ಮಂಗಳೂರು: ಸಚಿವ ರಮಾನಾಥ ರೈ ಅತ್ಯಂತ ಅಪಾಯಕಾರಿ ಹಾಗೂ ವಿಷಕಾರಿ ವ್ಯಕ್ತಿ. ಅವರ ವರ್ತನೆಯಿಂದ ಪಕ್ಷದಲ್ಲಿರುವವರೇ ತೊಂದರೆ ಅನುಭವಿಸುತ್ತಿದ್ದಾರೆ ಎಂದು ಕೆಪಿಸಿಸಿ ಮಾಜಿ ವಕ್ತಾರ, ಪಕ್ಷದಿಂದ ಉಚ್ಛಾಟಿಸಲ್ಪಟ್ಟಿರುವ ಹರಿಕೃಷ್ಣ ಬಂಟ್ವಾಳ್ ದೂರಿದ್ದಾರೆ.ಸುದ್ದಿಗೋಷ್ಟಿಯಲ್ಲಿ ಮಾತನಾಡಿದ ಅವರು, ರಮಾನಾಥ ರೈ ಸಚಿವರಾಗಿ ಸೂಜಿಯ ಕೆಲಸ ಮಾಡಬೇಕು. ಆದರೆ, ಅವರು ಕತ್ತರಿಯಾಗುತ್ತಿದ್ದಾರೆ. ಇವರ ಈ ನಡತೆಯಿಂದ ಶಾಸಕಿ ಶಕುಂತಳಾ ಶೆಟ್ಟಿ ಕೆಪಿಸಿಸಿ ಅಧ್ಯಕ್ಷ ಪರಮೇಶ್ವರ್ ಅವರಲ್ಲಿ ಕಣ್ಣೀರಿಡುತ್ತಿದ್ದಾರೆ. ಶಾಸಕ ಜೆ. ಆರ್. ಲೋಬೊ ಕೂಡಾ ಸಂಕಟಪಡುತ್ತಿದ್ದಾರೆ ಎಂದರು.
ಜನಾರ್ದನ ಪೂಜಾರಿಯವರಿಗೆ ಅವಾಚ್ಯವಾಗಿ ನಿಂದಿಸಿದ್ದ ಸಚಿವ ರೈ ಆಮೇಲೆ ತಾವು ಹಾಗೆ ಹೇಳಿಯೇ ಇಲ್ಲವೆಂದು ಹೇಳಿದಾಗ ಧರ್ಮಸ್ಥಳ ದೇವಸ್ಥಾನದಲ್ಲಿ ಪತ್ರಕರ್ತರ ಸಮಕ್ಷಮದಲ್ಲಿ ಆಣೆ ಮಾಡಲು ಸವಾಲು ಹಾಕಿದ್ದೆ. ಆದರೆ, ಸವಾಲು ಸ್ವೀಕರಿಸಲು ತಪ್ಪಿಸಿಕೊಂಡಿದ್ದ ರೈ ನಿನ್ನೆ ರಾತ್ರಿ ಪೂಜಾರಿಯವರಿಗೆ ಕರೆ ಮಾಡಿ ಅತ್ತಿದ್ದಾರೆ. ಕ್ಷಮೆ ಕೇಳಿದ್ದಾರೆ. ಹರಿಕೃಷ್ಣ ಬಂಟ್ವಾಳ್‌ಗೆ ಸುದ್ದಿಗೋಷ್ಟಿ ಮಾಡದಂತೆ ತಡೆಯಿರಿ ಎಂದು ಅಂಗಲಾಚಿದ್ದಾರೆ. ಇದರಲ್ಲೇ ರೈ ಮಾಡಿರುವ ತಪ್ಪು ಸಾಬೀತಾಗಿದೆ. ಮಾಡಿದ ತಪ್ಪಿಗಾಗಿ ಈಗಾಗಲೇ ಅವರು ಅನುಭವಿಸುತ್ತಿದ್ದಾರೆ ಎಂದು ಹೇಳಿದರು.