ಬಂಟ್ವಾಳ: ಸೇವಾಂಜಲಿ ಪ್ರತಿಷ್ಠಾನದ ಮೂಲಕ ಕೃಷ್ಣಕುಮಾರ್ ಪೂಂಜಾ ಅವರು ಏಕಾಂಗಿಯಾಗಿ ಮಾಡುತ್ತಿರುವ ಸೇವಾ ಕಾರ್ಯ ಶ್ಲಾಘನೀಯವಾದುದು ಎಂದು ನಿಟ್ಟೆ ವಿವಿಯ ಕುಲಪತಿ ಡಾ.ಎನ್.ವಿನಯ ಹೆಗ್ಡೆ ಹೇಳಿದರು.
ಎ.ಬಿ. ಇನ್ಸ್ಸ್ಟಿಟ್ಯೂಟ್ ಆಫ್ ಡೆಂಟಲ್ ಸಯನ್ಸ್ ದೇರಳಕಟ್ಟೆ, ಸೇವಾಂಜಲಿ ಪ್ರತಿಷ್ಠಾನ ಫರಂಗಿಪೇಟೆ, ಧರ್ಮಸ್ಥಳ ಗ್ರಾಮಾಭಿವೃದ್ದಿ ಯೋಜನೆ ತುಂಬೆ ವಲಯ ಇದರ ಜಂಟಿ ಆಶ್ರಯದಲ್ಲಿ ಫರಂಗಿಪೇಟೆಯ ಸೇವಾಂಜಲಿ ಸಭಾಗೃಹದಲ್ಲಿ ನಡೆದ ಉಚಿತ ಹಲ್ಲು ತಪಾಸಣಾ ಶಿಬಿರ ಮತ್ತು ಮಾಹಿತಿ ಶಿಬಿರವನ್ನು ಉದ್ಘಾಟಿಸಿ ಅವರು ಮಾತನಾಡಿದರು. ಯಾವುದೇ ರೋಗ ಗುಣಮುಖವಾಗಲು ರೋಗಿಗಳು ವೈದ್ಯರೊಂದಿಗೆ ಸಹಕಾರ ನೀಡಬೇಕು ಜೊತೆಗೆ ಆರೋಗ್ಯಕ್ಕಾಗಿ ಸಾಕಷ್ಟು ಸಮಯವನ್ನು ನೀಡಬೇಕು ಎಂದರು. ಎ.ಬಿ.ಶೆಟ್ಟಿ ಆಸತ್ರೆಯ ಡಾ ಬಿಜು ಥೋಮಸ್, ಡಾ. ರಾಹುಲ್ ಭಂಡಾರಿ, ಧರ್ಮಸ್ಥಳ ಗ್ರಾಮಾಭಿವೃದ್ದಿ ಯೋಜನೆಯ ಮೇಲ್ವಿಚಾರಕ ಚಂದ್ರಶೇಖರ್, ಸೇವಾಂಜಲಿಯ ಕಂಪ ಸದಾನಂದ ಆಳ್ವ ವೇದಿಕೆಯಲ್ಲಿದ್ದರು.ಸೇವಾಂಜಲಿಯ ಆಡಳಿತ ಟ್ರಸ್ಟಿ ಕೃಷ್ಣ ಕುಮಾರ್ ಪೂಂಜಾ ಸ್ವಾಗತಿಸಿ ವಂದಿಸಿದರು. ಬಳಿಕ ಹಲ್ಲು ತಪಸಣೆ ಹಾಗೂ ಮಾಹಿತಿ ಶಿಬಿರ ನಡೆಯಿತು.
