Bysuddi9

Aug 2, 2017

ಬಂಟ್ವಾಳ: ಕಳ್ಳಿಗೆ ಗ್ರಾ.ಪಂ.ವ್ಯಾಪ್ತಿಯಲ್ಲಿ ಎಲ್ಲಾ 270, 94ಸಿ ಅರ್ಜಿಗಳನ್ನು ವಿಲೇವಾರಿ ಮಾಡಿರುವ ಕಂದಾಯ ಇಲಾಖೆಯ ಅಧಿಕಾರಿಗಳು ತುಂಬೆ ಗ್ರಾ.ಪಂ. ವ್ಯಾಪ್ತಿಯ 16 ಅರ್ಜಿಗಳ ಪೈಕಿ ಯಾವೊಂದು ಅರ್ಜಿಯನ್ನು ವಿಲೇವಾರಿ ಮಾಡಲು ಆಸಕ್ತಿ ತೋರಿಲ್ಲ. ಪಡಿತರ ಚೀಟಿ ನೀಡಲು ಅಧಿಕಾರಿಗಳು ಎರಡು ವರ್ಷದಿಂದ ಸತಾಯಿಸುತ್ತಿದ್ದಾರೆ. ಸರಕಾರದ ಯೋಜನೆಗಳನ್ನು ಜನರಿಗೆ ತಲುಪಿಸುವಲ್ಲಿ ಅಧಿಕಾರಿಗಳು ರಾಜಕೀಯ ಮಾಡುವುದು ಸರಿಯಲ್ಲ ಎಂಬ ಆಕ್ರೋಶದ ಮಾತುಗಳು ತುಂಬೆ ಗ್ರಾಮಸಭೆಯಲ್ಲಿ ಕೇಳಿ ಬಂತು.
ತುಂಬೆ ಗ್ರಾ.ಪಂ.ಅಧ್ಯಕ್ಷೆ ಹೇಮಲತಾ ಜಿ.ಪೂಜಾರಿ ಅಧ್ಯಕ್ಷತೆಯಲ್ಲಿ ರಾಮಲ್‍ಕಟ್ಟೆಯ ಶ್ರೀ ಶಾರದ ಸಭಾಂಗಣದಲ್ಲಿ ಮªಂಗಳವಾರ ನಡೆದ ಗ್ರಾಮಸಭೆಯಲ್ಲಿ ಕಂದಾಯ ಇಲಾಖೆಯ ಬಗ್ಗೆ ಗ್ರಾಮಕರಣಿಕರೊಬ್ಬರು ಮಾಹಿತಿ ನೀಡುತ್ತಿದ್ದಂತೆಯೇ ಪಂಚಾಯತ್ ಉಪಾಧ್ಯಕ್ಷ ಪ್ರವೀಣ ಈ ಆರೋಪ ಮಾಡಿದರು. ಆಹಾರ ಇಲಾಖೆಗೆ ಸಂಬಂಧಪಟ್ಟ ಮಾಹಿತಿ ನೀಡಲು ಗ್ರಾಮಸಭೆಗೆ ಆಹಾರ ಇಲಾಖೆಯ ನಿರೀಕ್ಷಕರೇ ಬರಬೇಕು. ಗ್ರಾಮಕರಣಿಕರಲ್ಲಿ ದೂರನ್ನು ಹೇಳಿಕೊಂಡರೆ ನಮ್ಮ ಸಮಸ್ಯೆಗೆ ಪರಿಹಾರ ಸಿಗುವುದಿಲ್ಲ ಎಂದು ಗ್ರಾಮಸ್ಥರೊಬ್ಬರು ಖಾರವಾಗಿ ಮಾತನಾಡಿದಾಗ ಜಿಲ್ಲಾಧಿಕಾರಿ ಕಚೇರಿಯಲ್ಲಿ ಆಹಾರನಿರೀಕ್ಷರು ಭಾಗವಹಿಸಿದ್ದು ಗ್ರಾಮಸಭೆಗೆ ಬಂದಿಲ್ಲ. ಈ ಸಮಸ್ಯೆಗಳನ್ನು ಅವರ ಗಮನಕ್ಕೆ ತರಲಾಗುವುದು ಎಂದು ನೋಡಲ್ ಅಧಿಕಾರಿ ತಿಳಿಸಿದರು.
ಸೈಬರ್ ಲೂಟಿ:
