ಮಂಗಳೂರು: ದ.ಕ. ಜಿಲ್ಲೆಯಲ್ಲಿ ನಡೆದ ಅಹಿತಕರ ಘಟನೆಗೆ ಸಚಿವರಾದ ಬಿ. ರಮಾನಾಥ ರೈ, ಯು. ಟಿ. ಖಾದರ್ ಹೊಣೆಗಾರರು. ಒಂದೋ ತಕ್ಷಣ ಕ್ರಮ ಕೈಗೊಳ್ಳಿ, ಆಗದಿದ್ದರೆ ರಾಜೀನಾಮೆ ನೀಡಿ ಎಂದು ದಕ್ಷಿಣ ಕನ್ನಡ ಸಂಸದ ನಳಿನ್ ಕುಮಾರ್ ಕಟೀಲು ಹೇಳಿದ್ದಾರೆ.ಪಕ್ಷದ ಕಚೇರಿಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಲೋಕಸಭಾ ಸ್ಪೀಕರ್ ಸುಮಿತ್ರಾ ಮಹಾಜನ್‌ರವರ ಜತೆ ರಷ್ಯಾ ಪ್ರವಾಸದಲ್ಲಿದ್ದೆ. ಆದರೆ ನನ್ನ ಜಿಲ್ಲೆಯಲ್ಲಿ ಭಯೋತ್ಪಾದನೆಗಿಂತ ಮಿಗಿಲಾದ ರೀತಿಯಲ್ಲಿ ಭಯದ ವಾತಾವರಣ ಇದೆ. ಅಶಾಂತಿ ಇದೆ. ಈ ಹಿನ್ನೆಲೆಯಲ್ಲಿ ಸ್ಪೀಕರ್ ಅನುಮತಿ ಪಡೆದು ಪ್ರವಾಸ ಮೊಟಕುಗೊಳಿಸಿ ಬಂದಿದ್ದೇನೆ.nalin kumar kateel

