ಬಂಟ್ವಾಳ:ತಾಲ್ಲೂಕಿನ ಅಮ್ಮುಂಜೆ ಮತ್ತು ಕಳ್ಳಿಗೆ ಗ್ರಾಮದ ಗಡಿಭಾಗ ರಾಮನಗರ ಎಂಬಲ್ಲಿ ರಿಕ್ಷಾ ಚಾಲಕ, ಇಲ್ಲಿನ ಅಮ್ಮುಂಜೆ ಸೋಷಿಯಲ್ ಡೆಮಾಕ್ರಾಟಿಕ್ ಪಾರ್ಟಿ ಆಫ್ ಇಂಡಿಯಾ (ಎಸ್ಡಿಪಿಐ) ವಲಯಾಧ್ಯಕ್ಷ ಮಹಮ್ಮದ್ ಆಶ್ರಫ್ (35) ಎಂಬವರನ್ನು ಆರು ಮಂದಿ ಅಪರಿಚಿತ ವ್ಯಕ್ತಿಗಳು ತಲವಾರಿನಿಂದ ಕಡಿದು ಹತ್ಯೆ ಮಾಡಿ ಪರಾರಿಯಾದ ಘಟನೆ ಬುಧವಾರ ನಡೆದಿದೆ.
ಇಲ್ಲಿನ ಕಲಾಯಿ ಮದೀನಾ ಜುಮ್ಮಾ ಮಸೀದಿಯಲ್ಲಿ ಬುಧವಾರ ಬೆಳಿಗ್ಗೆ ಎಂದಿನಂತೆ ಇವರು ನಮಾಜು ಪ್ರಕ್ರಿಯೆ ನೆರವೇರಿಸಿದ ಬಳಿಕ ಎಸ್ಡಿಪಿಐ ವಲಯಾಧ್ಯಕ್ಷ ಎಂಬ ಕಾರಣಕ್ಕಾಗಿ ಸ್ವತಃ ಇವರ ಮನೆಯಲ್ಲಿ ಬೆಳಿಗ್ಗೆ ಆರು ಗಂಟೆಗೆ ಸುಮಾರು 10 ಮಂದಿ ಸ್ಥಳೀಯ ಎಸ್ಡಿಪಿಐ ಕಾರ್ಯಕರ್ತರು ಪಕ್ಷದ ಸಭೆ ನಡೆಸಿದ್ದಾರೆ.
ಇದೇ 22ರಂದು ಎಸ್ಡಿಪಿಐ ಪಕ್ಷದ ವತಿಯಿಂದ ಎಂಟನೇ ವರ್ಷದ ಸಂಸ್ಥಾಪನಾ ದಿನಾಚರಣೆ ಪ್ರಯುಕ್ತ ಅಮ್ಮುಂಜೆಯಲ್ಲಿ ಪಕ್ಷದ ಕಚೇರಿಯೊಂದನ್ನು ತೆರೆಯಲು ಸಿದ್ಧತೆ ನಡೆಸಲಾಗಿದೆ. ಈ ನಡುವೆ ಇಲ್ಲಿನ ಎಳಂದೂರು ಎಂಬಲ್ಲಿ ಕಾಲುದಾರಿಗೆ ಕೆಂಪು ಕಲ್ಲು ಹಾಸುವ ಬಗ್ಗೆ ಶ್ರಮದಾನ ನಡೆಸಲು ಸಭೆಯಲ್ಲಿ ತೀರ್ಮಾನಿಸಲಾಗಿತ್ತು. ಇದರಿಂದಾಗಿ ಸಭೆ ಮುಗಿದ ಬಳಿಕ ಮಹಮ್ಮದ್ ಆಶ್ರಫ್ ಸಹಿತ ಎಲ್ಲರೂ ಶ್ರಮದಾನದಲ್ಲಿ ತೊಡಗಿದ್ದು, ಇದೇ ವೇಳೆ ಸುಮಾರು 10 ಗಂಟೆಗೆ ಎಂದಿನಂತೆ ಸ್ಥಳೀಯ ಬೀಡಿ (ಪರಿವೀಕ್ಷಕ) ಚಕ್ಕರ್ ಶೀನ ಪೂಜಾರಿ ಎಂಬವರ ಬಾಡಿಗೆಗೆ ಆಶ್ರಫ್ ತೆರಳಿದ್ದಾರೆ. ಈ ನಡುವೆ ಪಕ್ಷದ ನೂತನ ಕಚೇರಿಗೆ ಬಳಿಯಲು ತಂದಿದ್ದ ಸುಣ್ಣ-ಬಣ್ಣ ಡಬ್ಬವು