ಮಂಗಳೂರು: ಅಪ್ರಾಪ್ತ ವಯಸ್ಸಿನ ಕಾಲೇಜು ವಿದ್ಯಾರ್ಥಿನಿಯೊಬ್ಬಳನ್ನು ಯುವಕನೊಬ್ಬ ಪ್ರೇಮದ ಬಲೆಗೆ ಸಿಲುಕಿಸಿ ಲವ್ ಜಿಹಾದ್ ನಡೆಸಲು ಯತ್ನಿಸಿದ್ದಾನೆ ಎಂಬ ಆರೋಪ ಕೇಳಿ ಬಂದಿದೆ. ಪುತ್ತೂರು ತಾಲೂಕಿನ ಕೆಯ್ಯೂರು ಗ್ರಾಮದಲ್ಲಿ ಈ ಘಟನೆ ನಡೆದಿದೆ.ಪುತ್ತೂರು ತಾಲೂಕಿನ ಪಾಲ್ತಾಡು ಗ್ರಾಮದ ಮುಕರೆತ್ತಿ ನಿವಾಸಿ ಮಹಮ್ಮದ್ ಹಕೀಂ ಯಾನೆ ಹಕೀಂ ಎಂಬಾತನ ವಿರುದ್ಧ ಇದೀಗ ಬೆಳ್ಳಾರೆ ಠಾಣೆಯಲ್ಲಿ ಪೋಸ್ಕೋ ಕಾಯ್ದೆಯಡಿ ಪ್ರಕರಣ ದಾಖಲಾಗಿದೆ.ಕಾಲೇಜೊಂದರಲ್ಲಿ ಪ್ರಥಮ ಪಿಯು ಶಿಕ್ಷಣ ಪಡೆಯುತ್ತಿದ್ದ ವಿದ್ಯಾರ್ಥಿನಿಯನ್ನು ಆರೋಪಿ ಹಕೀಂ ಬೈಕಿನಲ್ಲಿ ಹಿಂಬಾಲಿಸಿಕೊಂಡು ಬಂದು ಪ್ರೀತಿಸುವಂತೆ ಪೀಡಿಸತೊಡಗಿದ್ದ. ಅಲ್ಲದೆ ವಿವಾಹಕ್ಕೆ ಒಪ್ಪಿಕೊಳ್ಳುವಂತೆ ಒತ್ತಡ ಹಾಕತೊಡಗಿದ್ದ ಎನ್ನಲಾಗಿದೆ.ಈ ವಿಚಾರ ಮನೆಯವರಿಗೆ ತಿಳಿಸಿದರೆ ಮಾನಹರಣ ಮಾಡುವುದಾಗಿ ಮತ್ತು ಯುವತಿ ತಂದೆಯ ಅಂಗಡಿ ಕಟ್ಟಡಕ್ಕೆ ಬೆಂಕಿ ಇಡುವುದಾಗಿ ಬೆದರಿಸಲಾರಂಭಿಸಿದ್ದ ಎನ್ನಲಾಗಿದೆ.
ಅಷ್ಟೇ ಅಲ್ಲದೇ ಆಕೆಯ ಸ್ನೇಹಿತೆಯರ ಫೋನ್ ನಂಬರ್ ನೀಡುವಂತೆ ಕಿರುಕಳ ನೀಡುತ್ತಿದ್ದ ಎಂದು ಆರೋಪಿಸಲಾಗಿದೆ. ಈತನ ಬೆದರಿಕೆಗೆ ಮಣಿದ ವಿದ್ಯಾರ್ಥಿನಿ ವಿಚಾರ ಮುಚ್ಚಿಟ್ಟಿದ್ದಳು ಎನ್ನಲಾಗಿದೆ.ಆರೋಪಿಯ ಕಿರುಕುಳ ವಿಪರೀತಗೊಂಡ ಹಿನ್ನಲೆಯಲ್ಲಿ ವಿದ್ಯಾರ್ಥಿನಿ ವಿಚಾರವನ್ನು ಮನೆಯವರಿಗೆ ತಿಳಿಸಿದ್ದಾಳೆ. ಆರೋಪಿ ನೀಡುತ್ತಿದ್ದ ಕಿರುಕುಳದಿಂದ ನೊಂದ ವಿದ್ಯಾರ್ಥಿನಿ ಗುರುವಾರ ಆತನ ವಿರುದ್ದ ಬೆಳ್ಳಾರೆ ಠಾಣೆಗೆ ದೂರು ನೀಡಿದ್ದಾಳೆ. ಬೆಳ್ಳಾರೆ ಠಾಣೆಯ ಪೊಲೀಸರು ಆರೋಪಿಯ ವಿರುದ್ಧ ಪೋಸ್ಕೋ ಕಾಯ್ದೆಯಡಿ ಪ್ರಕರಣ ದಾಖಲಿಸಿಕೊಂಡಿದ್ದಾರೆ. ವಿದ್ಯಾರ್ಥಿನಿ ದೂರು ನೀಡಿದ ಬೆನ್ನಲ್ಲೇ ಆರೋಪಿ ಯುವಕ ತಲೆಮರೆಸಿಕೊಂಡಿದ್ದಾನೆ. ಆತನ ಪತ್ತೆಗಾಗಿ ಬೆಳ್ಳಾರೆ ಪೊಲೀಸರು ಬಲೆಬೀಸಿದ್ದಾರೆ.
ಈ ಹಿಂದೆಯೂ ನಡೆದಿತ್ತು : ಕಳೆದ ಕೆಲವು ವರ್ಷಗಳ ಹಿಂದೆ ಇದೇ ವ್ಯಾಪ್ತಿಯ ಪರಿಶಿಷ್ಟ ಜಾತಿಯ ಯುವತಿಯೊಬ್ಬಳನ್ನು ಪೊನ್ನಾನಿಗೆ ಕರೆದುಕೊಂಡು ಹೋಗಿ ಮತಾಂತರ ಮಾಡುವ ಪ್ರಯತ್ನ ನಡೆದಿತ್ತು. ಈ ಪ್ರಕರಣದಲ್ಲಿ ಪೊಲೀಸರು ಯುವತಿಯನ್ನು ಪೊನ್ನಾನಿಯಲ್ಲಿ ಪತ್ತೆ ಮಾಡಿ ಆರೋಪಿಗಳ ವಿರುದ್ಧ ಪ್ರಕರಣ ದಾಖಲಿಸಿಕೊಂಡಿದ್ದರು.
