ಬಂಟ್ವಾಳ: ದೇಶದಲ್ಲಿ ನರೇಂದ್ರ ಮೋದಿ ಪ್ರಧಾನಿಯಾದ ಮೇಲೆ ಕೈಗೊಂಡ ಕ್ರಾಂತಿಕಾರಕ ಕ್ರಮಗಳಿಂದ ಅಪಾರ ಪ್ರಮಾಣದಲ್ಲಿ ಹಣ ಉಳಿತಾಯವಾಗುತ್ತಿದ್ದು, ಆರ್ಥಿಕ ಕ್ರಾಂತಿಯ ರಾಷ್ಟ್ರವಾಗಿ ಭಾರತ ಮಾರ್ಪಟ್ಟಿದೆ ಎಂದು ಮಂಗಳೂರು ಸಂಸದ ನಳಿನ್ ಕುಮಾರ್ ಕಟೀಲ್ ಹೇಳಿದರು.ಶನಿವಾರ ಬಂಟ್ವಾಳ ತಾಲೂಕಿನ ಕಲ್ಲಡ್ಕ ಸಮೀಪ ಬಾಳ್ತಿಲ ಎಂಬಲ್ಲಿ ದ.ಕ. ಜಿಲ್ಲಾ ಕೇಂದ್ರ ಸಹಕಾರ ಬ್ಯಾಂಕ್ ಸಹಯೋಗದೊಂದಿಗೆ ಕಲ್ಲಡ್ಕ ರೈತರ ಸೇವಾ ಸಹಕಾರ ಸಂಘ ಆಶ್ರಯದಲ್ಲಿ ಬಾಳ್ತಿಲ ಗ್ರಾಮ ವ್ಯಾಪ್ತಿಯ ಸಂಘದ ಸದಸ್ಯರಿಗೆ ಮತ್ತು ಗ್ರಾಹಕರಿಗೆ ಕೇಂದ್ರ ಸರಕಾರದ ಮಹತ್ವಾಕಾಂಕ್ಷಿ ಯೋಜನೆಯಾದ ನಗದುರಹಿತ ವಹಿವಾಟಿನ ಬಗ್ಗೆ ಕಾರ್ಯಾಗಾರ ಮತ್ತು ಮಾಹಿತಿ ಶಿಬಿರ ಉದ್ಘಾಟಿಸಿ ಮಾತನಾಡಿದರು.
ಹಳ್ಳಿಯಲ್ಲಿರುವ ಜನಸಾಮಾನ್ಯನೂ ಉಳಿತಾಯ ಮನೋಭಾವನೆ ಹೊಂದಲು ಹಾಗೂ ಸ್ವಂತ ಬ್ಯಾಂಕ್ ಖಾತೆಯನ್ನು ಹೊಂದಿ ಅದರಲ್ಲಿ ಹಣ ಜಮೆ ಮಾಡಲು ಕಲಿತಿದ್ದಾನೆ. ಪ್ರಧಾನಮಂತ್ರಿಯ ಜನಧನ ಯೋಜನೆ, ಹಣಕಾಸಿನ ಬದಲಾವಣೆಗಳು, ಡಿಜಿಟಲ್ ಪಾವತಿ ವ್ಯವಸ್ಥೆ, ಜಿಎಸ್‍ಟಿ ಪದ್ಧತಿ ಸಹಿತ ಹಲವು ಕ್ರಾಂತಿಕಾರಕ ಯೋಜನೆಗಳಿಂದ ಕೇಂದ್ರ ಸರಕಾರ ಸಹಿತ ಆಡಳಿತ ಜನರ ಕಲ್ಯಾಣಕ್ಕಾಗಿ ಕೈಗೊಂಡ ಯೋಜನೆಗಳ ಪಾವತಿ ನೇರವಾಗಿ ಫಲಾನುಭವಿಯ ಬ್ಯಾಂಕ್ ಖಾತೆಗೆ ಸೇರುವಂತಾಗಿದೆ, ದಕ್ಷಿಣ ಕನ್ನಡ ಜಿಲ್ಲೆಯ 60 ಗ್ರಾಮಗಳು ಸಂಪೂರ್ಣ ಡಿಜಿಟಲೀಕರಣವಾಗಿದೆ. ಇದು ಆರ್ಥಿಕ ಸಬಲೀಕರಣಕ್ಕೆ ಕಾರಣವಾಗಿದೆ ಎಂದು ನಳಿನ್ ವಿವರಿಸಿದರು.
ಸಭಾಧ್ಯಕ್ಷತೆ ವಹಿಸಿ, ರೈತ ಸದಸ್ಯರಿಗೆ ರೂಪೇ ಕಾರ್ಡ್ ವಿತರಿಸಿ ಮಾತನಾಡಿದ ದ.ಕ. ಜಿಲ್ಲಾ ಕೇಂದ್ರ ಸಹಕಾರಿ ಬ್ಯಾಂಕ್ ಅಧ್ಯಕ್ಷ ಡಾ. ಎಂ.ಎನ್. ರಾಜೇಂದ್ರಕುಮಾರ್ ಮಾತನಾಡಿ, ನಗದುರಹಿತ ವ್ಯವಹಾರ ಪರಿಕಲ್ಪನೆಯನ್ನು ಡಿಸಿಸಿ ಬ್ಯಾಂಕ್ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಮೂರು ವರ್ಷಗಳ ಹಿಂದೆಯೇ ಮಾಡಿ ತೋರಿಸಿ ಮಾದರಿಯಾಗಿತ್ತು. ರಾಷ್ಟ್ರೀಕೃತ ಬ್ಯಾಂಕುಗಳಿಗಿಂತಲೂ ಸಹಕಾರಿ ಬ್ಯಾಂಕುಗಳು ಜನರ ನಡುವೆ ತೆರಳಿ ಸೇವಾಕಾರ್ಯ ಕೈಗೊಳ್ಳುವ ಕಾರಣ ಹಳ್ಳಿಯ ಕಟ್ಟಕಡೆಯ ಮನುಷ್ಯನ ಪ್ರೀತಿ ವಿಶ್ವಾಸ ಗಳಿಸಿಕೊಂಡಿದೆ ಎಂದರು.ಮಹಿಳೆಯರೂ ಬ್ಯಾಂಕಿಂಗ್ ವ್ಯವಹಾರದಲ್ಲಿ ಮುಂದೆ ಬರಬೇಕು. ಇದಕ್ಕೆ ಬಾಳ್ತಿಲ ಗ್ರಾಮವೇ ಆದರ್ಶವಾಗಲಿ ಎಂದು ಆಶಿಸಿದ ರಾಜೇಂದ್ರ ಕುಮಾರ್, ಡಿಜಿಟಲೀಕರಣ ಸಹಿತ ನಾನಾ ಅಭಿವೃದ್ಧಿ ಕಾರ್ಯಗಳಿಗೆ ಜನರನ್ನು ತಲುಪಲು ಡಿಸಿಸಿ ಬ್ಯಾಂಕ್ ಈ ಗ್ರಾಮವನ್ನು ದತ್ತು ತೆಗೆದುಕೊಂಡಿದೆ. ಇದರ ಸದುಪಯೋಗ ಪಡೆದುಕೊಳ್ಳುವಂತೆ ಸೂಚಿಸಿದರು.ಸ್ವಾಗತಿಸಿ ಪ್ರಾಸ್ತಾವಿಕವಾಗಿ ಮಾತನಾಡಿದ ಕಲ್ಲಡ್ಕ ರೈತರ ಸೇವಾ ಸಹಕಾರ ಸಂಘದ ಅಧ್ಯಕ್ಷ, ಮಾಜಿ ಶಾಸಕ ಕೆ.ಪದ್ಮನಾಭ ಕೊಟ್ಟಾರಿ, ಬ್ಯಾಂಕಿನ ಸೇವಾಚಟುವಟಿಕೆಗಳನ್ನು ವಿವರಿಸಿದರು. 
ಮುಖ್ಯ ಅತಿಥಿಗಳಾಗಿ ಆಗಮಿಸಿದ ಡಿಸಿಸಿ ಬ್ಯಾಂಕ್ ನಿರ್ದೇಶಕ ಟಿ.ಜಿ.ರಾಜಾರಾಮ ಭಟ್, ಮಾಜಿ ಶಾಸಕ ಎ.ರುಕ್ಮಯ ಪೂಜಾರಿ, ಬಾಳ್ತಿಲ ಗ್ರಾಮ ಪಂಚಾಯತ್ ಅಧ್ಯಕ್ಷ ವಿಠಲ ನಾಯ್ಕ್, ಅಧ್ಯಕ್ಷ ರವೀಂದ್ರ ಕಂಬಳಿ ಶುಭ ಹಾರೈಸಿದರು. ಈ ಸಂದರ್ಭ ಸಂಪನ್ಮೂಲ ವ್ಯಕ್ತಿ ಜಯಂತ್ ಶೆಟ್ಟಿ, ಉಷಾ ಕಾಮತ್, ವಲಯ ಮೇಲ್ವಿಚಾರಕ ಕೇಶವ ಕಿಣಿ ಎಚ್, ಮುಖ್ಯ ಕಾರ್ಯನಿರ್ವಹಣಾಧಿಕಾರಿ ಸುರೇಶ ಕೆ, ಗ್ರಾಪಂ ಉಪಾಧ್ಯಕ್ಷೆ ಪೂರ್ಣಿಮಾ, ಸೇವಾ ಸಂಘ ಉಪಾಧ್ಯಕ್ಷ ಸುಧಾಕರ ರೈ, ಗಿರಿಯಪ್ಪ ಗೌಡ, ಜಯರಾಮ ರೈ, ಗೋಪಾಲಕೃಷ್ಣ ಭಟ್, ಮೃಣಾಲಿನಿ ನಾಯಕ್ ಸಹಿತ ಸಂಘದ ನಿರ್ದೇಶಕರು ವೇದಿಕೆಯಲ್ಲಿದ್ದರು. ರಾಜೇಶ್ ಕೊಟ್ಟಾರಿ ಗೋಳ್ತಮಜಲು ಕಾರ್ಯಕ್ರಮ ನಿರೂಪಿಸಿದರು.
