ಗುರುಪುರ : ತುಳುನಾಡಲ್ಲಿ ಆಟಿ ಅಮಾವಾಸ್ಯೆ ಬಳಿಕ ನಾಗರ ಪಂಚಮಿ, ಅಷ್ಟಮಿ, ಚೌತಿ…..ಹೀಗೆ ಒಂದರ ನಂತರ ಒಂದಂತೆ ವಾರ್ಷಿಕ ಹಬ್ಬಗಳು ಬರುತ್ತಿರುತ್ತವೆ. ಇಂದು ಜಿಲ್ಲೆಯ ನಿರ್ಜನ ಗುಡ್ಡ ಪ್ರದೇಶಗಳಲ್ಲಿ ಮತ್ತು ಹಳ್ಳಿಗಾಡುಗಳಲ್ಲಿ ಭಕ್ತರ ದಂಡು ಕಾಣಬಹುದಾಗಿದೆ. ಇಲ್ಲೆಲ್ಲ ಕೌಟುಂಬಿಕ ಹಿನ್ನೆಲೆಯ ನಾಗ ಬನಗಳಿಗೆ ರಾತ್ರಿಯವರೆಗೂ ತೆರಳುವ ತುಳುವರು ಭಕ್ತಿ-ಭಾವಗಳಿಂದ ಪೂಜೆ ನಡೆಸುತ್ತಿರುವುದು ಕಂಡು ಬಂತು.
ನಾಗರ ಪಂಚಮಿಗಾಗಿ ಹಳ್ಳಿಗರು ಸಂಪ್ರದಾಯದಂತೆ ಒಂದು ದಿನ ಮುಂಚೆಯೇ ಹೂ-ಹಿಂಗಾರ, ಹಾಲು, ಸೀಯಾಳ ಸಂಗ್ರಹಿಸಿಟ್ಟು, ಪಂಚಮಿಯಂದು ನಾಗಬನಗಳು, ನಾಗ ಗುಡಿಗಳಿಗೆ ತೆರಳಿ ಪೂಜೆ ಸಲ್ಲಿಸುತ್ತಾರೆ. ಕುಡುಪು ಮತ್ತು ಇತರ ಪ್ರಸಿದ್ಧ ನಾಗ ದೇವರ ದೇವಾಲಯಗಳಲ್ಲಿ ವಿಶೇಷ ಪೂಜೆ ಆಯೋಜಿಸಲಾಗಿದೆ. ಇಲ್ಲೆಲ್ಲ ಲೀಟರ್ ಗಟ್ಟಲೆ ಹಾಲು ಪೋಲಾಗಿದೆ. ನಾಗ ವಿಗ್ರಹಗಳಿಗೆ ಯಥೇಚ್ಛ ಹಾಲೆರೆಯುವುದು ಸರಿಯಲ್ಲ, ನಷ್ಟಗೊಳಿಸುವ ಹಾಲನ್ನು ಹಬ್ಬದ ಶೂಭ ಅವಸರದಲ್ಲಿ ಅನಾಥಾಶ್ರಮದ ಮಕ್ಕಳು-ಮಂದಿಗೆ ಹಂಚುವಂತೆ ಕೆಲವೆಡೆ ಜನಜಾಗೃತಿ ನಡೆದಿದ್ದರೂ, ಭಾವುಕ ಭಕ್ತಾದಿಗಳು ಈ ಬಾರಿಯೂ ನಾಗ ವಿಗ್ರಹಗಳಿಗೆ ನೀರಿನಂತೆ ಹಾಲೆರೆದಿರುವುದು ಸತ್ಯ.
ಗುರುಪುರ ಆಸುಪಾಸಿನ ಕೆಲವೆಡೆ ನಾಗಬನಗಳಲ್ಲಿ ಹಾಲೆರೆಯುತ್ತಿದ್ದ ದೃಶ್ಯಗಳು ಸಾಮಾನ್ಯವಾಗಿತ್ತು. ರಿಯಲ್ ಎಸ್ಟೇಟ್ ಪ್ರಕೋಪದಿಂದ ಗುರುಪುರದ ಅಧಿಕಾಂಶ ಕೃಷಿ ಪ್ರದೇಶ ಇಂದು ಬಂಜರಾಗಿದ್ದು, ಇಲ್ಲಿ ಪೊದೆಗಂಟಿ, ಮರಗಳ ಸಾಂದ್ರತೆ ಹೆಚ್ಚಾಗಿದ್ದು, ತುಂತುರು ಮಳೆ ಬೀಳುತ್ತಿದ್ದಾಗ ಪೊದೆಗಳಲ್ಲಿರುವ ತಮ್ಮ ನಾಗಬನಗಳಿಗೆ ತೆರಳಲು ಕೆಲವರು ತೀವ್ರ ಕಷ್ಟಪಟ್ಟಿದ್ದಾರೆ. ಊರಿನ ಕೆಲವು ಅಂಗಡಿಗಳಲ್ಲಿ ನಾಗ ತಂಬಿಲಕ್ಕೆ ಅಗತ್ಯವಿರುವ ಸೀಯಾಳ, ಹೂ, ಹೊದ್ದೊಳು, ಹಾಲು ಹಾಗೂ ಇತರ ಸೊತ್ತುಗಳು ತೊಟ್ಟೆಯಲ್ಲಿ ರೆಡಿಮೇಡಾಗಿ(ತೊಟ್ಟೆ ಒಂದರ ಬೆಲೆ 130-15 0ರೂ) ಮಾರಾಟವಾಗುತ್ತಿತ್ತು. ಅಲ್ಲದೆ, ಇಲ್ಲಿನ ಕೆಲವು ದೇವಸ್ಥಾನಗಳಲ್ಲಿ ದೂರದೂರುಗಳ ಭಕ್ತರ ಸಮೂಹ ಕಂಡು ಬಂತು. ಗುರುಪುರದ ಶ್ರೀ ಸದಾಶಿವ ದೇವಸ್ಥಾನ, ಶ್ರೀ ವರದರಾಜ ವೆಂಕಟರಮಣ ದೇವಸ್ಥಾನದಲ್ಲಿ ನಾಗ ದೇವರಿಗೆ ವಿಧಿವತ್ತಾದ ಪೂಜೆ ನೆರವೇರಿತು.