ಪಡಿತರ ಚೀಟಿಗೆ ಆಧಾರ್ ಸಂಖ್ಯೆ ಜೋಡಣೆಗೆ ಸೈಬರ್‍ನಲ್ಲಿ ಬೇಕಾಬಿಟ್ಟಿ ಹಣ ವಸೂಲಿ ಮಾಡುತ್ತಾರೆ. ಇದರಿಂದಾಗಿ ಬಡಜನರಿಗೆ ತೀವ್ರ ತೊಂದರೆಯಾಗುತ್ತಿದೆ ಎಂಬ ದೂರು ಕೇಳಿ ಬಂತು. ಸರ್ಕಾರ ಹಾಗೂ ಸೈಬರ್ ಸಂಸ್ಥೆಗಳು ಒಳ ಒಪ್ಪಂದ ಮಾಡಿಕೊಂಡು ಜನರಿಂದ ಹಣ ಲೂಟಿ ಮಾಡುತ್ತಿದೆ. ಹಣ ನೀಡಿದರೂ ಕೂಡ ಆಧಾರ್ ಸಂಖ್ಯೆ ಸರಿಯಾಗಿ ಲಿಂಕ್ ಆಗದೆ ಯಾರದ್ದೋ ಸಂಖ್ಯೆ ಇನ್ಯ್ನಾರದ್ದೋ ಖಾತೆಗೆ ಜೋಡಾಣೆಯಾಗಿದೆ ಎಂದು ಆರೋಪಿಸಿದರು.
ಮೆಸ್ಕಾಂ ವಸೂಲಿ ದಂಧೆ:
ಮೆಸ್ಕಾಂನ ಸಿಬ್ದಂದಿಗಳಲ್ಲಿ ಯಾವುದೇ ಸಣ್ಣ ಕೆಲಸ ಮಾಡಿಸಿದರೂ ಕೂಡ ಹಣ ಕೇಳುತ್ತಾರೆ. ಜನರು ಸಮಸ್ಯೆ ಹೇಳಿಕೊಂಡರೆ ದುರಸ್ತಿಗೆ ಹಣ ವಸೂಲಿ ಮಾಡುವುದೇ ಅವರ ಕಸುಬಾಗಿದೆ. ವಿದ್ಯುತ್ ಕಂಬ, ತಂತಿಗಳ ಸ್ಥಳಾಂತರಕ್ಕೆ ಹಣ ಪಡೆಯುವ ದಂಧೆ ಆರಂಭಿಸಿದ್ದಾರೆ ಎಂದು ಉಪಾಧ್ಯಕ್ಷ ಪ್ರವೀಣ್ ಗಂಭೀರ ಆರೋಪ ಮಾಡಿದರು. ಇದೇ ಸಂದರ್ಭ ಉತ್ತಮ ಕರ್ತವ್ಯ ನಿರ್ವಹಿಸಿದ ಮೆಸ್ಕಾಂ ಜೆಇ ಅವರ ಬಗ್ಗೆ ಮೆಚ್ಚುಗೆಯ ಮಾತುಗಳನ್ನಾಡಿದರು. ಕಡೆಗೋಳಿ ಭಾಗದಲ್ಲಿ ಲೋವೊಲ್ಟೇಜ್, ಕೆಳಗಿನ ತುಂಬೆಯಲ್ಲಿ ಪವರ್ ಕಟ್ ಬಗ್ಗೆ ಜನರು ಮೆಸ್ಕಾಂ ಅಧಿಕಾರಿಯ ಗಮನಕ್ಕೆ ತಂದರು. ಆದರೆ ಅಧಿಕಾರಿ ಪರಿಶೀಲಿಸುತ್ತೇನೆ ಎನ್ನುವ ಉತ್ತರವನ್ನಷ್ಟೇ ನೀಡಿದರು. ಆಧಾರ್ ಸಂಖ್ಯೆ ಜೋಡಣೆಯ ದೋಷದಿಂದ ತುಂಬೆ ಗ್ರಾ.ಪಂ. ವ್ಯಾಪ್ತಿಯ ಅನೇಕ ವಿದ್ಯಾರ್ಥಿಗಳು ಆರ್‍ಟಿಈ ಕಾಯ್ದೆಯಡಿ ಶಾಲೆಗೆ ದಾಖಲಾತಿ ಪಡೆಯವಲ್ಲಿ ಅವಕಾಶ ವಂಚಿತರಾಗಿದ್ದಾರೆ ಎನ್ನುವ ದೂರುಗಳು ಕೇಳಿ ಬಂತು.ಪಿಡಿಓ ಚಂದ್ರಾವತಿ, ತಾ.ಪಂ.ಉಪಾಧ್ಯಕ್ಷ ಗಣೇಶ್ ಸುವರ್ಣ ಹಾಗೂ ಪಂಚಾಯಿತಿ ಸದಸ್ಯರು ಹಾಗೂ ವಿವಿಧ ಇಲಾಖೆಯ ಅಧಿಕಾರಿಗಳು ಭಾಗವಹಿಸಿದ್ದರು.

By suddi9

Leave a Reply

Your email address will not be published. Required fields are marked *