ಕಾಂಗ್ರೆಸ್ ಪಕ್ಷದ ಕಚೇರಿ ಉದ್ಘಾಟನೆಗೆ, ಮೊನ್ನೆ ಮೊನ್ನೆ ಅಡ್ಯಾರಿನಲ್ಲಿ ನಡೆದಿದ್ದ ಕಾಂಗ್ರೆಸ್ ಸಮಾವೇಶಕ್ಕೆ ಸೌಜನ್ಯಕ್ಕಾದರೂ ಪೂಜಾರಿಯವರಿಗೆ ಕರೆ ಮಾಡಿ ಕರೆಯುವ ಯೋಗ್ಯತೆ ಇಲ್ಲದ ಸಚಿವ ರೈ, ಇದೀಗ ತಮ್ಮ ತಪ್ಪು ಜಗಜ್ಜಾಹೀರಾಗುತ್ತದೆ ಎಂದಾಗ ಪೂಜಾರಿಯವರಿಗೆ ಕರೆ ಮಾಡಿದ್ದಾರೆ ಎಂದು ಹರಿಕೃಷ್ಣ ಅಪಹಾಸ್ಯ ಮಾಡಿದ್ದಾರೆ.ಪೂಜಾರಿಯವರು ರೈ ಕರೆ ಮಾಡಿದ್ದ ವಿಷಯವನ್ನು ನನಗೆ ಹೇಳಿದರು. ಸುದ್ದಿಗೋಷ್ಟಿ ನಡೆಸದಂತೆಯೂ ಕೇಳಿಕೊಂಡಿದ್ದಾರೆ. ಆದರೆ, ನಾನೇನೂ ಅವರ ಒಕ್ಕಲಲ್ಲ. ನನಗೂ ಸ್ವಾಭಿಮಾನವಿದೆ. ನನ್ನ ಬಾಯಿ ಕಟ್ಟಲು ಯಾರಿಗೂ ಸಾಧ್ಯವಿಲ್ಲ. ನನಗೆ ಸಾಯುವವರೆಗೂ ಸಚಿವನಾಗಬೇಕೆಂಬ ಹಂಬಲವಿಲ್ಲ. ರೈ ಅವರು ಕೇವಲ ಪೂಜಾರಿಯವರಿಗೆ ಮಾಡಿದ ಅವಮಾನವಲ್ಲ. ಇಡೀ ಸಮಾಜಕ್ಕೆ ಮಾಡಿದ ಅವಮಾನ ಎಂದು ಹೇಳಿದ್ದಾರೆ.ತಾನೆಂದೂ ಪೂಜಾರಿಯವರಲ್ಲಿ ಯಾವುದೇ ಸ್ಥಾನಮಾನವನ್ನೂ ಕೇಳಿಲ್ಲ. ಒಬ್ಬ ಮನುಷ್ಯ ಅತ್ಯುತ್ತಮನಾಗಿ ಬದುಕುವುದು ಹೇಗೆ ಎಂದು ಕಲಿಯಲಷ್ಟೇ ಅವರ ಜೊತೆಗಿದ್ದೆ. ಆದರೆ, ರೈಯವರಿಗೆ ಪೂಜಾರಿಯವರೇ ಟಿಕೆಟ್ ಕೊಡಿಸಿದ್ದಾರೆ. ಅವರ ರಾಜಕೀಯ ಭವಿಷ್ಯಕ್ಕೆ ನಾಂದಿ ಹಾಡಿದ್ದರು. ಇಂಥಹ ವ್ಯಕ್ತಿಗೆ ರೈ ಒಳ್ಳೆಯ ಗುರುದಕ್ಷಿಣೆಯನ್ನೇ ಕೊಟ್ಟಿದ್ದಾರೆ ಎಂದು ಹರಿಕೃಷ್ಣ ಬಂಟ್ವಾಳ ಬೇಸರ ವ್ಯಕ್ತಪಡಿಸಿದರು.
ರಮಾನಾಥ ರೈ ಸರ್ವಾಧಿಕಾರಿಯೇ?