ಆಶ್ರಫ್ ಅವರ ರಿಕ್ಷಾದಲ್ಲಿ ಉಳಿದಿತ್ತು. ಇದನ್ನು ತರವುದಕ್ಕಾಗಿ ಇನ್ನೋರ್ವ ರಿಕ್ಷಾ ಚಾಲಕ ಇಮ್ತಿಯಾಝ್ ಮತ್ತು ಇಕ್ಬಾಲ್ ಎಂಬವರು ರಾಮನಗರಕ್ಕೆ ಹೋಗುತ್ತಿದ್ದಂತೆಯೇ ಆಶ್ರಫ್ ಅವರ ಬೊಬ್ಬೆ ಕೇಳಿಸಿದೆ. ಇದೇ ವೇಳೆ ತಕ್ಷಣವೇ ನಾವಿಬ್ಬರೂ ಆಶ್ರಫ್ ಅವರು ರಿಕ್ಷಾ ನಿಲ್ಲಿಸಿದ್ದ ಜಾಗಕ್ಕೆ ತಲುಪಿದಾಗ ಬೊಬ್ಬೆ ಕೇಳಿ ಬೀಡಿ ತೆಗೆಯುದ್ದಿದ್ದ ಶೀನ ಪೂಜಾರಿ ಅವರು ಕೂಡಾ ಧಾವಿಸಿ ಬಂದಿದ್ದಾರೆ.
ಅಷ್ಟರಲ್ಲಿ ಹೆಲ್ಮೆಟ್ಧಾರಿ ಆರು ಮಂದಿ ಅಪರಿಚಿತ ದುಷ್ಕರ್ಮಿಗಳು ಎರಡು ಬೈಕಿನಲ್ಲಿ ಪರಾರಿಯಾಗಿದ್ದಾರೆ. ಹಿಂಬದಿ ತಲೆಗೆ ತಲವಾರು ಏಟಿನಿಂದ ಗಂಭೀರ ಗಾಯಗೊಂಡು ರಕ್ತದ ಮಡುವಿನಲ್ಲಿ ಬಿದ್ದಿದ್ದ ಗಾಯಾಳುವನ್ನು ತಕ್ಷಣವೇ ಮಂಗಳೂರಿನ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಯಿತಾದರೂ ಅಷ್ಟರಲ್ಲಿ ಅವರು ಸಾವನ್ನಪ್ಪಿದ್ದಾರೆ ಎಂದು ರಿಕ್ಷಾ ಚಾಲಕ ಇಮ್ತಿಯಾಝ್ ಮತ್ತು ಇಕ್ಬಾಲ್ ಹಾಗೂ ಶೀನ ಪೂಜಾರಿ ಅವರು ನಗರ ಠಾಣೆ ಪೊಲೀಸರಿಗೆ ನೀಡಿರುವ ದೂರಿನಲ್ಲಿ ವಿವರಿಸಿದ್ದಾರೆ. ಘಟನಾ ಸ್ಥಳದಲ್ಲಿ ಒಂದು ತಲವಾರು ಮತ್ತು ಹೆಲ್ಮೆಟ್ ದೊರೆತಿದ್ದು, ಪೊಲೀಸರು ಅದನ್ನು ವಶಪಡಿಸಿಕೊಂಡಿದ್ದಾರೆ.
ಮೃತ ಆಶ್ರಫ್ ಕಳೆದ ಎರಡು ವರ್ಷದ ಹಿಂದೆಯಷ್ಟೇ ವಿವಾಹವಾಗಿ ಪ್ರತ್ಯೇಕ ಮನೆಯಲ್ಲಿ ಪತ್ನಿಯೊಂದಿಗೆ ವಾಸವಾಗಿದ್ದು, ಇವರಿಗೆ ಮಕ್ಕಳು ಇಲ್ಲ. ಇದರಿಂದಾಗಿ ಪಕ್ಷ ಸಂಘಟನೆಯಲ್ಲಿ ಸಕ್ರಿಯವಾಗಿ ತೊಡಗಿಸಿಕೊಂಡು ಸಮಾಜಮುಖಿ ಚಟುವಟಿಕೆ ನಡೆಸುತ್ತಿದ್ದರು ಎಂದು ಸ್ಥಳೀಯರು ತಿಳಿಸಿದ್ದಾರೆ.
