ಮಂಗಳೂರು: ಮನಪಾವನ್ನು ಭ್ರಷ್ಟಾಚಾರದಿಂದ ಮುಕ್ತಗೊಳಿಸುವ ಮತ್ತು ಇಲ್ಲಿ ಎಲ್ಲೆಡೆ ಗೋಚರಿಸುತ್ತಿರುವ ಸಹಸ್ರಾರು ಸಮಸ್ಯೆಗಳಿಗೆ ತೆರೆ ಎಳೆಯಲು ಆಪ್ ಮುಂದಾಗಿದೆ. ಈ ನಿಟ್ಟಿನಲ್ಲಿ ಪ್ರಯುಕ್ತ ಆಮ್ ಆದ್ಮಿ ಪಕ್ಷ ಮುಂಬರುವ ಮನಪಾ ಚುನಾವಣೆಯಲ್ಲಿ ಸ್ಪರ್ಧಿಸುವುದಾಗಿ ಪಕ್ಷದ ಜಿಲ್ಲಾ ಸ್ವಯಂಸೇವಕ ರಾಜೇಂದ್ರ ಕುಮಾರ್ ಹೇಳಿದ್ದಾರೆ.
ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಬಿಜೆಪಿ ಮತ್ತು ಕಾಂಗ್ರೆಸ್ ಅಧಿಕಾರದಾಸೆಯಿಂದ ಕಣಕ್ಕಿಳಿಯುತ್ತದೆಯೇ ಹೊರತು ಉತ್ತಮ ಆಡಳಿತ ನೀಡುವ ದೃಷ್ಟಿಯಿಂದಲ್ಲ ಅವರು ದೂರಿದರು. ಮಂಗಳೂರು ನಗರ ಕಸಕಡ್ಡಿ, ಹೊಲಸು ದುರ್ನಾತಕ್ಕೆ ಹೆಸರು ಪಡೆದಿದೆ. ಡಾಂಬರು ಕಾಣದ ರಸ್ತೆಗಳು ಇಲ್ಲಿವೆ. ಡಾಂಬರೀಕರಣಗೊಂಡ ರಸ್ತೆ ಹೊಂಡಗಳಿಂದ ತುಂಬಿವೆ. ರಾಜಕಾರಣಿಗಳು ಪೊಳ್ಳು ಭರವಸೆಗಳನ್ನು ನೀಡಿ ವಂಚಿಸುತ್ತಿದ್ದಾರೆ ಎಂದು ಆರೋಪಿಸಿದರು . ದೆಹಲಿಯಲ್ಲಿ ಅಧಿಕಾರಕ್ಕೆ ಬಂದು ಎರಡೇ ವರ್ಷದಲ್ಲಿ ಹಲವು ಜನಪರ ಕೆಲಸ ಮಾಡಿದ ಆಮ್ ಆದ್ಮಿ ಪಕ್ಷ ಮಂಗಳೂರಿನಲ್ಲೂ ಉತ್ತಮ ಸಾಧನೆ ಮಾಡಲು ನಿರ್ಧರಿಸಿದೆ. ಈ ಹಿನ್ನೆಲೆಯಲ್ಲಿ ಮನಪಾದ 60 ವಾರ್ಡ್‌ಗಳಲ್ಲಿ ಮಹಿಳೆಯರನ್ನು, ಜನಸೇವೆಯಲ್ಲಿ ನಿರತರಾಗಿರುವವರನ್ನು ಕಣಕ್ಕಿಳಿಸಲು ತೀರ್ಮಾನಿಸಲಾಗಿದೆ ಎಂದರು.ದೆಹಲಿಯಲ್ಲಿ ಆಮ್ ಆದ್ಮಿ ಸರ್ಕಾರ ಮೂಲಭೂತ ಸೌಕರ್ಯಗಳನ್ನು ಒದಗಿಸಿ ಜನರಿಗೆ ಪ್ರಜಾಪ್ರಭುತ್ವದ ಮೇಲಿನ ವಿಶ್ವಾಸವನ್ನು ಉಳಿಸುವ ಕೆಲಸ ಮಾಡಿದೆ. ಶಾಲೆಯಲ್ಲಿದ್ದ ಡೊನೇಶನ್ ಪದ್ಧತಿಯನ್ನು ಸಂಪೂರ್ಣ ರದ್ದುಗೊಳಿಸಿ ಉಚಿತ ಶಿಕ್ಷಣದ ವ್ಯವಸ್ಥೆ ಕಲ್ಪಿಸಿದೆ. ದೆಹಲಿಯಲ್ಲಿ ಕಡಿಮೆ ದರದಲ್ಲಿ ವಿದ್ಯುತ್, ಕುಡಿಯುವ ನೀರು ನೀಡಿದಂತೆ ಮಂಗಳೂರು ನಗರದ ಜನರಿಗೂ ಅದೇ ರೀತಿ ವ್ಯವಸ್ಥೆ ಕಲ್ಪಿಸಲು ಯೋಜನೆ ಹಾಕಿದೆ.
ಭ್ರಷ್ಟಾಚಾರದಲ್ಲಿ ಮುಳುಗಿರುವ ಮನಪಾ ಆಡಳಿತವನ್ನು ಭ್ರಷ್ಟಾಚಾರ ಮುಕ್ತಗೊಳಿಸುವ ದೃಷ್ಟಿಯಿಂದ ಆಮ್ಆದ್ಮಿ ಪಕ್ಷ ರಾಜಕೀಯ ಪ್ರವೇಶ ಮಾಡಿ ಮನಪಾ ಚುನಾವಣೆಯಲ್ಲಿ ಸ್ಪರ್ಧಿಸಲಿದೆ ಎಂದರು. ಆಮ್ಆದ್ಮಿ ಪಕ್ಷದ ಕರ್ನಾಟಕ ರಾಜ್ಯ ಸದಸ್ಯ ಜ್ಞಾನ್ ಸಾಗರ್ ರೈ, ಜಿಲ್ಲಾ ಸ್ವಯಂಸೇವಕರಾದ ಕಬೀರ್ ಕಾಟಿಪಳ್ಳ, ಸ್ವಿಬೆರ್ಟ್‌ಡಿಸೋಜ, ಅರ್ಜುನ್ ಮೆಸ್ಕರೆನ್ಸ್ ಉಪಸ್ಥಿತರಿದ್ದರು.