ಮುಖ್ಯಮಂತ್ರಿಯವರು ಇಲ್ಲಿಗೆ ಭೇಟಿ ನೀಡಿದಾಗ ಇಲ್ಲಿಯ ಪರಿಸ್ಥಿತಿಯನ್ನು ನಿಯಂತ್ರಿಸಿ, ಶಾಂತಿಯ ವಾತಾವರಣ ನಿರ್ಮಿಸುವ ದೃಢ ವಿಶ್ವಾಸವಿತ್ತು. ಮುಖ್ಯಮಂತ್ರಿ ಭೇಟಿಯ ಬಳಿಕ ಅಶಾಂತಿ ನಿರ್ಮಾಣವಾಗಿದೆ. ಇದಕ್ಕೆ ರಾಜ್ಯ ಸರಕಾರದ ವೈಫಲ್ಯ ಕಾರಣ ಎಂದು ದೂರಿದರು.ಜಿಲ್ಲೆಯಲ್ಲಿ ನಡೆಯುವ ಅಹಿತಕರ ಘಟನೆಯನ್ನು ಹತ್ತಿಕ್ಕುವಲ್ಲಿ ಕಾಂಗ್ರೆಸ್ ಸರಕಾರ ವಿಫಲವಾಗಿದೆ. ರಾಜ್ಯದಲ್ಲಿ ಬಿಜೆಪಿ ಸರಕಾರ ಅಧಿಕಾರದಲ್ಲಿದ್ದಾಗ ಪರಿಸ್ಥಿತಿ ತಿಳಿಯಾಗಿತ್ತು. ಆದರೆ, ಕಾಂಗ್ರೆಸ್ ಸರಕಾರದ ಅವಧಿಯಲ್ಲಿ ಮತೀಯ ಗಲಭೆಗಳು ಹೆಚ್ಚಾಗಿವೆ. ಜಿಲ್ಲೆಯಲ್ಲಿ ನಡೆದ ಪಂಜಿಮೊಗರು ಡಬಲ್ ಮರ್ಡರ್, ಜಲೀಲ್, ಶರತ್ ಮಡಿವಾಳ ಕೊಲೆ ಸೇರಿದಂತೆ ಅನೇಕ ಕೊಲೆ ಪ್ರಕರಣ ಮತ್ತು ಹಲ್ಲೆ ಪ್ರಕರಣಗಳು ಇನ್ನೂ ಪತ್ತೆ ಆಗಿಲ್ಲ. ಪೊಲೀಸ್ ಇಲಾಖೆ ಕಾನೂನು ಸುವ್ಯವಸ್ಥೆ ಕಾಪಾಡಲು ಇಚ್ಛಾಶಕ್ತಿ ತೋರ್ಪಡಿಸಿದರೂ ಜಿಲ್ಲಾ ಉಸ್ತುವಾರಿ ಸಚಿವರು ಮತ್ತು ರಾಜ್ಯ ಸರಕಾರ ಅವಕಾಶ ಕಲ್ಪಿಸಿಕೊಡುತ್ತಿಲ್ಲ. ಪೊಲೀಸ್ ಇಲಾಖೆಯ ಮೇಲೆ ಸಚಿವರು ಹಸ್ತಕ್ಷೇಪ ಮಾಡುತ್ತಿದ್ದಾರೆ, ಇವರದ್ದು ತುಘಲಕ್ ದರ್ಬಾರ್ ಎಂದು ಆರೋಪಿಸಿದರು.ಪೊಲೀಸರನ್ನು ಕೈಗೊಂಬೆಯಾಗಿಸಿ ಸಚಿವರಾದ ರಮಾನಾಥ ರೈ, ಯು. ಟಿ. ಖಾದರ್ ಆಟವಾಡುತ್ತಿದ್ದಾರೆ. ಆದ್ದರಿಂದ ಈ ಇಬ್ಬರ ಕ್ಷೇತ್ರದಲ್ಲಿ ಮಾತ್ರ ಅಹಿತಕರ ಘಟನೆಗಳು ನಡೆಯುತ್ತಿದೆ. ನಿರಂತರ ಅಹಿತಕರ ಘಟನೆ ನಡೆದರೂ ಉಸ್ತುವಾರಿ ಸಚಿವರ ಭದ್ರತೆಯನ್ನು ಸಮರ್ಪಕವಾಗಿ ನಿರ್ವಹಿಸುವ ಕುರಿತು ಪ್ರಗತಿ ಪರಿಶೀಲನೆ ಸಭೆ ನಡೆಸಿಲ್ಲ, ಜಿಲ್ಲೆಗೆ ಭೇಟಿ ನೀಡುವ ಮುಖ್ಯಮಂತ್ರಿಗಳು ಸೌಜನ್ಯಕ್ಕಾದರೂ ಶರತ್ ಆರೋಗ್ಯ ವಿಚಾರಿಸುವುದಿಲ್ಲ. ಉಸ್ತುವಾರಿ ಸಚಿವರು ತಾನು ಹುಲಿ ಎನ್ನುತ್ತಾರೆ, ಹುಲಿ ಕಾಡಿನಲ್ಲಿರಲಿ, ರಕ್ತ ಕುಡಿಯುವುದು ಬೇಡ, ರಾಜಕೀಯ ನಿವೃತ್ತಿ ಪಡೆಯಲಿ ಎಂದು ಹೇಳಿದರು.ಈ ಎಲ್ಲಾ ಪ್ರಕರಣಗಳ ಆರೋಪಿಗಳನ್ನು ಭೇದಿಸಲು ಸಾಧ್ಯವಾಗದಿದ್ದರೆ, ಸಿಬಿಐಗೆ ವಹಿಸಿ ಎಂದ ಅವರು, ಜಿಲ್ಲೆಯಲ್ಲಿ ನಡೆದ ಎಲ್ಲ ಅಹಿತಕರ ಘಟನೆಗಳ ಬಗ್ಗೆ ಎನ್ಐಎಯಿಂದ ತನಿಖೆ ನಡೆಸಲು ಕೇಂದ್ರ ಗೃಹ ಸಚಿವ ರಾಜನಾಥ ಸಿಂಗ್ ಜೊತೆ ಚರ್ಚೆ ನಡೆಸಲಾಗಿದೆ ಎಂದು ತಿಳಿಸಿದರು.ಸಂಘಪರಿವಾರವನ್ನು ಹತ್ತಿಕ್ಕಲು ರಾಜ್ಯ ಸರಕಾರ ಕೈಗೊಳ್ಳುತ್ತಿರುವ ಕ್ರಮದ ವಿರುದ್ಧ ಗುರುವಾರ ಮಂಗಳೂರಿನಲ್ಲಿ ಶಾಂತಯುತ ಪ್ರತಿಭಟನೆ ನಡೆಸಲಾಗುವುದು. ಮಾಜಿ ಮುಖ್ಯಮಂತ್ರಿ ಹಾಗು ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್.ಯಡಿಯೂರಪ್ಪ ಸಹಿತ ಹಲವು ಮುಖಂಡರು ಇದರಲ್ಲಿ ಪಾಲ್ಗೊಳ್ಳಲಿದ್ದಾರೆ ಎಂದು ನಳಿನ್ ತಿಳಿಸಿದರು.

ಶಾಂತಿ ಸಭೆಗೆ ಬಹಿಷ್ಕಾರ.

ಬೆಂಕಿ ಬಿದ್ದ ನಂತರ ನಡೆಸುವ ಶಾಂತಿ ಸಭೆಗೆ ಅರ್ಥವಿಲ್ಲ. ಮೊದಲು ಶರತ್ ಹಂತಕರ ಬಂಧನವಾಗಲಿ. ನಾನು ಸೇರಿದಂತೆ ಬಿಜೆಪಿಯ ಯಾರೂ ಕೂಡಾ ಶಾಂತಿ ಸಭೆಯಲ್ಲಿ ಪಾಲ್ಗೊಳ್ಳುವುದಿಲ್ಲ ಎಂದರು.ಮಾಜಿ ಸಚಿವ ಕೃಷ್ಣ ಜೆ. ಪಾಲೆಮಾರ್, ಮಾಜಿ ಶಾಸಕರಾದ ಯೋಗೀಶ್ ಭಟ್, ಮೋನಪ್ಪ ಭಂಡಾರಿ, ಬಿಜೆಪಿ ಜಿಲ್ಲಾಧ್ಯಕ್ಷ ಸಂಜೀವ ಮಠಂದೂರು ಮೊದಲಾದವರಿದ್ದರು.

By suddi9

Leave a Reply

Your email address will not be published. Required fields are marked *