ಸುಮಾರು 30-35 ವರ್ಷಗಳ ಹಿಂದೆ ಗುರುಪುರ, ಸುತ್ತಲ ಪ್ರದೇಶ ಮತ್ತು ಒಂದಷ್ಟು ದೂರದ ಮಂದಿಗೆ ವ್ಯಾಪಾರ ಕೇಂದ್ರವಾಗಿತ್ತು. ಅತ್ತ ವಾಮಂಜೂರು ಮತ್ತು ಇತ್ತ ಕೈಕಂಬ ಆಗ ಅಭಿವೃದ್ಧಿ ಹೊಂದಿರಲಿಲ್ಲ, ಬರೇ ಹೆಸರಿತ್ತು ! ಆ ಎರಡೂ ಕಡೆಯ ಮಂದಿ ಗುರುಪುರದಲ್ಲೇ ವ್ಯಾಪಾರ-ವಹಿವಾಟು ನಡೆಸುತ್ತಿದ್ದ ಕಾಲವದು. ಆ ಕಾಲದಲ್ಲಿ ಗುರುಪುರ ಪೇಟೆಯಲ್ಲಿ ಐದಾರು ಹೋಟೆಲುಗಳು ಸ್ವಾದಿಷ್ಟ ಊಟ, ತಿಂಡಿ ಚಾಹಕ್ಕೆ ಜನಪ್ರಿಯವಾಗಿತ್ತು. ಅವುಗಳಲ್ಲಿ ಜನತಾ ಹೋಟೆಲ್ ಇಂದಿಗೂ ಜನಪ್ರಿಯವಾಗಿದೆ. ಇದು ಕಳೆದ ಮೂರು ತಲೆಮಾರಿನಿಂದ ಮುಂದುವರಿದುಕೊಂಡು ಬಂದಿರುವ ಹೋಟೆಲಾಗಿದ್ದು, ದೂರದೂರುಗಳ ಮಂದಿಗೂ ಇಲ್ಲಿನ ತಿಂಡಿ-ತಿನಸುಗಳ ರುಚಿ ಏನೆಂಬುದು ಚೆನ್ನಾಗಿ ಗೊತ್ತಿದೆ. ಕೆಲವರು ಗುರುಪುರವನ್ನು ಜನತಾ ಹೋಟೆಲ್ ಮೂಲಕ ಗುರುತಿಸುವುದುಂಟು. ಇದು ಗುರುಪುರದ ಇತಿಹಾಸದಲ್ಲಿ ದಾಖಲಾತಿ ಯೋಗ್ಯ ವಿಷಯವಾಗಿದೆ.
*ಗುರುಪುರದ ಜನತಾ ಹೋಟೆಲ್

ಮಂಗಳೂರು-ಮೂಡಬಿದ್ರಿ ರಾಷ್ಟ್ರೀಯ ಹೆದ್ದಾರಿಯ(169-ಎನ್‍ಎಚ್ 13) ಗುರುಪುರದಲ್ಲಿ ಜನತಾ ಹೋಟೆಲ್ ಇದೆ. ಇದು ಅಣ್ಣಪ್ಪ ಕಾಮತರ ಮಗ ಕೃಷ್ಣ ಕಾಮತರ ಹೋಟೆಲಾಗಿದ್ದು, ಈಗ ಮಕ್ಕಳು-ಮೊಮ್ಮಕ್ಕಳು ಹೋಟೆಲಿನ ಮುಂದಾಳತ್ವ ಹೊಂದಿದ್ದರೂ `ಕಿಟ್ಟೆರ್ನ್’ ಹೋಟೆಲೆಂದೇ ಜನರಾಡಿಕೊಳ್ಳುತ್ತಿದ್ದಾರೆ. ಕೃಷ್ಣ ಕಾಮತರ ನಿಧನದ ಬಳಿಕ ಅವರ ಮಕ್ಕಳಾದ ವಿಷ್ಣು ಕಾಮತ್ ಮತ್ತು ವಿಠಲದಾಸ ಕಾಮತ್ ಆದಿಪತ್ಯದಲ್ಲಿ `ಜನತಾ’ ಹೋಟೆಲ್ ಕಾರುಬಾರು ನಡೆಯುತ್ತಿದ್ದು, ಕ್ರಮವಾಗಿ ಇವರ ಮಕ್ಕಳಾದ ವಿಜೇಂದ್ರ ಮತ್ತು ಸುಧೀರ್ ಕಾಮತ್ ಹೋಟೆಲ್ ವ್ಯವಹಾರಲ್ಲಿ ಗಿರಾಕಿಗಳ ಮನೆಮಾತಾಗಿದ್ದಾರೆ. ಇವರದ್ದು ಪಾದರಸದಂತಹ ವ್ಯಕ್ತಿತ್ವ.
