ಮಂಗಳೂರು: ಪದೇ ಪದೇ ಆಡಳಿತ ಪಕ್ಷದ ಧೋರಣೆಯನ್ನು ಖಂಡಿಸುವ ಕಾಂಗ್ರೆಸ್ ಹಿರಿಯ ನಾಯಕ ಜನಾರ್ಧನ ಪೂಜಾರಿ ಈ ಬಾರಿಯೂ ಮುಖ್ಯಮಂತ್ರಿ ಸಿದ್ದರಾಮಯ್ಯ ಸರ್ಕಾರವನ್ನು ತರಾಟೆಗೆ ತೆಗೆದುಕೊಂಡಿದ್ದಾರೆ.ಮಂಗಳೂರಿನಲ್ಲಿ ಮಾತನಾಡಿದ ಅವರು, ಕರ್ನಾಟಕ ದಲ್ಲಿ ಭೀಕರ ಬರಗಾಲವಿದ್ದರೂ, ಸಿಎಂಗೆ ಬರಪೀಡಿತ ಪ್ರದೇಶಗಳಿಗೆ ಭೇಟಿ ನಿಡೋಕೆ ಸಮಯವಿಲ್ಲ. ಈ ಕೂಡಲೇ ರಾಜೀನಾಮೆ ನೀಡಿ ಎಂದು ಹೇಳಿರುವ ಪೂಜಾರಿ, ಹಗಲಿನಲ್ಲಿ ನಿಮಗೆ ಸಮಯ ಇರಲ್ಲ, ರಾತ್ರಿ ನಿಮಗೆ ಏನು ಕೆಲಸ ಇದೆ. ರಾತ್ರಿ ಇಸ್ಪೀಟ್ ಆಡ್ತೀರಾ? ಇಲ್ಲಾ ಬೇರೆ ಏನಾದ್ರೂ ಅಭ್ಯಾಸ ಇದ್ಯಾ ಎಂದು ಲೇವಡಿ ಮಾಡಿದ್ದಾರೆ.ನಿಮಗೆ ರಾಜ್ಯಭಾರ ಮಾಡೋಕೆ ಆಗಲ್ವಾ ಎಂದು ಪ್ರಶ್ನಿಸಿರುವ ಜನಾರ್ಧನ ಪೂಜಾರಿ ರಾಜ್ಯದ ಜನ ನಿಮ್ಮ ಉತ್ತರದ ನಿರೀಕ್ಷೆಯಲ್ಲಿದ್ದಾರೆ.ನಿಮಗೆ ಕಾಲ ಸನ್ನಿಹಿತವಾಗಿದೆ. ಡಿಕೆ ಶಿವಕುಮಾರ್ ನಿಮ್ಮಿಂದ ಪ್ರಬಲವಾಗುತ್ತಿದ್ದಾರೆ. ರಾಜ್ಯದ ಮುಂದಿನ ಮುಖ್ಯಮಂತ್ರಿ ಡಿ ಕೆ ಶಿವಕುಮಾರ್ನೀವು ನಿದ್ದೆಯಿಂದ ಎಚ್ಚೆತ್ತುಕೊಳ್ಳದಿದ್ರೆ ತುಂಬಾ ಕಷ್ಟ ಇದೆ ಎಂದು ಎಚ್ಚರಿಕೆ ನೀಡಿದ್ದಾರೆ.
ಅಮಿತ್ ಷಾ ರಾಜ್ಯಕ್ಕೆ ಬಂದಿದ್ದಾರೆ, ಅವರು ಬಂದಿರೋದು ನಿಮ್ಮನ್ನು ಕೆಳಗೆ ಇಳಿಸೋಕೆ ಹದಿನೆಂಟು ರಾಜ್ಯಗಳಿಗೆ ಷಾ ಭೇಟಿ ನೀಡಿದ್ದಾರೆ. ಎಲ್ಲಾ ಕಡೆ ಮುಖ್ಯಮಂತ್ರಿಗಳನ್ನು ಕೆಳಗೆ ಇಳಿಸಿದ್ದಾರೆ. ನಿಮ್ಮನ್ನೂ ಕೆಳಗೆ ಇಳಿಸಲಿದ್ದಾರೆ. ದಲಿತ ಮುಖ್ಯಮಂತ್ರಿ ಯನ್ನು ರಾಜ್ಯದಲ್ಲಿ ಕಾಂಗ್ರೆಸ್ ಹೈ ಕಮಾಂಡ್ ಮಾಡಲಿ. ಸಂಜೆಯೊಳಗೆ ರಾಜೀನಾಮೆ ನೀಡಿ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ.ಕಲ್ಲಡ್ಕ ಶಾಲೆಗಳಿಗೆ ಅನ್ನದಾನ ಕಡಿತಕ್ಕೆ ವಿರೋಧ ವ್ಯಕ್ತಪಡಿಸಿರುವ ಪೂಜಾರಿ, ಮಕ್ಕಳ ಊಟವನ್ನು ಸರ್ಕಾರ ಕಸಿದುಕೊಂಡಿದೆ ರಮಾನಾಥ್ ರೈ ಹಾಗೂ ಮುಖ್ಯಮಂತ್ರಿಯವರಿಗೆ ಶನಿ ಹಿಡಿದಿದ್ಯಾ, ರೈ ಮಾಡಿದ ತಪ್ಪನ್ನು ದೇವರೂ ಕ್ಷಮಿಸೋದಿಲ್ಲ. ಶಾಲೆಯಲ್ಲಿ ಅನ್ನದಾನವನ್ನು ಮುಂದುವರಿಸಿ ಎಂದು ಒತ್ತಾಯಿಸಿದ್ದಾರೆ.
ನಟ ಉಪೇಂದ್ರ ನಡೆಗೆ ಪ್ರಶಂಸೆ:ಇದೇ ಸಂದರ್ಭದಲ್ಲಿ ಮಾತನಾಡಿದ ಜನಾರ್ಧನ ಪೂಜಾರಿ ಉಪೇಂದ್ರ ರಲ್ಲಿ ವಿಭಿನ್ನ ಆಲೋಚನೆಗಳಿವೆ.ಅವರ ಪ್ರಶ್ನೆ ಗಳಿಗೆ ರಾಜ್ಯದ ಜನ ತಲೆಬಾಗಬೇಕು. ನಾನೂ ಕೂಡಾ ತಲೆಬಾಗ್ತೇನೆ ಎಂದು ಪ್ರಶಂಸೆ ವ್ಯಕ್ತಪಡಿಸಿದರು.ನೀವು ಬೇರೆ ಪಾರ್ಟಿಗಳಿಗೆ ಸೇರ್ಪಡೆಯಾಗಬೇಡಿ. ಹೊಸ ಪಕ್ಷವನ್ನು ಕಟ್ಟಬೇಕು ಇದಕ್ಕೆ ನನ್ನ ಸಂಪೂರ್ಣ ಬೆಂಬಲ ಇದೆ.ಇಲ್ಲದಿದ್ರೆ ರಾಜಕಾರಣಿಗಳಿಗೆ ಯಾರ ಭಯವೂ ಇರೋದಿಲ್ಲ ಎಂದು ನಟ ಉಪೇಂದ್ರ ಅವರಿಗೆ ಸಲಹೆ ನೀಡಿದರು.
