ಬಂಟ್ವಾಳ: ಸರಕಾರದ ಯೋಜನೆಯಾದ ಗುರುಸ್ಪಂದನದಡಿ ದಕ್ಷಿಣ ಕನ್ನಡ ಜಿಲ್ಲಾ ಪಂಚಾಯತ್ ಸಾರ್ವಜನಿಕ ಶಿಕ್ಷಣ ಇಲಾಖೆ, ಬಂಟ್ವಾಳ ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಚೇರಿ ವತಿಯಿಂದ ಬಂಟ್ವಾಳ ತಾಲೂಕು ಪ್ರಾಥಮಿಕ ಶಾಲಾ ಶಿಕ್ಷಕರ ಸಂಘ, ಕ್ಷೇತ್ರ ಸಮನ್ವಯಾಧಿಕಾರಿ, ಕ್ಷೇತ್ರ ಸಂಪನ್ಮೂಲ ಕೇಂದ್ರ ಬಂಟ್ವಾಳಗಳ ಸಹಯೋಗದಲ್ಲಿ ತಾಲೂಕಿನ ಪ್ರಾಥಮಿಕ ಶಾಲಾ ಶಿಕ್ಷಕರಿಗೆ ಆಗಸ್ಟ್ 7ರಿಂದ 11ವರೆಗೆ ಹಮ್ಮಿಕೊಂಡ ಗುರುಸ್ಪಂದನ ಕಾರ್ಯಕ್ರಮ ನಡೆಯಿತು.

ಏನಿದು ಗುರುಸ್ಪಂದನ:
ಗುರುಸ್ಪಂದನ ಕಾರ್ಯಕ್ರಮ ವಿಶೇಷವಾಗಿ ಶಿಕ್ಷಕರನ್ನು ಗುರಿಯಾಗಿಸಿ, ಅವರ ಕಾರ್ಯವ್ಯವಸ್ಥೆಯಡಿ ಸೇವಾ ವಿಚಾರಗಳಿಗೆ ಸಂಬಂಧಿಸಿದ ಸಮಸ್ಯೆಗಳನ್ನು ಪರಿಹರಿಸಲು ಇಲಾಖೆ ಮೂಲಕ ಕೈಗೊಳ್ಳುವ ಕಾರ್ಯಕ್ರಮ.
ಸಾರ್ವಜನಿಕ ಶಿಕ್ಷಣ ಇಲಾಖೆಯ ಸೂಚನೆಯನ್ವಯ ಈ ಕಾರ್ಯಕ್ರಮ ನಡೆದಿದೆ. ಪ್ರತಿ ಕ್ಷೇತ್ರ ಶಿಕ್ಷಣಾಧಿಕಾರಿ ಕಚೇರಿ ವ್ಯಾಪ್ತಿಯಲ್ಲೂ ಇಂಥದ್ದೊಂದು ಕಾರ್ಯಕ್ರಮ ನಡೆಸಬೇಕು ಎಂಬ ನಿರ್ದೇಶನದಂತೆ ಗುರುಸ್ಪಂದನ ನಡೆದಿದ್ದು, ಬಂಟ್ವಾಳದಲ್ಲಿ ಯಶಸ್ವಿಯಾಗಿದೆ ಎಂದು ಲೋಕೇಶ್ ಈ ಸಂದರ್ಭ ತಿಳಿಸಿದರು.
ಆಗಸ್ಟ್ 7ರಂದು ವಾಮದಪದವು, ವಿಟ್ಲ, 8ರಂದು ಮಂಚಿ, ಕಲ್ಲಡ್ಕ, 9ರಂದು ಮಂಚಿ, ಕಲ್ಲಡ್ಕ, 10ರಂದು ವಾಮದಪದವು, ವಿಟ್ಲ, 11ರಂದು ಟಿಜಿಟಿ ಮತ್ತು ಎಸ್‍ಎಎ ವಲಯ ಹಾಗೂ ಬಂಟ್ವಾಳ ನಗರ ವ್ಯಾಪ್ತಿಯ ವಲಯಕ್ಕೆ ಸೇರಿದ ಶಿಕ್ಷಕರು ಆಗಮಿಸಿದರು. ಒಟ್ಟು 1054 ಮಂದಿ ಶಿಕ್ಷಕರು, ಕ್ಷೇತ್ರ ಸಂಪ್ಮೂಲ ವ್ಯಕ್ತಿಗಳು, ಬ್ಲಾಕ್ ಸಂಪನ್ಮೂಲ ವ್ಯಕ್ತಿಗಳು ಇದರಲ್ಲಿ ಪಾಲ್ಗೊಂಡು ಪ್ರಯೋಜನ ಪಡೆದರು ಎಂದು ಕ್ಷೇತ್ರ ಶಿಕ್ಷಣಾಧಿಕಾರಿ ಲೋಕೇಶ್ ತಿಳಿಸಿದ್ದಾರೆ.
ತಾಲೂಕು ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಅಧ್ಯಕ್ಷ ಶಿವಪ್ರಸಾದ್ ಶೆಟ್ಟಿ, ಕಾರ್ಯದರ್ಶಿ ಜಯರಾಮ್, ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ರಾಜ್ಯ ಪದಾಧಿಕಾರಿ ರಮೇಶ್ ನಾಯಕ್ ರಾಯಿ ಈ ಸಂದರ್ಭ ಉಪಸ್ಥಿತರಿದ್ದರು.
