ಮಂಗಳೂರು : ಕರ್ನಾಟಕದಲ್ಲಿ 2018ರ ಫೆಬ್ರವರಿ ಅಥವಾ ಮಾರ್ಚಿನಲ್ಲಿ ಅಸೆಂಬ್ಲಿ ಚುನಾವಣೆ ನಡೆಯಲಿದೆ. ರಾಜ್ಯದಲ್ಲಿ ಕಾಂಗ್ರೆಸ್ ಪಕ್ಷವು ಮತ್ತೊಂದು ಬಾರಿ ಆಡಳಿತ ಚುಕ್ಕಾಣಿ ಹಿಡಿಯಲು ಈಗಾಗಲೇ ನಾನಾ ರೀತಿಯ ಕಾರ್ಯತಂತ್ರ ಹೆಣೆದಿದ್ದು, ಜಿಲ್ಲಾ-ತಾಲೂಕು ಮತ್ತು ಗ್ರಾಮ ಮಟ್ಟದಲ್ಲಿ ಕಾಂಗ್ರೆಸ್ಸಿಗರು ಓಡಾಡಲಾರಂಭಿಸಿದ್ದಾರೆ. ಅತ್ತ ಕೇಂದ್ರದ ಬಿಜೆಪಿ, ಕರ್ನಾಟಕದಲ್ಲಿ ಶತಾಯಗತ ಅಧಿಕಾರದ ಚುಕ್ಕಾಣಿ ಹಿಡಿದು ರಾಜ್ಯದಲ್ಲೂ ದಂಡಯಾತ್ರೆಗೆ ಸಕಲ ಸಿದ್ಧತೆ ನಡೆಸಿದೆ. ಈ ನಿಟ್ಟಿನಲ್ಲಿ ಬಿಹಾರ ಮತ್ತು ಉತ್ತರ ಪ್ರದೇಶ ಅಸೆಂಬ್ಲಿ ಚುನಾವಣೆ ವೇಳೆ ನಡೆಸಿದಂತಹ ರಾಜಕೀಯ ತಂತ್ರಗಾರಿಕೆಗಾಗಿ ಬಿಜೆಪಿ ಚಿಂತನೆ ನಡೆಸಿದೆ.
ಬಿಹಾರ ಮತ್ತು ಉತ್ತರ ಪ್ರದೇಶ ಚುನಾವಣೆ ವೇಳೆ ಮೋದಿ ತನ್ನ ಸಂಪುಟ ವಿಸ್ತರಿಸಿ ಆ ಎರಡು ರಾಜ್ಯಗಳ ಕೆಲವು ಸಂಸದರಿಗೆ ಸಚಿವ ಸ್ಥಾನ ನೀಡುವುದರೊಂದಿಗೆ, ರಾಜ್ಯಗಳ ಪಕ್ಷೀಯರು ಮತ್ತು ಮತದಾರರ ಓಲೈಕೆ ಮಾಡಿದ್ದು ಹಳೆಯ ರಾಜಕೀಯ. ಕರ್ನಾಟಕ ಅಸೆಂಬ್ಲಿ ಚುನಾವಣೆ ಮೇಲೆ ದೃಷ್ಟಿ ನೆಟ್ಟಿರುವ ಬಿಜೆಪಿ ಅರ್ಥಾತ್ ಮೋದಿ ಸರ್ಕಾರ ಆಗಸ್ಟ್ ಮೊದಲರ್ಧ ಭಾಗದಲ್ಲಿ ಸಂಪುಟ ವಿಸ್ತರಿಸಲಿದ್ದು, ರಾಜ್ಯದ ಒಂದಿಬ್ಬರು ಸಂಸದರಿಗೆ ಸಚಿವ ಸ್ಥಾನ ಲಭಿಸುವ ಸಾಧ್ಯತೆ ಬಗ್ಗೆ ಚರ್ಚೆ ಆರಂಭವಾಗಿದೆ. ಮನೋಹರ ಪಾರಿಕ್ಕರ್ ಗೋವಾ ಮುಖ್ಯಮಂತ್ರಿಯಾದ ಬಳಿಕ ರಕ್ಷಣಾ ಖಾತೆ ಖಾಲಿ ಬಿದ್ದಿದೆ. ಇದೀಗ ವೆಂಕಯ್ಯ ನಾಯ್ಡು ಉಪ-ರಾಷ್ಟ್ರಪತಿ ಚುನಾವಣಾ ಕಣದಲ್ಲಿದ್ದು, ಸಚಿವ ಸಂಪುಟಕ್ಕೆ ರಾಜೀನಾಮೆ ನೀಡಿದ್ದಾರೆ. ಹೀಗೆ ಕೆಲವು ಖಾತೆಗಳು ಖಾಲಿ ಬಿದ್ದಿವೆ ಅಥವಾ ಇತರ ಸಚಿವರ ಉಸ್ತುವಾರಿಯಲ್ಲಿವೆ.ಮುಖ್ಯವಾಗಿ ರಾಜ್ಯದ ಲಿಂಗಾಯತ ಸಮುದಾಯದ ಓಲೈಕೆ ಬಗ್ಗೆ ಚಿಂತನೆ ನಡೆಸಿರುವ ಪ್ರಧಾನಿ ಮೋದಿ, ಲಿಂಗಾಯತ ಸಮುದಾಯದೊಂದಿಗೆ ಒಂದಿಬ್ಬರು ಯುವ ಸಂಸದರಿಗೆ ಮಣೆ ಹಾಕುವ ಸಂಭವವಿದೆ.
