ಪೊಳಲಿ : ಕಾಂಗ್ರೆಸ್ ಪಕ್ಷವು ಚುಣಾವಣಾ ಸಂದರ್ಭದಲ್ಲಿ ನೀಡಿದ್ದ ಭರವಸೆಗಳಲ್ಲಿ ಶೇಖಡಾ 95ರಷ್ಟು ಭರವಸೆಗಳನ್ನು ಈಡೆರಿಸಿ ನುಡಿದಂತೆ ನಡೆದಿದೆ ಎಂದು ದಕ್ಷಿಣ ಕನ್ನಡ ಜಿಲ್ಲಾ ಉಸ್ತುವಾರಿ ಸಚಿವರಾದ ಬಿ ರಮಾನಾಥ ರೈ ಹೇಳಿದರು. ಬಂಟ್ವಾಳ ತಾಲೂಕಿನ ಪೊಳಲಿ ಸಮೀಪದ ಪುಂಚಮೆಯಲ್ಲಿ ಶನಿವಾರ ಅರ್ಹ ಫಲಾನುಭವಿಗಳಿಗೆ 94ಸಿಸಿ ಹಕ್ಕುಪತ್ರ ವಿತರಿಸಿ ಮಾತನಾಡುತ್ತಿದ್ದರು.
ಕರ್ನಾಟಕ ರಾಜ್ಯದಲ್ಲಿ ಕಾಂಗ್ರೇಸ್ ಸರಕಾರ ಅಧಿಕಾರ ಸ್ವೀಕರಿಸಿದ ಬಳಿಕ ಜನತೆಗೆ ನೀಡಿದ ಎಲ್ಲಾ ಭರವಸೆಗಳನ್ನು ಈಡೇರಿಸಿ ನಮ್ಮದು ಜನಪರವಾದ ಸರಕಾರ ಎಂಬುವುದನ್ನು ಸಾಬೀತುಪಡಿಸಿದೆ , ಜನರ ನಡುವೆ ಸಾಮರಸ್ಯವನ್ನು ಬೆಸೆಯುವ ಪ್ರಯತ್ನವನ್ನು ಸಿದ್ದರಾಮಯ್ಯ ನೇತೃತ್ವದ ಸರಕಾರ ಮಾಡುತ್ತಿದ್ದು ಜನತೆಯ ಆಶಾಕಿರಣವಾಗಿದ್ದಾರೆ ಎಂದರು. ಅಂದು ದೇಶದಲ್ಲಿ ಅಸಮಾನತೆ ಇದ್ದಂತಹಾ ಸಂದರ್ಭದಲ್ಲಿ ಶ್ರೀಮತಿ ಇಂದಿರಾ ಗಾಂಧಿಯವರು “ಉಳುವವನೇ ಹೊಲದೊಡೆಯ” ಎಂಬ ಕಾನೂನನ್ನು ಜಾರಿಗೆ ತರುವ ಮೂಲಕ ಹಲವಾರು ದೀನರ ಬಾಳಿಗೆ ಆಶಾಕಿರಣವಾಗಿದ್ದರು.
