ಬಂಟ್ವಾಳ: ಜಿಲ್ಲಾ ಗಣಿ ಮತ್ತು ಭೂವಿಜ್ಞಾನ ಇಲಾಖೆ ಅಧಿಕಾರಿಗಳು ಸಹಿತ ಬಂಟ್ವಾಳ ಗ್ರಾಮಾಂತರ ಠಾಣೆ ಪೊಲೀಸರು ಕಾರ್ಯಾಚರಣೆ ನಡೆಸಿ ಒಟ್ಟು ರೂ 10ಲಕ್ಷ ಮೌಲ್ಯದ ಮರಳು ಲಾರಿ ಮತ್ತು ದೋಣಿ ಸಹಿತ 20 ಮಂದಿಯನ್ನು ವಶಕ್ಕೆ ತೆಗೆದುಕೊಂಡ ಘಟನೆ ಬುಧವಾರ ನಡೆದಿದೆ.
ತಾಲ್ಲೂಕಿನಲ್ಲಿ ಎಗ್ಗಿಲ್ಲದೆ ನಡೆಯುತ್ತಿರುವ ಅಕ್ರಮ ಮರಳು ಸಾಗಾಟ ದಂಧೆಗೆ ಕಡಿವಾಣ ಹಾಕುವ ನಿಟ್ಟಿನಲ್ಲಿ ಈಚೆಗಷ್ಟೇ ಎಸ್ಪಿ ಸುಧೀರ್ ಕುಮಾರ್ ರೆಡ್ಡಿ ನಿರ್ದೇಶನದಂತೆ ಎಎಸ್ಪಿ ಡಾ.ಅರುಣ್ ನೇತೃತ್ವದ ಪೊಲೀಸರ ತಂಡವು ದಿಢೀರ್ ರಾತ್ರಿ ಕಾರ್ಯಾಚರಣೆ ನಡೆಸಿ ಅಡ್ಯಾರು-ಬಿ.ಸಿ.ರೋಡ್ ರಾಷ್ಟ್ರೀಯ ಹೆದ್ದಾರಿ ನಡುವೆ ಅಕ್ರಮ ಮರಳು ಸಾಗಾಟ ನಡೆಸುತ್ತಿದ್ದ 20 ಲಾರಿಗಳನ್ನು ವಶಪಡಿಸಿಕೊಂಡು ಬಿಸಿ ಮುಟ್ಟಿಸಿದ್ದರು.
ಇಲ್ಲಿನ ಪೊಳಲಿ ಸಮೀಪದ ಅಮ್ಮುಂಜೆ ಎಂಬಲ್ಲಿ ಫಲ್ಗುಣಿ ಹೊಳೆಯಿಂದ ಮೇಲೆತ್ತಿದ ಮರಳನ್ನು ಸುರತ್ಕಲ್-ಹಾಸನ ಪರವಾನಿಗೆ ಹೊಂದಿರುವ ಮೂರು ಲಾರಿಗಳಲ್ಲಿ ಮಂಗಳವಾರ ಸಂಜೆ ತುಂಬಿಸಿಕೊಂಡು ಸಾಗಾಟಕ್ಕೆ ಸಿದ್ಧತೆ ನಡೆಸುತ್ತಿದ್ದ ವೇಳೆ ಈ ದಿಢೀರ್ ದಾಳಿ ನಡೆದಿದೆ. ಬಂಟ್ವಾಳ ಗ್ರಾಮಾಂತರ ಠಾಣಾಧಿಕಾರಿ ಉಮೇಶ್ ಕುಮಾರ್ ನೇತೃತ್ವದ ಪೊಲೀಸರು ಕಾರ್ಯಾಚರಣೆ ನಡೆಸಿದ ವೇಳೆ ಮೂರು ಲಾರಿಯಲ್ಲಿ ಅಕ್ರಮ ಮರಳು ಸಾಗಾಟ ಪತ್ತೆ ಹಚ್ಚಿದ್ದಾರೆ. ಇದೇ ವೇಳೆ ಮೂವರು ಚಾಲಕರ ಪೈಕಿ ಸ್ಥಳೀಯ ಮಳಲಿ ನಿವಾಸಿ ರಶೀದ್ ಎಂಬಾತ ಪೊಲೀಸರಿಗೆ ಸಿಕ್ಕಿದ್ದು, ಉಳಿದಂತೆ ಇಬ್ಬರು ಪರಾರಿಯಾಗಿದ್ದಾರೆ. ಈ ಪೈಕಿ ಸ್ಥಳೀಯ ಕೈಕಂಬ ಸಮೀಪದ ಸೂರಲ್ಪಾಡಿ ನಿವಾಸಿ ಖಲಂದರ್ ಶಾಫಿ ಎಂಬಾತನು ಪೊಲೀಸ್ ಸಿಬ್ಬಂದಿ ಬಸವರಾಜು ಎಂಬವರನ್ನು ತಳ್ಳಿ ಪರಾರಿಯಾಗುತ್ತಿದ್ದಂತೆಯೇ ಆತನನ್ನು ಕೂಡಾ ಬೆನ್ನಟ್ಟಿ ಹಿಡಿಯುವಲ್ಲಿ ಪೊಲೀಸರು ಯಶಸ್ವಿಯಾಗಿದ್ದಾರೆ. ಈತನ ವಿರುದ್ಧ ಕಳವು ಮಾತ್ರವಲ್ಲದೆ ಪೊಲೀಸರ ಕರ್ತವ್ಯಕ್ಕೆ ಅಡ್ಡಿಪಡಿಸಿದ ಪ್ರಕರಣ ಕೂಡಾ ದಾಖಲಾಗಿದೆ.
ಇನ್ನೊಂದೆಡೆ ಪೊಳಲಿ-ಅಮ್ಮುಂಜೆ ಫಲ್ಗುಣಿ ಹೊಳೆಯಲ್ಲಿ ಅಕ್ರಮ ಮರಳುಗಾರಿಕೆ ಅಡ್ಡೆಗೆ ಜಿಲ್ಲಾ ಗಣಿ ಮತ್ತು ಭೂವಿಜ್ಞಾನ ಇಲಾಖೆ ಅಧಿಕಾರಿ ಎಸ್.ಕೆ.ಮೂರ್ತಿ ನೇತೃತ್ವದ ಸಿಬ್ಬಂದಿಗಳು ಇದೇ ವೇಳೆ ದಾಳಿ ನಡೆಸಿ, ಸ್ಥಳೀಯ ನಿವಾಸಿಗಳಾದ ರಾಧಾಕೃಷ್ಣ ರಾವ್ ಎಂಬವರಿಗೆ ಸೇರಿದೆ ಎನ್ನಲಾದ ಭಾರೀ ಪ್ರಮಾಣದಲ್ಲಿ ಸಂಗ್ರಹಿಸಿಟ್ಟ ಆರು ಮೆಟ್ರಿಕ್ ಟನ್ ಮರಳು ರಾಶಿ ಮತ್ತು ಆರು ನಾಡ ದೋಣಿ ವಶಪಡಿಸಿಕೊಂಡಿದ್ದಾರೆ. ಇದಕ್ಕೆ ಸಂಬಂಧಿಸಿದಂತೆ ಉತ್ತರ ಪ್ರದೇಶ ಮೂಲದ ಒಟ್ಟು 18 ಮಂದಿ ಕಾರ್ಮಿಕರನ್ನು ಕೂಡಾ ಬಂಧಿಸಿ ಗ್ರಾಮಾಂತರ ಠಾಣೆ ಪೊಲೀಸರಿಗೆ ಬುಧವಾರ ಒಪ್ಪಿಸಿದ್ದಾರೆ ಎಂದು ತಿಳಿದು ಬಂದಿದೆ.