* ಹೋಟೆಲ್ ಮ್ಯಾನೆಜ್ಮೆಂಟಿನಲ್ಲಿ ಪದವೀಧರ ಸುಧೀರ್ ಕಾಮತ್ .

ಹೋಟೆಲಿನ ಮತ್ತೊಂದು ವಿಷಯವೆಂದರೆ, ಈಗಲೂ ಇಲ್ಲಿ ಕಟ್ಟಿಗೆಯಿಂದಲೇ ಒಲೆ ಉರಿಸಿ, ಖಾದ್ಯ ತಯಾರಿಸಲಾಗುತ್ತಿದೆ. ಒಲೆಯ ತಿಂಡಿ-ತಿನಸು, ಗ್ಯಾಸ್ ಸ್ಟವ್ ಬಳಸಿಕೊಂಡು ಮಾಡುವ ಪದಾರ್ಥಗಳಿಗಿಂತ ರುಚಿಕರವಾಗಿರುತ್ತದೆ ಎಂದು ವಿಜೇಂದ್ರ ಹೇಳುತ್ತಾರೆ. ಒಲೆಗೆ ವಾರಕ್ಕೆ ಮೂರು ಕ್ವಿಂಟಾಲ್ ಕಿಲೋ ಕಟ್ಟಿಗೆ ಖರ್ಚಾಗುತ್ತದೆ. ಇಲ್ಲಿ ಗಿರಾಕಿಗಳಿಗೆ ಬರವಿಲ್ಲ ! ಕೆಲವೊಮ್ಮೆ ಅಡುಗೆ ಕೋಣೆಯಲ್ಲೂ ಗಿರಾಕಿಗಳು ತುಂಬಿರುತ್ತಾರೆ !! ಹೆದ್ದಾರಿ ವಾಹನಗಳ ಸಾಕಷ್ಟು ಪ್ರಯಾಣಿಕರು ಇಲ್ಲಿ ತಿಂಡಿ, ಚಾಹ ಕುಡಿದು ಮುಂದುವರಿಯುವುದುಂಟು ಮತ್ತು ಸಾಕಷ್ಟು ತಿಂಡಿ-ತಿನಸು ಪಾರ್ಸೆಲ್ ಆಗುತ್ತದೆ.
*ವಿಜೇಂದ್ರ ಕಾಮತ್ ಬಿಕಾಂ ಪದವೀಧರ .
“ವಿಜೇಂದ್ರ ಕಾಮತ್ ಬಿಕಾಂ ಪದವೀಧರರಾಗಿದ್ದರೆ, ಸುಧೀರ್ ಕಾಮತ್ ಬಿಕಾಂ ಮತ್ತು ಹೋಟೆಲ್ ಮ್ಯಾನೆಜ್ಮೆಂಟಿನಲ್ಲಿ ಪದವೀಧರ” ಹೊರಗಡೆ ಉದ್ಯಮದಲ್ಲಿ ಆಸಕ್ತಿ ತೋರಿಸದ ಇವರಿಬ್ಬರೂ ತಲೆತಲಾಂತರದಿಂದ ಮುಂದುವರಿದುಕೊಂಡು ಬಂದಿರುವ ತಮ್ಮ ಹೋಟೆಲಿನ ಸಾರಥ್ಯ ಹಿಡಿರುವ ಬಗ್ಗೆ ಖುಷಿ ವ್ಯಕ್ತಪಡಿಸುತ್ತಾರೆ. ವಿಶ್ವ ಹಿಂದೂ ಪರಿಷತ್ತಿನ(ವಿಹಿಂಪ) ಸ್ಥಳೀಯ ಮುಖಂಡರಾಗಿ ಜನಾನುರಾಗಿಯಾಗಿರುವ ವಿಷ್ಣು ಕಾಮತ್ ಸಧಾ ಸಂಘಟನೆಯೊಂದಿಗೆ ಇದ್ದು ಸಲಹೆ ಸೂಚನೆಗಳನ್ನು ನೀಡುತ್ತಾರೆ. ಯುವಕರಾದ ವಿಜೇಂದ್ರ, ಸುಧೀರ್ ಗಿರಾಕಿಗಳನ್ನು ಸದಾ ನಗುಮುಖದಲ್ಲೇ ಸ್ವಾಗತಿಸುವುದು ಇಲ್ಲಿನ ವಿಶೇಷವಾಗಿದೆ. ವ್ಯವಹಾರದಲ್ಲಿ ನಯ-ವಿನಯಕ್ಕೆ ಇವರದ್ದು ಹೇಳಿ ಮಾಡಿಸಿದ ವ್ಯಕ್ತಿತ್ವ. ಗಿರಾಕಿಗಳು ಇಲ್ಲಿ ಸ್ವಾದಿಷ್ಟವಾದ ಅವಲಕ್ಕಿ-ಸಜ್ಜಿಗೆ, ದೋಸೆ, ಬಟಾಟೆ ಅಂಬಡೆ, ಕ್ಯಾಬೀಜ್ ಒಡೆ, ಉದ್ದಿನ ಅಂಬಡೆ, ಗೋಳಿಬಜೆ, ಬನ್ಸ್, ಇಡ್ಲಿ-ಸಾಂಬಾರ್ ಚಪ್ಪರಿಸಬಹುದು.
