ಬಂಟ್ವಾಳ: ಡಾ.ಪರಮೇಶ್ವರ್ ಅವರಿಂದ ತೆರವಾದ ಗೃಹಸಚಿವ ಸ್ಥಾನಕ್ಕೆ ಬಂಟ್ವಾಳ ಶಾಸಕ,ದ.ಕ.ಜಿಲ್ಲಾ ಉಸ್ತುವಾರಿ ಸಚಿವ ಬಿ. ರಮಾನಾಥ ರೈ ನೇಮಕವಾಗುವುದು ಖಚಿತವಾಗಿದೆ.ಮಂಗಳವಾರ ಸಂಜೆ ಮುಖ್ಯಮಂತ್ರಿ ಸಿದ್ದರಾಮಯ್ಯ ರವರು ಅರಣ್ಯ ಸಚಿವ ರಮಾನಾಥ ರೈ ಅವರನ್ನು ಕರೆಸಿ ಸುದೀರ್ಘವಾಗಿ ಚರ್ಚೆ ನಡೆಸಿ ಗ್ರಹ ಖಾತೆಯನ್ನು ವಹಿಸಿಕೊಳ್ಳುವಂತೆ ಸೂಚಿಸಿದ್ದಾರೆಂದು ಸಚಿವರ ಆಪ್ತಮೂಲಗಳು ತಿಳಿಸಿವೆ.ಪಕ್ಷದ ಹೈಕಮಾಂಡ್ ನಿರ್ದೇಶನದ ಮೇರೆಗೆ ಒಲ್ಲದ ಮನಸ್ಸಿನಿಂದ ರಮಾನಾಥ ರೈ ಅವರು ಗ್ರಹಖಾತೆಯನ್ನು ವಹಿಸಿಕೊಳ್ಳಲು ಒಪ್ಪಿಕೊಂಡಿದ್ದು,ಒಂದೆರಡು ದಿನದಲ್ಲಿ ಈಬಗ್ಗೆ ಅಧಿಕ್ರತ ಘೋಷಣೆಯಾಗಲಿದೆ ಎಂದು ಪಕ್ಷದ ಮೂಲಗಳು ತಿಳಿಸಿವೆ.
ಕೆಪಿಸಿಸಿ ಅಧ್ಯಕ್ಷರು ಆಗಿರುವ ಪರಮೇಶ್ವರ್ ಅವರು ಗೃಹ ಸಚಿವ ಸ್ಥಾನಕ್ಕೆ ರಾಜೀನಾಮೆ ನೀಡಿದ್ದರು. ಗ್ರಹ ಖಾತೆಗೆ ಸಚಿವರುಗಳಾದ ರಾಮಲಿಂಗರೆಡ್ಡಿ,ಮಹದೇವಪ್ಪ,ಸಂತೋಷಲಾಡ್ ಅವರ ಹೆಸರು ಚಲಾವಣೆಗೆ ಬಂದಿತ್ತು.ಈ ನಡುವೆ ರಮಾನಾಥ ರೈ ಅವರ ಹೆಸರು ಕಳೆದೊಂದು ವಾರದಿಂದ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತಿತ್ತು.ಆದರೆ ಅವರು ಗ್ರಹಖಾತೆಯನ್ನು ಒಪ್ಪಿಕೊಳ್ಳಲು ಮನಸ್ಸು ಮಾಡಿರಲಿಲ್ಲ,ಇದೀಗ ರಮಾನಾಥ ರೈ ಅವರ ಮನವೊಲಿಸುವಲ್ಲಿ ಮುಖ್ಯಮಂತ್ರಿಯವರು ಯಶಸ್ವಿಯಾಗಿದ್ದಾರೆ ತನ್ಮೂಲಕ ರೈ ಅವರಿಗೆ ಖಾಕಿ ಸಮವಸ್ತ್ರದ ಖಾತೆಯೇ ದೊರಕಿದಂತಾಗಿದೆ.ಈಹಿಂದೆ ವೀರಪ್ಪ ಮೊಯ್ಲಿ ಅವರು ಮುಖ್ಯಮಂತ್ರಿಯಾಗಿದ್ದಾಗ ಅವರ ಸಂಪುಟದಲ್ಲಿ ಸಹಾಯಕ ಗ್ರಹಖಾತೆ ಸಚಿವರಾಗಿ ಕಾರ್ಯನಿರ್ವಹಿಸಿದ್ದರು.ಬಂಟ್ವಾಳದಲ್ಲಿ ಆರು ಬಾರಿ ಶಾಸಕರಾಗಿ ಆಯ್ಕೆಯಾದ ರೈ ಅವರು ರಾಜ್ಯದ ಹಿರಿಯ ಶಾಸಕರ ಪೈಕಿ ಒರ್ವರಾಗಿದ್ದಾರೆ
