ಓಂ ಪರಮಡಂಭಾಯ ನಮಃ | ಓಂ ವೃಷಾಕಪಯೇ ನಮಃ | ಓಂ ಕಾರಣೋತ್ಪತ್ತಿದೇಹಾಯ ನಮಃ | ಓಂ ಕಾರಣಾತೀತವಿಗ್ರಹಾಯ ನಮಃ | ಓಂ ಅನೀಶ್ವರಾಯ ನಮಃ | ಓಂ ಅಮೃತಾಯ ನಮಃ | ಓಂ ಪ್ರಾಣಾಯ ನಮಃ | ಓಂ ಪ್ರಾಣಾಯಾಮಪರಾಣಾಯ ನಮಃ | ಓಂ ವಿರುದ್ದಹಂತ್ರೇ ನಮಃ | ಓಂ ವೀರಘ್ನಾಯ ನಮಃ | ಓಂ ರಕ್ತಶ್ಯಾಮಂಗಳಾಯ ನಮಃ | ಓಂ ಕುಷ್ಟಹಾರಿಣೇ ನಮಃ | ಓಂ ಭುಜಂಗೇಶಾಯ ನಮಃ | ಓಂ ಶ್ರುತಿಪ್ರಿತಾಯ ನಮಃ | ಓಂ ಸುಬ್ರಹ್ಮಣ್ಯಾಯ ನಮಃ | ಓಂ ಗುಹಾಪ್ರೀತಾಯ ನಮಃ | ಓಂ ಬ್ರಹ್ಮಣ್ಯಾಯ ನಮಃ | ಓಂ ಬ್ರಾಹ್ಮಣಪ್ರಿಯಾಯ ನಮಃ | -ಇತಿ ಶ್ರೀ ಸುಬ್ರಹ್ಮಣ್ಯಾಷ್ಟೋತ್ತರ ಶತನಾಮಾವಳಿಃ ಸಂಪೂರ್ಣಂ

By suddi9

Leave a Reply

Your email address will not be published. Required fields are marked *