ಮೂಡುಬಿದಿರೆ: ಔಷಧಿಗೆ ಹಣ ಕೇಳಿದಕ್ಕೆ ಪತ್ನಿಗೆ ಬೈದು ಹಲ್ಲೆ ನಡೆಸಿದ ಪತಿಯ ವರ್ತನೆಯಿಂದ ಬೇಸತ್ತ ಪತ್ನಿ ತವರು ಮನೆಯಲ್ಲಿ ಆತ್ಮಹತ್ಯೆ ಮಾಡಿಕೊಂಡ ಘಟನೆ ಮೂಡುಮಾರ್ನಡು ಗ್ರಾಮದಲ್ಲಿ ಭಾನುವಾರ ಮಧ್ಯಾಹ್ನ ನಡೆದಿದೆ.
ಆತ್ಮಹತ್ಯೆ ಮಾಡಿಕೊಂಡ ಮಹಿಳೆಯನ್ನು ಮೂಡುಮಾರ್ನಾಡು ಮಣಿಕಂಠ ನಿವಾಸಿ ಸುಭಾಸ್ ಯಾನೆ ಮಣಿ ಪೂಜಾರಿ ಅವರ ಪತ್ನಿ ಸುಚಿತ್ರಾ(21)ಎಂದು ತಿಳಿದುಬಂದಿದೆ. ಈಕೆ ಕೆಲವು ಸಮಯಗಳಿಂದ ಅನಾರೋಗ್ಯಕ್ಕೊಳಗಾಗಿದ್ದು ಚಿಕಿತ್ಸೆ ಪಡೆಯುತ್ತಿದ್ದರು. ಭಾನುವಾರ ಔಷಧಿ ಖರೀದಿಸಲು ಹಣ ನೀಡುವಂತೆ ಪತಿಯನ್ನು ಕೇಳಿದ್ದರು. ಹಣ ನನ್ನಲ್ಲಿಲ್ಲ, ನಿನ್ನ ತಂದೆ, ತಾಯಿಯನ್ನು ಕೇಳು ಎಂದು ಪತಿ ಗದರಿಸಿ ಪತ್ನಿಗೆ ಹಲ್ಲೆ ನಡೆಸಿದ ಎನ್ನಲಾಗಿದೆ. ಇದರಿಂದ ಬೇಸತ್ತ ಪತ್ನಿ ಮನೆ ಮಂದಿ ಇರುವಾಗಲೇ ಕೋಣೆಗೆ ತೆರಳಿ ಬಾಗಿಲು ಭದ್ರಪಡಿಸಿ ಬಟ್ಟೆಯನ್ನು ಪಕ್ಕಾಸಿಗೆ ಕಟ್ಟಿ ಅದರ ಇನ್ನೊಂದು ತುದಿಯನ್ನು ಕುತ್ತಿಗೆಗೆ ಬಿಗಿದು ಆತ್ಮಹತ್ಯೆ ಮಾಡಿಕೊಂಡಿದ್ದಾರೆ.
ಸುಭಾಸ್ ಮತ್ತು ಸುಚಿತ್ರಾ ಒಂದೇ ಊರಿನವರಾಗಿದ್ದರು. ಮೂರು ವರ್ಷದ ಹಿಂದೆ ಪರಸ್ಪರ ಪ್ರೀತಿಸಿ ಮದುವೆಯಾಗಿದ್ದು ಈ ಮದುವೆಗೆ ಪತಿ ಮನೆಯವರ ವಿರೋಧವಿತ್ತೆನ್ನಲಾಗಿದೆ. ಸುಚಿತ್ರಾ ಹೆಚ್ಚಾಗಿ ತವರು ಮನೆಯಲ್ಲಿ ಉಳಿದುಕೊಂಡಿದ್ದು ಇಲ್ಲೆ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಇವರಿಗೆ ಇಬ್ಬರು ಚಿಕ್ಕ ಮಕ್ಕಳಿದ್ದಾರೆ.