ಈ ಹಿಂದೆ ಬ್ಯಾನರ್ ವಿವಾದಕ್ಕೆ ಸಂಬಂಧಿಸಿದಂತೆ ಮಾತ್ರ ನಗರ ಠಾಣೆಯಲ್ಲಿ ಇವರ ವಿರುದ್ಧ ಪ್ರಕರಣವೊಂದು ದಾಖಲಾಗಿದ್ದು, ಉಳಿದಂತೆ ಯಾವುದೇ ಪ್ರಕರಣ ದಾಖಲಾಗಿಲ್ಲ ಎಂದು ಪೊಲೀಸರು ತಿಳಿಸಿದ್ದಾರೆ.
ನಗರ ಠಾಣಾಧಿಕಾರಿ ಎ.ಕೆ.ರಕ್ಷಿತ್ ಗೌಡ, ಡಿವೈಎಸ್ಪಿ ಭಾಸ್ಕರ ರೈ, ಎಸ್ಪಿ ಭೂಷಣ್ ಜಿ.ಬೊರಸೆ ಮತ್ತಿತರರ ಪೊಲೀಸರು ಬಿ.ಸಿ.ರೋಡ್ ನಗರ ಠಾಣೆ ಮತ್ತು ಘಟನಾ ಸ್ಥಳಕ್ಕೆ ಭೇಟಿ ನೀಡಿದ್ದಾರೆ.
ಇಲ್ಲಿನ ಬೆಂಜನಪದವು ಪ್ರದೇಶದಲ್ಲಿ ಸರ್ಕಾರಿ ಪ್ರಾಥಮಿಕ ಆರೋಗ್ಯಕೇಂದ್ರ, ಸರ್ಕಾರಿ ಪ್ರೌಢಶಾಲೆ, ಪದವಿಪೂರ್ವ ಕಾಲೇಜು, ಮಸೀದಿ ಮತ್ತು ಎಂಜಿನಿಯರ್ಸ್ ಕಾಲೇಜು ಇದ್ದರೂ ಕಳೆದ ಏಳೆಂಟು ತಿಂಗಳ ಹಿಂದೆಯಷ್ಟೇ ಸ್ಥಳೀಯರ ಭಾರೀ ವಿರೋಧದ ನಡುವೆಯೇ ಮದ್ಯದಂಗಡಿ ಆರಂಭಗೊಂಡಿದೆ. ಈ ಪರಿಸರದಲ್ಲಿ ಗಾಂಜಾ ಮಾರಾಟ ದಂಧೆ ಇರುವ ಬಗ್ಗೆಯೂ ಪೊಲೀಸರಿಗೆ ಮಾಹಿತಿ ಇದೆ. ಕಳೆದ ಮೂರು ವರ್ಷಗಳ ಹಿಂದೆಯಷ್ಟೇ ಇಲ್ಲಿನ ಕಲ್ಪನೆ ರಿಕ್ಷಾ ಪಾರ್ಕಿನಲ್ಲಿ ರಿಕ್ಷಾ ಚಾಲಕ ರಾಜೇಶ ಪೂಜಾರಿ ಎಂಬವರನ್ನು ಅಪರಿಚಿತ ದುಷ್ಕರ್ಮಿಗಳು ಮುಂಜಾನೆ ತಲವಾರಿನಿಂದ ಕಡಿದು ಹತ್ಯೆ ಮಾಡಿದ್ದರು. ಇದರಿಂದಾಗಿ ಮದ್ಯದಂಗಡಿ ಮತ್ತು ಗಾಂಜಾ ಮಾರಾಟಕ್ಕೆ ಕಡಿವಾಣ ಹಾಕದಿದ್ದಲ್ಲಿ ಇಂತಹ ದುಷ್ಕøತ್ಯ ಮುಂದುವರಿಯುವ ಭೀತಿ ಎದುರಾಗಿದೆ ಎಂದು ಸ್ಥಳೀಯ ನಾಗರಿಕರು ಅಳಲು ತೋಡಿಕೊಂಡಿದ್ದಾರೆ.
