ಬಂಟ್ವಾಳ: ಹಿರಿಯ ಪತ್ರಕರ್ತೆ ಗೌರಿ ಲಂಕೇಶ್ ಹತ್ಯೆ ಪ್ರಕರಣದ ತನಿಖೆಯನ್ನು ಸಿಬಿಐಗೆ ವಹಿಸುವಂತೆ ಆಗ್ರಹಿಸಿ ಬಂಟ್ವಾಳ ತಾಲೂಕು ದಲಿತ ಸಂಘಟನೆಗಳ ನೇತೃತ್ವದಲ್ಲಿ ಪ್ರತಿಭಟನೆ ಶುಕ್ರವಾರ ಬಿ.ಸಿ.ರೋಡಿನಲ್ಲಿ ನಡೆಯಿತು. 
ಪ್ರತಿಭಟನಕಾರರನ್ನು ಉದ್ದೇಶಿಸಿ ದಲಿತ ಸಂಘಟನೆಗಳ ಒಕ್ಕೂಟದ ಅಧ್ಯಕ್ಷ ಭಾನುಚಂದ್ರ ಕೃಷ್ಣಾಪುರ ಮಾತನಾಡಿ ವಿಚಾರವಾದಿ, ಚಿಂತಕಿ, ದಲಿತ ಪರ ಹೋರಾಟಗಾರ್ತಿ ಗೌರಿ ಲಂಕೇಶ್ ಅವರು ತಮ್ಮ ಪತ್ರಿಕೆಯಲ್ಲಿ ರಾಜಾಕಾರಣಿಗಳ ಸೋಗಲಾಡಿತನವನ್ನು, ಧಾರ್ಮಿಕತೆಯ ಹೆಸರಿನಲ್ಲಿ ನಡೆಯುವ ಅತ್ಯಾಚಾರವನ್ನು , ಶಿಕ್ಷಣ, ಸಮಾಜ ಸೇವೆಯ ಹೆಸರಿನಲ್ಲಿ ನಡೆಯುವ ಮೋಸವನ್ನು , ಅನೈತಿಕ ಚಟುವಟಿಕೆಯನ್ನು, ರಾಜಕೀಯದ ಹೆಸರಿನಲ್ಲಿ ನಡೆಸುವ ಭ್ರಷ್ಟಾಚಾರವನ್ನು ಪ್ರಕಟಿಸಿ ರಾಜಕಾರಣಿಗಳ, ಶಿಕ್ಷಣ ಸಂಸ್ಥೆಗಳ ಮುಖ್ಯಸ್ಥರ, ಧಾರ್ಮಿಕ ಮುಖಂಡರ ವಿರೋಧವನ್ನು ಕಟ್ಟಿಕೊಂಡಿದ್ದರು. ಆದ್ದರಿಂದ ಹತ್ಯೆ ಪ್ರಕರಣದ ತನಖೆಯನ್ನು ಹೊರ ರಾಜ್ಯಕ್ಕೂ ವಿಸ್ತರಿಸಬೇಕಾದ ಅನಿವಾರ್ಯತೆ ಇದೆ ಎಂದರು. ಪ್ರತಿಭಟನೆಯಲ್ಲಿ ಗೌರವಾಧ್ಯಕ್ಷ ರಾಜ ಪಲ್ಲಮಜಲು, ಜನಾರ್ದನ ಚೆಂಡ್ತಿಮಾರ್, ಜಯ ವಿ. ಕಡೇಶ್ವಾಲ್ಯ, ರಾಘವೇಂದ್ರ ಸುರುಳಿಮೂಲೆ, ರಾಮದಾಸ್ ಮೇರಮಜಲು, ಸಂಜೀವ ಚೆಂಡ್ತಿಮಾರ್, ವೆಂಕಪ್ಪ ಪೂಜಾರಿ ಬಂಟ್ವಾಳ ಹಾಜರಿದ್ದರು.
