ಬಂಟ್ವಾಳ:ರಾಜ್ಯದಲ್ಲೇ ಮೊದಲ ಬಾರಿಗೆ ಅರ್ಹ ಫಲಾನುಭವಿಗಳಿಗೆ 94ಸಿ ಮತ್ತು 94ಸಿಸಿ ಯೋಜನೆಯಡಿ ಹಕ್ಕುಪತ್ರ ನೀಡಿದ ಹೆಗ್ಗಳಿಕೆ ಹೊಂದಿರುವ ಬಂಟ್ವಾಳ ವಿಧಾನಸಭಾ ಕ್ಷೇತ್ರದಲ್ಲಿ ಮುಂದಿನ ದಿನಗಳಲ್ಲಿ ಕಂದಾಯ ಇಲಾಖೆ ಮೂಲಕ ಶೇ.100ರಷ್ಟು ಹಕ್ಕುಪತ್ರ ವಿತರಿಸುವ ಗುರಿ ಹೊಂದಿದೆ ಎಂದು ಜಿಲ್ಲಾ ಉಸ್ತುವಾರಿ ಸಚಿವ ಬಿ.ರಮಾನಾಥ ರೈ ಹೇಳಿದ್ದಾರೆ.
ತಾಲ್ಲೂಕಿನ ನರಿಕೊಂಬು ಗ್ರಾಮ ಪಂಚಾಯಿತಿ ವ್ಯಾಪ್ತಿಯ ಅರ್ಹ ಫಲಾನುಭವಿಗಳಿಗೆ 94ಸಿ ಮತ್ತು 94ಸಿಸಿ ಯೋಜನೆಯಡಿ ಮಂಜೂರಾದ ಮನೆ ನಿವೇಶನ ಹಕ್ಕುಪತ್ರವನ್ನು ಇಲ್ಲಿನ ಸತ್ಯಶ್ರೀ ಸಭಾಂಗಣದಲ್ಲಿ ಶುಕ್ರವಾರ ವಿತರಿಸಿ ಅವರು ಮಾತನಾಡಿದರು. 18btl-Narikombu
ದೇಶದಲ್ಲಿ ಮಾಜಿ ಪ್ರಧಾನಿ ದಿವಂಗತ ಇಂದಿರಾ ಗಾಂಧಿ ಅವರ ಕನಸಿನಂತೆ ರಾಜ್ಯದಲ್ಲಿ ಅಂದಿನ ಮುಖ್ಯಮಂತ್ರಿ ದಿವಂಗತ ದೇವರಾಜ ಅರಸು ಅವರ ಭೂ ಮಸೂದೆ ಕಾಯ್ದೆ ಮೂಲಕ ಉಳುವವನಿಗೆ ಹೊಲದೊಡೆಯ ಆಗಿದ್ದಾರೆ. ಆ ಬಳಿಕ ಹಂತ ಹಂತವಾಗಿ ದರ್ಖಾಸು, ಅಕ್ರಮ-ಸಕ್ರಮ, 94ಸಿ ಮತ್ತು 94ಸಿಸಿ ಮತ್ತಿತರ ಯೋಜನೆಯಿಂದಾಗಿ ಬೆರಳೆಣಿಕೆ ಸಂಖ್ಯೆಯಲ್ಲಿದ್ದ ಭೂ ಹಿಡುವಳಿದಾರರ ಹೆಚ್ಚಳ ಮತ್ತು ಸಾಮಾಜಿಕ ಬದಲಾವಣೆಗೆ ಕಾರಣವಾಗಿದೆ. ಇದೀಗ ಮುಖ್ಯಮಂತ್ರಿ ಸಿದ್ಧರಾಮಯ್ಯ ಅವರು ಹಸಿವು ಮುಕ್ತ ಸಮಾಜ ನಿರ್ಮಾಣಕ್ಕಾಗಿ ಅಕ್ಕಿಭಾಗ್ಯ ಮಾತ್ರವಲ್ಲದೆ ಈಚೆಗೆ ಆರಂಭಿಸಿರುವ ‘ಇಂದಿರಾ ಕ್ಯಾಂಟೀನ್’ ಮಂಗಳೂರಿಗೂ ಬರಲಿದೆ ಎಂದು ಅವರು ಭರವಸೆ ನೀಡಿದರು.
ಇದೇ ವೇಳೆ 10ಕ್ಕೂ ಮಿಕ್ಕಿ ಮಂದಿಗೆ 94ಸಿ ಮತ್ತು 94ಸಿಸಿ ಯೋಜನೆ ಹಕ್ಕುಪತ್ರ, 40ಕ್ಕೂ ಮಿಕ್ಕಿ ಮಂದಿಗೆ ರಾಷ್ಟ್ರೀಯ ಕುಟುಂಬ ಸಹಾಯಧನ, ಮಳೆಹಾನಿ ಪರಿಹಾರ ಮತ್ತಿತರ ಚೆಕ್ ವಿತರಿಸಿದರು. ಕಂದಾಯ ನಿರೀಕ್ಷಕ ರಾಮ ಕೆ. ಮತ್ತು ಗ್ರಾಮಕರಣಿಕ ನಾಗರಾಜ್ ಇವರನ್ನು ಅಭಿನಂದಿಸಲಾಯಿತು.
ಗ್ರಾಮ ಪಂಚಾಯಿತಿ ಉಪಾಧ್ಯಕ್ಷೆ ರಾಜೀವಿ ಪೂಜಾರಿ, ತಾಲ್ಲೂಕು ಪಂಚಾಯಿತಿ ಉಪಾಧ್ಯಕ್ಷ ಅಬ್ಬಾಸ್ ಆಲಿ, ಜಿಲ್ಲಾ ಪಂಚಾಯಿತಿ ಸದಸ್ಯೆ ಕಮಲಾಕ್ಷಿ ಪೂಜಾರಿ, ತಾಲ್ಲೂಕು ಪಂಚಾಯಿತಿ ಸದಸ್ಯೆ ಗಾಯತ್ರಿ ರವೀಂದ್ರ ಸಪಲ್ಯ, ಮಾಜಿ ಸದಸ್ಯ ಆಲ್ಫೋನ್ಸ್ ಮಿನೇಜಸ್, ಎಪಿಎಂಸಿ ಅಧ್ಯಕ್ಷ ಕೆ.ಪದ್ಮನಾಭ ರೈ, ಉಪಾಧ್ಯಕ್ಷ ಚಂದ್ರಶೇಖರ ಪೂಜಾರಿ, ಸಾಮಾಜಿಕ ಮುಂದಾಳು ಎನ್.ಪ್ರಕಾಶ ಕಾರಂತ, ಆಲ್ಬರ್ಟ್ ಮಿನೇಜಸ್ ಮತ್ತಿತರರು ಇದ್ದರು.
ವಲಯ ಕಾಂಗ್ರೆಸ್ ಸಮಿತಿ ಅಧ್ಯಕ್ಷ ಉಮೇಶ ಬೋಳಂತೂರು ಸ್ವಾಗತಿಸಿ, ವಂದಿಸಿದರು. ಕಂದಾಯ ನಿರೀಕ್ಷಕ ರಾಮ ಕೆ. ಕಾರ್ಯಕ್ರಮ ನಿರೂಪಿಸಿದರು.

By Suddi9

Leave a Reply

Your email address will not be published. Required fields are marked *