ಉತ್ತರದಲ್ಲಿ ಸಂಪೂರ್ಣ ಪಾರಮ್ಯ ಹೊಂದಿರುವ ಬಿಜೆಪಿಗೆ ಈಗ ಕರ್ನಾಟಕದಲ್ಲಿ ಅಧಿಕಾರ ಹಿಡಿಯುವ ಪ್ರತಿಷ್ಠೆ ಪ್ರಶ್ನೆಯಾಗಿದೆ. ಈ ಬಗ್ಗೆ ಬಿಜೆಪಿ ರಾಷ್ಟ್ರಾಧ್ಯಕ್ಷ ಅಮಿತ್ ಶಾ ಹಲವು ಬಾರಿ ಹೇಳಿಕೆ ನೀಡಿದ್ದುಂಟು. ಅವರು ಮುಂದಿನ ಕೆಲವೇ ದಿನಗಳಲ್ಲಿ ರಾಜ್ಯದಲ್ಲಿ ಪ್ರವಾಸ ಕೈಗೊಳ್ಳುವ ಹಾಗೂ ಪಕ್ಷ ಸಂಘಟನೆಗೆ ಮಾರ್ಗದರ್ಶನ ನೀಡುವ ಕಾರ್ಯಕ್ರಮಗಳಿವೆ.
ಹಾಗಾದರೆ ಮೋದಿಯಿಂದ ಮತ್ತೊಂದು ಬಾರಿ ವಿಸ್ತರಣೆಗೊಳ್ಳಲಿರುವ ಕೇಂದ್ರ ಸಂಪುಟದಲ್ಲಿ ಕರ್ನಾಟಕದ ಯಾರ್ಯಾರಿಗೆ ಅದೃಷ್ಟ ಖುಲಾಯಿಸಬಹುದು ? ಒಂದು ಲೆಕ್ಕಾಚಾರದ ಪ್ರಕಾರ, ರಾಜ್ಯಸಭೆ ಸದಸ್ಯ ಪ್ರಭಾಕರ ಕೋರೆಗೆ ಅವಕಾಶ ಹೆಚ್ಚಿದೆ. ಇವರು ಲಿಂಗಾಯತ ಸಮುದಾಯದ ಪ್ರಮುಖ ನಾಯಕರಾಗಿ ಹೆಸರು ಮಾಡಿದ್ದಾರೆ. ಕೇಂದ್ರ ಸಚಿವ ಅರುಣ್ ಜೇಟ್ಲಿ ಮತ್ತು ರಾಜ್ಯ ಬಿಜೆಪಿ ವಲಯದಲ್ಲಿ ಉತ್ತಮ ಬಾಂಧವ್ಯ ಇಟ್ಟುಕೊಂಡಿದ್ದಾರೆ. ಹಾಗಾಗಿ ಇವರಿಗೆ ಸಂಪುಟದಲ್ಲಿ ಸ್ಥಾನ ಸಿಗುವುದು ಬಹುತೇಕ ಖಚಿತ.