ಆ ಯೋಜನೆಯ ಪ್ರಯೋಜನವನ್ನು ಪಡೆದ ಹಲವಾರು ಮಂದಿ ಇಂದು ಸ್ವಾಬಿಮಾನದ ಬದುಕನ್ನು ಕಟ್ಟಿಕೊಂಡು ನೆಮ್ಮದಿಯಿಂದ ಇದ್ದಾರೆ ಎಂದು ತಿಳಿಸಿದರು. ಎಲ್ಲಾ ವರ್ಗದ ಜನರು ಸಮಾನತೆಯಿಂದ ಬಾಳಬೇಕೆಂಬುದು ನಮ್ಮ ಸರಕಾರದ ಉದ್ದೇಶವಾಗಿದ್ದು ಈ ನಿಟ್ಟಿನಲ್ಲಿ ಸರಕಾರಿ ಜಮೀನಿನಲ್ಲಿ ವಾಸವಿರುವ ಜನರಿಗೆ ಜಮೀನು ನೀಡುವ ನಿಟ್ಟಿನಲ್ಲಿ 94ಸಿಸಿ ಮಸೂದೆಗೆ ತಿದ್ದುಪಡಿ ತಂದು ಜಮೀನನ್ನು ವಾಸವಿರುವವರ ಹೆಸರಿಗೇ ವರ್ಗಾಯಿಸಿ ನೀಡಲಾಗುತ್ತಿದೆ ಎಂದರು. ಈ ಯೋಜನೆಯಡಿಯಲ್ಲಿ ಕರಿಯಂಗಳ ಗ್ರಾಮ ಪಂಚಾಯತ್ ವ್ಯಾಪ್ತಿಯಲ್ಲಿ 51 ಫಲಾನುಭವಿಗಳಿಗೆ ಹಕ್ಕುಪತ್ರ ವಿತರಿಸಲು ಸಂತಸವಾಗುತ್ತಿದೆ ಎಂದರು. ಫಲಾನುಭವಿಗಳ ಮುಖದಲ್ಲಿ ಕಾಣುವ ಮಂದಹಾಸವನ್ನು ನಾನು ಆಶೀರ್ವಾದವೆಂದು ಭಾವಿಸುತ್ತೇನೆ ಎಂದರು. ಕಾರ್ಯಕ್ರಮದಲ್ಲಿ ಸುಮಾರು 51 ಫಲಾನುಭವಿಗಳಿಗೆ ಹಕ್ಕುಪತ್ರವನ್ನು ಹಾಗೂ 7 ಫಲಾನುಭವಿಗಳಿಗೆ ಹಕ್ಕುಪತ್ರದ ಜೊತೆಗೆ ವಿವಿಧ ಸವಲತ್ತುಗಳಡಿಯಲ್ಲಿ ನೀಡಲಾಗುವ ಪರಿಹಾರದ ಚೆಕ್ ವಿತರಿಸಿದರು. 
ಕಾರ್ಯಕ್ರಮದಲ್ಲಿ ಜಿಲ್ಲಾ ಪಂಚಾಯತ್ ಸದಸ್ಯರಾದ ತುಂಬೆ ಚಂದ್ರಪ್ರಕಾಶ್ ಶೆಟ್ಟಿ, ಬಂಟ್ವಾಳ ತಾಲ್ಲೂಕು ಪಂಚಾಯತ್ ಉಪಾಧ್ಯಕ್ಷ ಅಬ್ಬಾಸ್ ಆಲಿ ,ಸಚಿವರ ಆಪ್ತ ಕಾರ್ಯದರ್ಶಿ ಉದಯಕುಮಾರ್ , ಬಂಟ್ವಾಳ ತಾಲ್ಲೂಕು ಪಂಚಾಯತ್ ಸದಸ್ಯರಾದ ಯಶವಂತ ಪೊಳಲಿ , ಕರಿಯಂಗಳ ಗಾಮ ಪಂಚಾಯತ್ ಅದ್ಯಕ್ಷೆ ಚಂದ್ರಾವತಿ , ಉಪಾದ್ಯಕ್ಷ ಚಂದ್ರಶೇಖರ ರಾವ್ ಪುಂಚಮೆ , ಸದಸ್ಯರಾದ ವೀಣಾ ಉಪೇಂದ್ರ ಆಚಾರ್ಯ, ಕರಿಯಂಗಳ ವಲಯ ಕಾಂಗ್ರೇಸ್ ಅದ್ಯಕ್ಷ ಉಮೇಶ್ ಆಚಾರ್ಯ ಉಪಸ್ಥಿತರಿದ್ದರು. ಕಂದಾಯ ನಿರೀಕ್ಷಕರಾದ ರಾಮ ಕೆ ಸ್ವಾಗತಿಸಿದರು, ರಾಜು ಪಲ್ಲಿಪಾಡಿ ವಂದಿಸಿದರು ಚಂದ್ರಹಾಸ್ ಪಲ್ಲಿಪಾಡಿ ನಿರೂಪಿಸಿದರು.
ವಿಡಿಯೋ ನೋಡಲು ಇಲ್ಲಿ ಕ್ಲಿಕ್ ಮಾಡಿ
https://youtu.be/j-HIWgtrGQo