ದುಬಾರಿ ಮಾರುಕಟ್ಟೆಯ ಈ ದಿನಗಳಲ್ಲೂ ಇಲ್ಲಿ ಕೈಗೆಟಕುವ ಬೆಲೆಗೆ ತಿಂಡಿ, ಚಾಹ, ಕಾಫಿ, ಕಷಾಯ ಲಭ್ಯ. ಕೆಲವು ವರ್ಷದಿಂದ ಉಪೇಂದ್ರ ನಾಯಕ್ ತಿಂಡಿ ತಯಾರಕರಾಗಿದ್ದರೆ, ಜಾನಕಿ, ಶ್ರೀನಿವಾಸ ಎಂಬವರು ಸಿಬ್ಬಂದಿಯಾಗಿ ದುಡಿಯುತ್ತಿದ್ದಾರೆ. ಚಾಹ-ಕಾಫಿ ಮಾಡುವ ಗಣೇಶ್ ಪ್ರಭು ಗೈರಲ್ಲಿ ಸುಧೀರ್ ಆ ಕೆಲಸ ಮಾಡಿದರೆ, ಉಪೇಂದ್ರರಿಗೆ ವಿಜೇಂದ್ರ ಸಹಾಯಕರಾಗಿ ದುಡಿಯುತ್ತಿದ್ದಾರೆ.
*ತಿಂಡಿ ತಯಾರಿಸುತ್ತಿರುವ ಗಣೇಶ್ ಪ್ರಭು
ಪದವಿಗೆ ತಕ್ಕಂತಹ ಉದ್ಯೋಗ ಗಳಿಸಲು ಪ್ರಯತ್ನಿಸಿಲ್ಲವೇ ಎಂದು ಪ್ರಶ್ನಿಸಿದರೆ, “ಪದವಿ ಗಳಿಸಿದರೂ ನಮ್ಮ ಮನೆ ಉದ್ಯಮದಲ್ಲಿ ನೆರವಾಗಲು ಯಾಕೆ ಮುಜುಗರ ಪಟ್ಟುಕೊಳ್ಳಬೇಕು” ಎಂದು ಒಂದೇ ಸಾಲಿನ ಉತ್ತರದೊಂದಿಗೆ ತಮ್ಮ ವೃತ್ತಿ ಬದುಕಿನ ಬಗ್ಗೆ ತೃಪ್ತಿ ವ್ಯಕ್ತಪಡಿಸಿದ್ದಾರೆ ಸುಧೀರ್ ಮತ್ತು ವಿಜೇಂದ್ರ. “ನಮ್ಮ ಗಿರಾಕಿಗಳಿಗೆ ಸಾಧ್ಯವಾದಷ್ಟು ಮಟ್ಟಿಗೆ ಉತ್ತಮ ಮತ್ತು ನೈರ್ಮಲ್ಯಭರಿತ ತಿಂಡಿ-ತಿನಸು ಕೊಡಬೇಕೆಂಬ ಇಚ್ಚೆ ನಮ್ಮದಾಗಿದೆ. ಆ ನಿಟ್ಟಿನಲ್ಲಿ ಮುಂದೆಯೂ ನಮ್ಮ ಪ್ರಯತ್ನವಿರುತ್ತದೆ. ನಮಗೆ ಗಿರಾಕಿಗಳೇ ದೇವರು” ಎಂದು ಹೇಳಲು ವಿಷ್ಣು ಕಾಮತ್ ಮರೆಯಲಿಲ್ಲ. ಇವರ ಹೋಟೆಲ್ ಉಧ್ಯಮ ಇನ್ನಷ್ಟು ಎತ್ತರಕ್ಕೆ ಬೆಳೆಯಲಿ ಎನ್ನುವ “ಸುದ್ದಿ9” ಇದರ ಆಶಯ.
* ಧನಂಜಯ ಗುರುಪುರ.