ಒಬ್ಬ ಸಚಿವರಾಗಿ ರಮಾನಾಥ ರೈಯವರು ಸಂಘ ಪರಿವಾರವನ್ನು ಹಿಂದೂ ಮತಿಯವಾದಿಗಳು ಹಾಗೂ ಎಸ್‌ಡಿಪಿಐಯನ್ನು ಮುಸ್ಲಿಂ ಮತಿಯವಾದಿಗಳೆಂದು ಕರೆಯುತ್ತಾರೆ. ಸಮಾಜವನ್ನು ಸರಿಮಾಡುವ ಯೋಗ್ಯತೆ ಸಚಿವರಿಗಿರಬೇಕು. ಅದು ಬಿಟ್ಟು ಜಿಲ್ಲೆಯ ಎಲ್ಲದರಲ್ಲೂ ಕೈಯಾಡಿಸಿಕೊಂಡಿರಲು ರಮಾನಾಥ ರೈ ಗಡಾಫಿಯೇ? ಅಥವಾ ಡಾಲ್‌ಹೌಸಿಯೇ? ಎಂದು ಹರಿಕೃಷ್ಣ ಪ್ರಶ್ನಿಸಿದ್ದಾರೆ.ಮೊನ್ನೆ ದುಷ್ಕರ್ಮಿಗಳಿಂದ ಕೊಲೆಯಾದ ಶರತ್ ಅವರ ಅಂಗಡಿಯಲ್ಲೇ ರಮಾನಾಥ ರೈಯವರ ಹಾಗೆ ನಾನೂ ನನ್ನ ಬಟ್ಟೆಗಳನ್ನು ಇಸ್ತ್ರಿ ಮಾಡಲು ಕೊಡುತ್ತಿದ್ದೆ. ಅಂತಹ ಒಬ್ಬ ಹುಡುಗ ಸತ್ತಾಗ ಸ್ವಕ್ಷೇತ್ರ ಶಾಸಕನಾಗಿ ಅವರ ಮನೆಗೆ ಹೋಗಲು, ಅಥವಾ ಆತನನ್ನು ಆಸ್ಪತ್ರೆಯಲ್ಲಿ ಭೇಟಿ ಮಾಡಲು ಹೋಗಲು ಆಗದ ಸಚಿವರು ಜಿಲ್ಲೆಯನ್ನು ವಿಭಜಿಸುವಂತಹ ಹೇಳಿಕೆಗಳನ್ನು ಕೊಡುತ್ತಾ ಅರಾಜಕತೆ ಸೃಷ್ಟಿಸುತ್ತಿದ್ದಾರೆ ಎಂದು ಹರಿಕೃಷ್ಣ ಆಕ್ರೋಶ ವ್ಯಕ್ತಪಡಿಸಿದರು.ಮುಖ್ಯಮಂತ್ರಿ ಮಂಗಳೂರಿಗೆ ಬರುತ್ತಿದ್ದ ಕಾರಣಕ್ಕೆ ಶರತ್ ಸಾವಿನ ಸುದ್ದಿಯನ್ನೇ ಮುಂದಕ್ಕೆ ಹಾಕಿದ ಸಚಿವರದ್ದು ಎಂತಹ ರಾಜಕೀಯ ಎಂದು ಅವರು ಪ್ರಶ್ನಿಸಿದ್ದಾರೆ.
ಎಸ್ಪಿ ಕಚೇರಿ ಸ್ಥಳಾಂತರಿಸಿ
ಕಾನೂನು ಸುವ್ಯವಸ್ಥೆಗಾಗಿ ಎಸ್ಪಿ ಕಚೇರಿಯನ್ನು ಪುತ್ತೂರಿಗೆ ಸ್ಥಳಾಂತರಿಸಿ. ಫರಂಗಿಪೇಟೆಯ ಪೊಲೀಸ್ ಠಾಣೆಯನ್ನು ಮೇಲ್ದರ್ಜೆಗೇರಿಸಿ ಎಂದು ಅವರು ಒತ್ತಾಯಿಸಿದ್ದಾರೆ. ಜಿಲ್ಲೆಯ ಎಲ್ಲಾ ರಸ್ತೆಗಳು, ಕಟ್ಟಡಗಳು, ಮನೆಗಳಲ್ಲಿ ಸಿಸಿಟಿವಿ ಅಳವಡಿಸಬೇಕು. ಆಗ ಮಾತ್ರ ಕ್ರೈಂ ರೇಟ್ ಮಾಡಲು ಸಾಧ್ಯ ಎಂದು ಹರಿಕೃಷ್ಣ ಅಭಿಪ್ರಾಯಪಟ್ಟರು

