ಬಂಟ್ವಾಳ:ಮಂಗಳವಾರ ಸಂಜೆ ನಡೆದ ಅಹಿತಕರ ಘಟನೆಯ ಬಳಿಕ ಉಂಟಾಗಿದ್ದ ಪ್ರಕ್ಷುಬ್ದ ಸ್ಥಿತಿ ಬುಧವಾರ ಸಂಪೂರ್ಣ ಸಹಜಸ್ಥಿತಿಗೆ ಬಂದಿದೆ.ಸದ್ಯ ಬೂದಿ ಮುಚ್ಚಿದ ಕೆಂಡದಂತಿರುವ ಕಲ್ಲಡ್ಕದಲ್ಲಿ ಆತಂಕದಲ್ಲೆ ಬುಧವಾರ ಪೊಲೀಸರ ಸರ್ಪಗಾವಲಿನ ಮಧ್ಯೆ ಅಂಗಡಿ ಮುಂಗಟ್ಟು ಗಳು ಎಂದಿನಂತೆ ತೆರೆದು ಕೊಂಡು ವ್ಯವಹಾರ ನಡಸಿವೆ. ವಾಹನಗಳುಒಡಾಟ ನಡೆಸಿದೆ.ಆದರೆ ಜನಸಂಚಾರ ಮಾತ್ರ ವಿರಳವಾಗಿತ್ತು.
ಈ ನಡುವೆ ಮಂಗಳವಾರ ರಾತ್ರಿ ಸುಮಾರು 9 ಗಂಟೆಯ ಹೊತ್ತಿಗೆ ಮನೆಗೆ ತೆರಳುತ್ತಿದ್ದ ಸ್ಥಳೀಯ ನಿವಾಸಿ ಪವನ್ ಎಂಬ ಯುವಕನಿಗೆ ಐವರು ದುಷ್ಕರ್ಮಿಗಳು ಚೂರಿಯಿಂದ ಇರಿದ ಘಟನೆಯು ನಡೆದಿದೆ.ಇದರ ಬೆನ್ನಲೇ ಮೆಲ್ಕಾರ್,ಬಿ.ಸಿ.ರೋಡ್,ಕೈಕಂಬ ಮೊದಲಾದ ಆಯಕಟ್ಟಿನ ಸ್ಥಳಗಳಲ್ಲಿ ಮುಂಜಾಗ್ರತಾಕ್ರಮವಾಗಿ ಪೊಲೀಸ್ ಬಂದೋಬಸ್ತನ್ನು ಹೆಚ್ಚಿಸಲಾಯಿತು. 9ಕೇಸ್,ಹಲವರ ವಶ: ಮಂಗಳವಾರ ನಡೆದ ಅಹಿತಕರ ಘಟನೆಗೆ ಸಂಬಂಧಿಸಿ ಬಂಟ್ವಾಳ ನಗರ ಠಾಣೆಯಲ್ಲಿ ಒಟ್ಟು 9 ಕೇಸ್ ಗಳು ದಾಖಲಾಗಿದೆ .ಈ ಸಂಬಂಧ ಇತ್ತಂಡಗಳ ಸುಮಾರು 15 ಮಂದಿಯನ್ನು ಪೊಲೀಸರು ವಶಕ್ಕೆ ತೆಗೆದುಕೊಂಡು ವಿಚಾರಣೆ ನಡೆಸುತ್ತಿದ್ದಾರೆ.
* ಇನ್ನಷ್ಟು ಪ್ರಕರಣ ದಾಖಲಾಗುವ ನಿರೀಕ್ಷೆ ಇದೆ .