ಬೆಳಗಾವಿಯಿಂದ ನಾಲ್ಕು ಬಾರಿ ಸಂಸದರಾಗಿ ಆಯ್ಕೆಯಾಗಿರುವ ಸುರೇಶ್ ಅಂಗಡಿಗೆ ಹಿಂದೆಯೇ ಸಂಪುಟದಲ್ಲಿ ಸ್ಥಾನ ಸಿಗಬೇಕಿತ್ತು. ಇವರು ಕೂಡಾ ಲಿಂಗಾಯತ ಸಮುದಾಯದ ಪ್ರತಿನಿಧಿಯಾಗಿದ್ದು, ಬಿಎಸ್ವೈ ಮತ್ತು ಶೆಟ್ಟರ್ ಆಪ್ತರಾಗಿದ್ದಾರೆ. ಈ ಬಾರಿ ಕೇಂದ್ರ ಸಂಪುಟದಲ್ಲಿ ಅಂಗಡಿಯ ಅದೃಷ್ಟದ ಬಾಗಿಲು ತೆರೆಯಬಹುದು. ಇನ್ನು ಕೇಂದ್ರ ಸಚಿವ ರೇಸಿನಲ್ಲಿ ಹಾವೇರಿಯಿಂದ ಎರಡು ಬಾರಿ ಲೋಕಸಭೆಗೆ ಚುನಾಯಿತರಾಗಿರುವ ಶಿವಕುಮಾರ್ ಉದಾಸಿ ಹೆಸರು ಕೇಳಿ ಬರುತ್ತಿದೆ. ಕನ್ನಡ, ಹಿಂದಿ ಮತ್ತು ಇಂಗ್ಲಿಷಿನಲ್ಲಿ ಸರಾಗವಾಗಿ ಮಾತನಾಡಬಲ್ಲ ಇವರಿಗೆ ಲೋಕಸಭೆಯ ವಿವಿಧ ವಿಶೇಷ ಸಮಿತಿಗಳಲ್ಲಿ ಕೆಲಸ ಮಾಡಿದ ಅನುಭವ, ಬಿಜೆಪಿಗರ ಪ್ರಭಾವವಿದೆ. ಇವರು ಲಿಂಗಾಯತ ಸಮುದಾಯ ಪ್ರತಿನಿಧಿ. ಬೀದರದಿಂದ ಮೊದಲ ಬಾರಿ ಸಂಸತ್ತಿಗೆ ಆಯ್ಕೆಯಾಗಿರುವ ಭಗವಂತ ಕೂಬಾರ ಹೆಸರು ಕೂಡಾ ಸಚಿವ ಸ್ಥಾನಕ್ಕೆ ಕೇಳಿ ಬರುತ್ತಿದೆ. ಇವರು ಯೋಗಗುರು-`ಪತಂಜಲಿ’ ಬಾಬಾ ರಾಮ್ದೇವರ ನಿಕಟವರ್ತಿ.
ಉಳಿದಂತೆ ರಾಜ್ಯದ ಮಾಜಿ ಸಚಿವೆ, ಬಿಜೆಪಿಯ `ರಾಜ್ಯ ಉರಿಚೆಂಡು’ ಖ್ಯಾತಿಯ ಉಡುಪಿ-ಚಿಕ್ಕಮಗಳೂರು ಸಂಸದೆ ಶೋಭಾ ಕರಂದ್ಲಾಜೆ ಮತ್ತು ಕರಾವಳಿಯಲ್ಲಿ ಹೆಚ್ಚು ತಿರುಗಾಡುತ್ತ ಪಕ್ಷೀಯರೊಂದಿಗೆ ಸಕ್ರಿಯರಾಗಿರುವ ಹಾಗೂ ಲೋಕಸಭೆಯಲ್ಲಿ ಕೆಲವು ವಿಶೇಷ ಸಮಿತಿಗಳಲ್ಲಿ ಸ್ಥಾನ ಪಡೆದಿರುವ ದಕ್ಷಿಣ ಕನ್ನಡ ಲೋಕಸಭಾ ಕ್ಷೇತ್ರದ ಸಂಸದ, ಆರೆಸ್ಸೆಸ್ ವ್ಯಕ್ತಿ ನಳಿನ್ ಕುಮಾರ್ ಕಟೀಲ್ ಕೇಂದ್ರ ಸಂಪುಟ ಸೇರಿಕೊಳ್ಳುವಲ್ಲಿ ಪೈಪೋಟಿ ನಡೆಸುತ್ತಿದ್ದಾರೆ. ಇವರಲ್ಲಿ ಒಬ್ಬರಿಗೆ ಮೋದಿ ಸಂಪುಟುದಲ್ಲಿ ಸ್ಥಾನ ಲಭಿಸುವುದು ಗ್ಯಾರಂಟಿ. ಶೋಭಾ ಪ್ರಥಮ ಬಾರಿ ಪಾರ್ಲಿಮೆಂಟ್ ಪ್ರದೇಶಿಸಿದ್ದರೆ, ನಳಿನ್ಗೆ ಇದು ಎರಡನೇ ಸಂಸತ್ತು ಅವಧಿಯಾಗಿದೆ.
