ಬಂಟ್ವಾಳ: ಪ್ರಮುಖ ಸಭೆಗಳಿಗೆ ಇಲಾಖೆಗಳ ತಾಲೂಕು ಮಟ್ಟದ ಅಧಿಕಾರಿಗಳು ಗೈರಾಗಿ ಕೆಳ ದರ್ಜೆಯ ಅಧಿಕಾರಿಗಳನ್ನು ಕಳುಹಿಸುವುದಕ್ಕೆ ಬಂಟ್ವಾಳ ತಾಪಂ ಮುಖ್ಯ ಕಾರ್ಯನಿರ್ವಾಹಣಾಧಿಕಾರಿ ಸಿಪ್ರಿಯಾ ಮಿರಾಂದ ಫುಲ್ ಗರಂ ಆದ ಘಟನೆ ಮಂಗಳವಾರ ನಡೆಯಿತು. ಬಿ.ಸಿ.ರೋಡ್ ಎಸ್‍ಜಿಎಸ್‍ವೈ ಸಭಾಂಗಣದಲ್ಲಿ ಇಂದು ನಡೆದ ಇಲಾಖಾವಾರು ಮಾಸಿಕ ಕೆಡಿಪಿ ಸಭೆಗೆ ವಿವಿಧ ಇಲಾಖೆಗಳ ತಾಲೂಕು ಮಟ್ಟದ ಅಧಿಕಾರಿಗಳು ಗೈರು ಆಗಿ ಅವರ ಕೆಳಗಿನ ಅಧಿಕಾರಿಗಳು ಹಾಜರಾಗಿದ್ದರು. ಇಲಾಖೆಗಳ ಪ್ರಗತಿ ಪರಿಶೀಲನೆಯ ವೇಳೆ ಕೆಳ ಮಟ್ಟದ ಅಧಿಕಾರಿಗಳಿಂದ ಸ್ಪಷ್ಟ ಉತ್ತರ ಸಿಗದಿರುವುದರಿಂದ ಅಸಮಾಧಾನಗೊಂಡ ಸಿಪ್ರಿಯಾ ಮಿರಾಂದ, ಅಧಿಕಾರಿಗಳನ್ನು ತೀವ್ರವಾಗಿ ತರಾಟೆಗೆ ತೆಗೆದುಕೊಂಡರು.DSC_2566

ಇತ್ತೀಚೆಗೆ ನಡೆದ ತಾಲೂಕು ಮಟ್ಟದ ಎಸ್ಸಿ-ಎಸ್ಟಿ ಸಭೆಗೂ ಹೆಚ್ಚಿನ ಇಲಾಖೆಗಳ ತಾಲೂಕು ಮಟ್ಟದ ಅಧಿಕಾರಿಗಳು ಹಾಜರಾಗದೆ ಅವರ ಕೆಳಗಿನ ಅಧಿಕಾರಿಗಳನ್ನು ಕಳುಹಿಸಿದ್ದಾರೆ. ಈ ಸಭೆಯಲ್ಲೂ ಅದೇ ಪುನರಾವರ್ತನೆಗೊಂಡಿದೆ. ಇಲ್ಲಸಲ್ಲದ ಸಬೂಬು ಹೇಳಿ ತಾಲೂಕು ಮಟ್ಟದ ಅಧಿಕಾರಿಗಳು ಸಭೆಗಳಿಗೆ ತಪ್ಪಿಸುತ್ತಿರುವುದು ಹವ್ಯಾಸವಾಗಿಬಿಟ್ಟಿದೆ. ಛಾಪೆಯಿಂದ ಎದ್ದು ನೇರವಾಗಿ ಸಭೆಗೆ ಬರುವ ನಿಮಗೆ ಇಲಾಖೆಗಳ ಪ್ರಗತಿಯ ಯಾವುದೇ ಮಾಹಿತಿ ಇರುವುದಿಲ್ಲ ಎಂದು ಸಭೆಗೆ ಹಾಜರಾದ ಕೆಳ ಮಟ್ಟದ ಅಧಿಕಾರಿಗಳನ್ನು ತರಾಟೆಗೆ ತೆಗೆದುಕೊಂಡರು. ಪ್ರಮುಖ ಸಭೆಗಳಿಗೆ ಬೇಕಾದ ಅಧಿಕಾರಿಗಳು ಗೈರು ಆಗುವುದರಿಂದ ನಮಗೆ ಇಲ್ಲಿ ಸಮಸ್ಯೆಯಾಗುತ್ತಿದೆ. ನಾವಿಲ್ಲಿ ಸಭೆ ನಡೆಸುವುದು ಕಾಟಾಚಾರಕ್ಕೆ ಅಲ್ಲ. ನಮ್ಮ ಮಾತಿಗೆ ಬೆಲೆ ನೀಡಿ. ಮುಂದಿನ ಸಭೆಗೆ ಇದೇ ರೀತಿ ಪುನರಾವರ್ತನೆಯಾಗದರೆ ಅಂಥವರ ಮೇಲೆ ಸೂಕ್ತ ಕ್ರಮ ಜರಗಿಸಲು ಜಿಪಂ ಮುಖ್ಯ ಕಾರ್ಯನಿರ್ವಾಹಣಾಧಿಕಾರಿಗೆ ಶಿಫಾರಸು ಮಾಡಲಾಗುವುದು ಎಂದು ಎಚ್ಚರಿಕೆ ನೀಡಿದ ಅವರು, ಈ ವಿಷಯವನ್ನು ನಿಮ್ಮ ಮೇಲಾಧಿಕಾರಿಗಳಿಗೆ ತಲುಪಿಸಿ ಎಂದು ಸೂಚಿಸಿದರು.