ಘಟನೆಯಿಂದ 4 ಮಂದಿ ಗಾಯಗೊಂಡಿದ್ದು,1 ಮಾರುತಿ ಒಮ್ನಿ 4 ಬೈಕ್, 5ಅಂಗಡಿ,1ಮನೆಗೆ ಹಾನಿ ಉಂಟಾಗಿದೆ ಎಂದು ತಿಳಿದು ಬಂದಿದೆ. ಘಟನೆಯ ಹಿನ್ನಲೆಯಲ್ಲಿ ಜಾರಿಯಲ್ಲಿರುವ ಸೆ.೧೪೪ ನಿಷೇದಾಜ್ಙೆಯನ್ನು ಜೂ.೨೧ ರವರೆಗೆ ವಿಸ್ತರಿಸಿ ಆದೇಶ ಹೊರಬಿದ್ದಿದೆ.ಹಾಗೆಯೇ ಮುಂಜಾಗ್ರತಾಕ್ರಮವಾಗಿ ಪಕ್ಕದ ಪುತ್ತೂರು,ಬೆಳ್ತಂಗಡಿ, ಸುಳ್ಯ ತಾಲೂಕಿಗೂ ಇಂದು ರಾತ್ರಿ ವರೆಗೆ ನಿಷೇದಾಜ್ಙೆಯನ್ನು ಜಾರಿಗೊಳಿಸಲಾಗಿದೆ.
* ಐಜಿ ಭೇಟಿ;
ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಭೂಷಣ ಬೊರಸೆ ಅವರು ಬಂಟ್ವಾಳ ನಗರ ಠಾಣೆಯಲ್ಲಿ ಮೊಕ್ಕಾಂ ಹೂಡಿದ್ದು, ಪರಿಸ್ಥಿತಿಯನ್ನು ಅವಲೋಕಿಸುತ್ತಿದ್ದಾರೆ.ಈ ಸಂದರ್ಭದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಎಸ್ಪಿ ಬೊರಸೆ ಅವರು ಘಟನೆಗೆ ಸಂಬಂಧಿಸಿ ಅಮಾಯಕರನ್ನು ಬಂಧಿಸುವುದಿಲ್ಲ ,ತನಿಖೆ ನಡೆಸಿಯೇ ನೈಜ ಆರೋಪಿಗಳನ್ನು ಬಂಧಿಸಲಾಗುವುದು ಎಂದು ಸ್ಪಷ್ಟ ಪಡಿಸಿದ್ದಾರೆ. ಬುಧವಾರ ಸಂಜೆ ಪಶ್ಚಿಮ ವಲಯದ ಐಜಿಪಿ ಹರಿಹರನ್ ಅವರು ಗಲಭೆ ಪೀಡಿತ ಕಲ್ಲಡ್ಕಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದರು.ಬಳಿಕ ಠಾಣೆಗೆ ಅಗಮಿಸಿ ತನಿಖೆಗೆ ಮಾರ್ಗದರ್ಶನ ನೀಡಿದರು.
* ಮುಖಂಡರಿಂದ ಗಾಯಾಳುಗಳ ಭೇಟಿ :
ಮೆಲ್ಕಾರ್ ನಲ್ಲಿ ದುಷ್ಕರ್ಮಿಗಳಿಂದ ಚೂರಿ ಇರಿತದಿಂದ ಗಾಯಗೊಂಡು ಮಂಗಳೂರಿನ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವ ಪವನ್ ಹಾಗೂ ಕಲ್ಲೇಟಿನಿಂದ ಗಾಯಗೊಂಡ ಕಾನ್ಸ್ ಟೇಬಲ್ ಧನಂಜಯ್ ಅವರನ್ನು ಬಿಜೆಪಿ ಮುಖಂಡ ರಾಜೇಶ್ ನಾಯ್ಕ್ ಅವರು ಭೇಟಿ ಮಾಡಿ ಧೈರ್ಯ ತುಂಬಿದರು.
ಈಸಂದರ್ಭದಲ್ಲಿ ಬಿಜೆಪಿ ಮುಖಂಡರಾದ ಪುರುಷೋತ್ತಮ ಶೆಟ್ಟಿ,ರಮಾನಾಥ ರಾಯಿ,ಬಜರಂಗದಳ ಪ್ರಮುಖ ಗುರುರಾಜ್ ಬಂಟ್ವಾಳ ಮೊದಲಾದವರಿದ್ದರು.