ಚುನಾವಣೆ ನಡೆಯುವ ರಾಜ್ಯಗಳಲ್ಲಿ ಯುವಕರನ್ನು ದೃಷ್ಟಿಯಲ್ಲಿಟ್ಟುಕೊಂಡು ಕೆಲಸ ಮಾಡುವುದರಿಂದ ಬಿಜೆಪಿಗೆ ಹೆಚ್ಚು ಲಾಭವಿದೆ ಎಂದು ಹೇಳುತ್ತಿರುವ ಅಮಿತ್ ಶಾರ ನಿರ್ದೇಶನ ಫಲಿಸಿದರೆ, ಸಂಪುಟ ಸೇರ್ಪಡೆ ರೇಸಿನಲ್ಲಿ ಯುವ ಸಂಸದ ನಳಿನ್ ಕುಮಾರ್, ಶೋಭಾರನ್ನು ಹಿಂದಿಕ್ಕಿದರೆ ಅಚ್ಚರಿಪಡಬೇಕಾಗಿಲ್ಲ. ಆದರೆ ಸಂಪುಟದಲ್ಲಿ ಮಹಿಳೆಯರಿಗೆ ಸ್ಥಾನಮಾನ ನೀಡಬೇಕೆಂದು ಬಿಜೆಪಿ ಮಹಿಳಾ ವರ್ಗದ ಆಗ್ರಹಿಸುತ್ತಿರುವುದರಿಂದ ಕೊನೆ ಕ್ಷಣದಲ್ಲಿ ಫಲಿತಾಂಶ ತಲೆಕೆಳಗಾಗಬಹುದು. ಮೋದಿ ಸರ್ಕಾರದಿಂದ ಹೊರಬೀಳಲಿರುವ ಕುತೂಹಲಭರಿತ ನಿರ್ಧಾರಗಳಿಗಾಗಿ ಇನ್ನೊಂದು ವಾರ ಕಾಯೋಣ.
* ಜೊತೆಗೆ ಹಿಂದೊಮ್ಮೆ ಎನ್ಡಿಎ ಸರ್ಕಾರದಲ್ಲಿ ರೈಲ್ವೇ ಸಚಿವರಾಗಿದ್ದ ಸದಾನಂದ ಗೌಡರಿಂದ ಹಾಲಿ ಸಚಿವ ಸ್ಥಾನ ಕಿತ್ತುಕೊಂಡು ಅವರನ್ನು ರಾಜ್ಯ ಪಕ್ಷ ಸಂಘಟನೆ ಕೆಲಸಕ್ಕೆ ನಿಯುಕ್ತಿಗೊಳಿಸುವ ಸಂಭವವಿದೆ. ಆಗ ರಾಜ್ಯದಿಂದ ಕೇಂದ್ರ ಸಂಪುಟದಲ್ಲಿ ಉಳಿಯುವುದು ರಮೇಶ್ ಜಿಗಜಿಣಗಿ ಮಾತ್ರ. ಸಚಿವರಾಗಿ ಜಿಗಜಿಣಗಿ ಏನೇನೂ ಸಾಧನೆ ಮಾಡಿಲ್ಲ ಎಂಬ ದೂರುಗಳು ಕೇಳಿ ಬರುತ್ತಿದ್ದು, ಅವರ ಸ್ಥಾನಕ್ಕೂ ಕುತ್ತು ಬಂದರೆ ಅಚ್ಚರಿಪಡಬೇಕಾಗಿಲ್ಲ.
ಧನಂಜಯ ಗುರ್ಪುರ