DSC_2562
ಸಭೆಯಲ್ಲಿ ಕೆಳ ಮಟ್ಟದ ಅಧಿಕಾರಿಯೊಬ್ಬರು ತಮ್ಮ ಇಲಾಖೆಯಲ್ಲಿ ನಡೆಸಿದ ಕಾರ್ಯಕ್ರಮವೊಂದನ್ನು ವಿವರಿಸುತ್ತಿದ್ದಂತೆ ಮಧ್ಯೆ ಪ್ರವೇಶಿಸಿದ ಇಒ ಕಾರ್ಯಕ್ರಮದ ಮಾಹಿತಿ ಇಲ್ಲಿ ಆವಶ್ಯಕತೆ ಇಲ್ಲ. ಇಲಾಖೆಯಲ್ಲಿ ಆದ ಪ್ರಗತಿಯ ಬಗ್ಗೆ ಸಭೆಗೆ ಮಾಹಿತಿ ಕೊಡಿ ಎಂದಾಗ ಪ್ರಗತಿಯ ಬಗ್ಗೆ ಅಧಿಕಾರಿಯಲ್ಲಿ ಯಾವುದೇ ಮಾಹಿತಿ ಇರಲಿಲ್ಲ. ಇದಕ್ಕೆ ಪ್ರತಿಕ್ರಿಯಿಸಿದ ಇಒ ಇದೇ ಕಾರಣಕ್ಕೆ ಸಭೆಗೆ ನೀವು ಬರಬೇಡಿ ಇಲಾಖೆಯ ತಾಲೂಕು ಮಟ್ಟದ ಅಧಿಕಾರಿಗಳೇ ಬರಬೇಕು ಎಂದು ಮತ್ತೊಮ್ಮೆ ತನ್ನ ಕೋಪವನ್ನು ಹೊರ ಹಾಕಿದರು. ಇದೇ ವೇಳೆ ಅರಣ್ಯ ಇಲಾಖೆಯ ಪ್ರಗತಿ ಪರೀಶೀಲನೆಯ ವೇಳೆ ಪ್ರತಿಕ್ರಿಯಿಸಿದ ಇಒ ಸಿಪ್ರಿಯಾ ಮಿರಾಂದ, ಅರಣ್ಯ ಇಲಾಖೆಯಿಂದ ಲಭ್ಯವಾಗುವ ಸೌಲಭ್ಯಗಳನ್ನು ಎಲ್ಲ ವರ್ಗದ ಜನರಿಗೂ ತಲುಪುವಂತೆ ಮಾಡಿ ಎಂದು ಸಲಹೆ ನೀಡಿದರು.

ಬಂಟ್ವಾಳ ತಾಲೂಕು ಪಂಚಾಯತ್ ಅಧ್ಯಕ್ಷ ಚಂದ್ರಹಾಸ ಕರ್ಕೇರ ಸಭೆಯ ಅಧ್ಯಕ್ಷತೆ ವಹಿಸಿದ್ದರು. ಉಪಾಧ್ಯಕ್ಷ ಅಬ್ಬಾಸ್ ಅಲಿ, ಸ್ಥಾಯಿ ಸಮಿತಿ ಅಧ್ಯಕ್ಷೆ ಧನಲಕ್ಷ್ಮಿ ಬಂಗೇರ ವೇದಿಕೆಯಲ್ಲಿ ಉಪಸ್ಥಿತರಿದ್ದರು.

ಕೇಪು ಮತ್ತು ಪುಣಚ್ಚ ಗ್ರಾಮದಲ್ಲಿ ತಲಾ ಒಂದೊಂದು ಇಲಿ ಜ್ವರ, ಪುಣಚ್ಚದಲ್ಲಿ ಹನ್ನೆರಡು ಡೆಂಗ್ ದೃಡೀಕರಣ, 34 ಶಂಕಿತ ಪ್ರಕರಣ ಪತ್ತೆಯಾಗಿದೆ. ಪುದು ಗ್ರಾಮದಲ್ಲಿ ಎರಡು, ಬೆಂಜನಪದವಿನಲ್ಲಿ ಒಂದು ಮಲೇರಿಯಾ ರೋಗ ಪತ್ತೆಯಾಗಿದೆ. ಸಾಂಕ್ರಮಿಕ ರೋಗದ ನಿಯಂತ್ರಣದ ಬಗ್ಗೆ ಆರೋಗ್ಯ ಕಾರ್ಯಕರ್ತೆಯರಿಂದ ಜಾಗೃತಿ ಮೂಡಿಸಲಾಗುತ್ತಿದೆ. ಯಾವುದೇ ಭಯ ಪಡುವ ಆವಶ್ಯಕತೆ ಇಲ್ಲ ಎಂದು ಆರೋಗ್ಯ ಇಲಾಖೆಯ ಪ್ರಗತಿ ಪರಿಶೀಲನೆ ವೇಳೆ ಆರೋಗ್ಯಾಧಿಕಾರಿ ಡಾ. ದೀಪಾ ಪ್ರಭು ಮಾಹಿತಿ ನೀಡಿದರು.

By suddi9

Leave a Reply

Your email address will not be published. Required fields are marked *